ADVERTISEMENT

‘ಸಿಇಬಿಐ’ ನಕಲಿ ಸಂಸ್ಥೆ ಹುಟ್ಟುಹಾಕಿ ಹಣ ವಸೂಲಿ

* ಬಿ.ಇ. ಪದವೀಧರ ಸೇರಿ ಇಬ್ಬರ ಬಂಧನ * ₹ 24 ಲಕ್ಷ ನಗದು, ಎರಡು ಕಾರು ಜಪ್ತಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 5:37 IST
Last Updated 23 ನವೆಂಬರ್ 2019, 5:37 IST
ಅಭಿಲಾಷ್
ಅಭಿಲಾಷ್   

ಬೆಂಗಳೂರು:ಕೇಂದ್ರ ಆರ್ಥಿಕ ಅಪರಾಧ ತನಿಖಾ ದಳ (ಸಿಇಬಿಐ) ಹೆಸರಿನಲ್ಲಿ ನಕಲಿ ಸಂಸ್ಥೆಯೊಂದನ್ನು ಹುಟ್ಟುಹಾಕಿ ಉದ್ಯಮಿಗಳನ್ನು ಬೆದರಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಎಚ್‌ಎಎಲ್‌ ಸಮೀಪದಅನ್ನಸಂದ್ರಪಾಳ್ಯದ ನಿವಾಸಿಎಂ.ಪಿ. ಅಭಿಲಾಷ್‌ (34) ಹಾಗೂ ರಾಘವ್ ರೆಡ್ಡಿ ಬಂಧಿತರು. ಅವರಿಬ್ಬರಿಂದ ಸಿಇಬಿಐ ಹೆಸರಿನ ನಕಲಿ ಗುರುತಿನ ಚೀಟಿ, ₹ 24 ಲಕ್ಷ ನಗದು, ಬೆನ್ಜ್‌ ಹಾಗೂ ಆಡಿ ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿಯ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ಕೇಂದ್ರ ಸರ್ಕಾರಕ್ಕೆ ವಂಚಿಸುತ್ತಿರುವ ಬಗ್ಗೆ ಪ್ರಕರಣ ದಾಖಲಿಸುವುದಾಗಿ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್‌ಕುಮಾರ್ ರೆಡ್ಡಿ ಅವರನ್ನು ಆರೋಪಿಗಳು ಬೆದರಿಸಿದ್ದರು. ಪ್ರಕರಣ ದಾಖಲಿಸಬಾರದೆಂದರೆ ₹ 1 ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ತಮ್ಮ ಬಳಿ ಇಲ್ಲವೆಂದು ಹೇಳಿದ್ದ ಉದ್ಯಮಿ ₹ 24 ಲಕ್ಷ ಮಾತ್ರ ಕೊಟ್ಟಿದ್ದರು. ಪುನಃ ಆರೋಪಿಗಳು ಹಣ ಕೇಳಿದ್ದರಿಂದ ನೊಂದ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು’ ಎಂದು ಅವರು ತಿಳಿಸಿದರು.

ADVERTISEMENT

ಕ್ಯಾಸಿನೊ ಸ್ನೇಹಿತರು; ‘ಬಿ.ಇ ಪದವೀಧರನಾದ ಅಭಿಲಾಷ್‌ ಎರಡು ವರ್ಷಗಳ ಹಿಂದೆ ಗೋವಾಕ್ಕೆ ಹೋಗಿದ್ದ. ಅಲ್ಲಿಯೇ ಕ್ಯಾಸಿನೊದಲ್ಲಿ ರಾಘವ್ ರೆಡ್ಡಿ ಪರಿಚಯವಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಇಬ್ಬರೂ ಜೂಜಾಟದಲ್ಲಿ ಹಣ ಕಳೆದುಕೊಂಡಿದ್ದರು.ಅವಾಗಲೇ, ಸಿಬಿಐ ಮಾದರಿಯಲ್ಲೇ ಕೇಂದ್ರ ಆರ್ಥಿಕ ಅಪರಾಧ ತನಿಖಾ ದಳ (ಸಿಇಬಿಐ) ನಕಲಿ ಸಂಸ್ಥೆ ಹುಟ್ಟುಹಾಕಿ ಉದ್ಯಮಿಗಳನ್ನು ಬೆದರಿಸಿ ಹಣ ಸಂಪಾದನೆ ಮಾಡಲು ಅವರಿಬ್ಬರು ಸಂಚು ರೂಪಿಸಿದ್ದರು. ಇದುವರೆಗೂ 10ಕ್ಕೂ ಹೆಚ್ಚು ಮಂದಿಯನ್ನು ಬೆದರಿಸಿ ಹಣ ವಸೂಲಿ ಮಾಡಿರುವ ಮಾಹಿತಿ ಇದೆ’ ಎಂದು ತಿಳಿಸಿದರು.

ಆರ್ಥಿಕ ಸಲಹೆ ನೀಡುವ ನೆಪದಲ್ಲಿ ಪರಿಚಯ: ‘ದೂರುದಾರ ಉದ್ಯಮಿ ವಿಜಯ್‌ಕುಮಾರ್ ಸಾಫ್ಟ್‌ವೇರ್‌ ಕಂಪನಿಯೊಂದನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆ ಬಗ್ಗೆ ತಿಳಿದುಕೊಂಡಿದ್ದ ಆರೋ‍ಪಿ ರಾಘವ್ ರೆಡ್ಡಿ ಉದ್ಯಮಿಯನ್ನು ಸಂಪರ್ಕಿಸಿದ್ದ. ತಾನೊಬ್ಬ ಸಿಇಬಿಐ ವಿಭಾಗದ ಆರ್ಥಿಕ ತಜ್ಞ. ಕಂಪನಿ ತೆರೆಯಲು ಸಲಹೆ ನೀಡುವುದಾಗಿ ಹೇಳಿದ್ದ’ ಎಂದು ಪೊಲೀಸರು ಹೇಳಿದರು.

‘ಹೋಟೆಲೊಂದರಲ್ಲಿ ಉದ್ಯಮಿಯನ್ನು ಭೇಟಿ ಆಗಿದ್ದ ರಾಘವ್, ಅವರ ಹಣ ಸಂಪಾದನೆಯ ಮೂಲಗಳ ಬಗ್ಗೆ ತಿಳಿದುಕೊಂಡಿದ್ದ. ಅಕ್ರಮವಾಗಿ ಹಣ ಸಂಪಾದನೆ ಮಾಡಿ ವರ್ಗಾವಣೆ ಮಾಡಿದ್ದಿರಾ ಎಂದು ಹೇಳಿ ಹೆದರಿಸಿದ್ದ. ಅದೇ ಸಮಯಕ್ಕೆ ಇನ್ನೊಬ್ಬ ಆರೋಪಿ ಅಭಿಲಾಷ್‌ ಸ್ಥಳಕ್ಕೆ ಬಂದಿದ್ದ. ಸಿಇಬಿಐ ಮುಖ್ಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ.’

‘ನೀವು ಸಂಪಾದಿಸಿದ ಹಣವೆಲ್ಲ ಅಕ್ರಮದ್ದು. ಕೇಂದ್ರ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದೀರಾ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ. ಆ ರೀತಿ ಮಾಡಬಾರದು ಎಂದರೆ ₹ 1 ಕೋಟಿ ನೀಡಬೇಕೆಂದು ಆರೋಪಿಗಳು ಬೇಡಿಕೆ ಇಟ್ಟಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.