ADVERTISEMENT

ಮುಂಬಡ್ತಿಗೆ ನಕಲಿ ಪದವಿ: ಹುದ್ದೆಯಿಂದಲೇ ನಾಲ್ವರ ವಜಾ

ಅಸ್ತಿತ್ವದಲ್ಲಿಯೇ ಇಲ್ಲದ ವಿ.ವಿ ಪದವಿ ಪ್ರಮಾಣಪತ್ರ

ರಾಜೇಶ್ ರೈ ಚಟ್ಲ
Published 29 ಅಕ್ಟೋಬರ್ 2022, 20:45 IST
Last Updated 29 ಅಕ್ಟೋಬರ್ 2022, 20:45 IST
ಸಾಂದರ್ಭಿ ಚಿತ್ರ
ಸಾಂದರ್ಭಿ ಚಿತ್ರ   

ಬೆಂಗಳೂರು: ಅಸ್ತಿತ್ವದಲ್ಲಿಯೇ ಇಲ್ಲದ ವಿಶ್ವವಿದ್ಯಾಲಯದ ಹೆಸರಿನಲ್ಲಿ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿ ಮುಂಬಡ್ತಿ ಪಡೆದು ಸಿಕ್ಕಿಬಿದ್ದ ನಾಲ್ವರು ಅಧಿಕಾರಿಗಳನ್ನು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹುದ್ದೆಯಿಂದಲೇ ವಜಾ ಮಾಡಿದೆ.

ಬೀದರ್‌ ಜಿಲ್ಲೆ ಆರೋಗ್ಯ ಇಲಾಖೆಯ ಸಹಾಯಕ ಸಾಂಖ್ಯಿಕ ಅಧಿಕಾರಿ ರಾಜಕುಮಾರ, ಸಾಂಖ್ಯಿಕ ನಿರೀಕ್ಷಕರಾದ ಬೀದರ್ ಜಿಲ್ಲೆ ಔರಾದ್‌ ತಾಲ್ಲೂಕು ಕಚೇರಿಯ ಅಬ್ದುಲ್‌ ರಬ್‌, ಭಾಲ್ಕಿ ತಾಲ್ಲೂಕು ಕಚೇರಿಯ ಬಾಲಾಜಿ ಬಿರಾದಾರ ಮತ್ತು ಮೈಸೂರು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಜೆ. ಪುಟ್ಟರಾಜು ವಜಾಗೊಂಡವರು.

ಅಸ್ತಿತ್ವದಲ್ಲಿಯೇ ಇಲ್ಲದ ಸಿಕ್ಕಿಂನ ‘ಈಸ್ಟರ್ನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಇಂಟಗ್ರೇಟೆಡ್‌ ಲರ್ನಿಂಗ್‌ ಇನ್‌ ಮ್ಯಾನೇಜ್‌ಮೆಂಟ್‌ (ಇಐಐಎಲ್‌ಎಂ) ಯುನಿವರ್ಸಿಟಿ’ ಹೆಸರಿನಲ್ಲಿ ಪದವಿ ಪ್ರಮಾಣಪತ್ರ ಸಲ್ಲಿಸಿ ರಾಜಕುಮಾರ ಅವರು ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಯಿಂದ ಸಹಾಯಕ ನಿರ್ದೇಶಕ ಹುದ್ದೆಗೆ, ಅಬ್ದುಲ್‌ ರಬ್‌ ಮತ್ತು ಬಾಲಾಜಿ ಬಿರಾದಾರ ಅವರು ಸಾಂಖ್ಯಿಕ ನಿರೀಕ್ಷಕ ಹುದ್ದೆಯಿಂದ ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಗೆ ಬಡ್ತಿ ಪಡೆದಿದ್ದರು.

ಜೆ. ಪುಟ್ಟರಾಜು ಅವರು ತಮಿಳುನಾಡಿನ ಅಳಗಪ್ಪ ವಿಶ್ವವಿದ್ಯಾಲಯದ ಪದವಿಪ್ರಮಾಣ ಪತ್ರ ಸಲ್ಲಿಸಿದ್ದರು.

ADVERTISEMENT

ಬಡ್ತಿ ನೀಡಿದ ಬಳಿಕ, ಈ ಅಧಿಕಾರಿಗಳು ಸಲ್ಲಿಸಿದ್ದ ಪದವಿ ಪ್ರಮಾಣಪತ್ರದ ನೈಜತೆಯನ್ನು ಪರಿಶೀಲಿಸಲು ಆಯಾ ವಿಶ್ವವಿದ್ಯಾಲಯಕ್ಕೆ ನಿರ್ದೇಶನಾಲಯವು ಪತ್ರ ಬರೆದಿತ್ತು. ಈಸ್ಟರ್ನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಇಂಟಗ್ರೇಟೆಡ್‌ ಲರ್ನಿಂಗ್‌ ಇನ್‌ ಮ್ಯಾನೇಜ್‌ಮೆಂಟ್‌ ಯುನಿವರ್ಸಿಟಿಗೆ ಯುಜಿಸಿ ಅಂಗೀಕಾರ ಇಲ್ಲ. ಅಲ್ಲದೆ, 2014–15ರಿಂದ ಈ ವಿಶ್ವವಿದ್ಯಾಲಯವು ಮುಚ್ಚಿದೆ’ ಎಂದು ಸಿಕ್ಕಿಂ ಸರ್ಕಾರ ಮಾಹಿತಿ ನೀಡಿತ್ತು. ಜೆ. ಪುಟ್ಟರಾಜು ಅವರು ಸಲ್ಲಿಸಿದ್ದ ಪದವಿ ಪ್ರಮಾಣಪತ್ರ ನಕಲಿ ಎಂದು ಅಳಗಪ್ಪ ವಿಶ್ವವಿದ್ಯಾಲಯ ಮಾಹಿತಿ ನೀಡಿತ್ತು. ಪದವಿ ‌ಪ್ರಮಾಣಪತ್ರ ನಕಲಿ ಎಂದು ಖಚಿತಗೊಳ್ಳುತ್ತಿದ್ದಂತೆ ಈ ನಾಲ್ವರು ಅಧಿಕಾರಿಗಳಿಗೆ ಹಿಂದಿನ ಹುದ್ದೆಗಳಿಗೆ ಹಿಂಬಡ್ತಿ ನೀಡಿದ್ದ ನಿರ್ದೇಶನಾಲಯ, ಇಲಾಖಾ ತನಿಖೆ ಕೈಗೊಂಡಿತ್ತು.

‘ಇಐಐಎಲ್‌ಎಂ ಯುನಿವರ್ಸಿಟಿಯ ಪದವಿ ಪ್ರಮಾಣಪತ್ರ ನಕಲಿ ಆಗಿದ್ದರೆ ಅದರಲ್ಲಿ ನಮ್ಮ ಪಾತ್ರ ಇಲ್ಲ. ಅದಕ್ಕೆ ಬೀದರ್‌ನಲ್ಲಿ ಕಾರ್ಯಾಚರಿಸುತ್ತಿರುವ, ಈ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರವಾದ ಬಾಲಾಜಿ ಇನ್‌ಸ್ಟಿಟ್ಯೂಟ್‌ ಆಫ್‌ ಪ್ರೊಫೆಷನಲ್‌ ಸ್ಟಡೀಸ್‌ ಆನ್‌ ಎಂಬಿಎ ಕಾಲೇಜು ಕಾರಣ. ಇಐಐಎಲ್‌ಎಂ ವಿಶ್ವವಿದ್ಯಾಲಯವನ್ನು 2014–15ರಲ್ಲಿ ಮುಚ್ಚಲಾಗಿದೆ. ಹೀಗಾಗಿ, ಬಡ್ತಿ ಪಡೆಯಲು ಉದ್ದೇಶಪೂರ್ವಕವಾಗಿ ನಕಲಿ ಪ್ರಮಾಣಪತ್ರ ಸೃಷ್ಟಿಸಿಲ್ಲ. ಅಲ್ಲದೆ, ವಿಶ್ವವಿದ್ಯಾಲಯ ಮುಚ್ಚಿದ್ದರಿಂದ ಪ್ರಮಾಣಪತ್ರಗಳ ನೈಜತೆ ಪರಿಶೀಲನೆ ಆಗಿಲ್ಲ’ ಎಂದು ನಿರ್ದೇಶನಾಲಯ ನೀಡಿದ್ದ ನೋಟಿಸ್‌ಗೆ ರಾಜಕುಮಾರ, ಅಬ್ದುಲ್ ರಬ್‌ ಮತ್ತು ಬಾಲಾಜಿ ಬಿರಾದಾರ ಉತ್ತರ ನೀಡಿದ್ದರು. ಆದರೆ, ಜೆ. ಪುಟ್ಟರಾಜು ಅವರು, ‘ನಕಲಿ ಪದವಿ ಪ್ರಮಾಣಪತ್ರ ವಿಚಾರದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಅದೇ ವೇಳೆ ಇಲಾಖಾ ವಿಚಾರಣೆಯೂ ನಡೆಯುತ್ತಿದೆ. ಏಕಕಾಲದಲ್ಲಿ ಎರಡು ವಿಚಾರಣೆ ನಡೆಸಲು ಕಾನೂನಿನಡಿ ಅವಕಾಶ ಇಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಇಲಾಖಾ ತನಿಖೆ ಕೈಬಿಡಬೇಕು’ ಎಂದು ಉತ್ತರಿಸಿದ್ದರು.

‘ಈ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ಇಲಾಖಾ ವಿಚಾರಣೆಯಲ್ಲಿ ಆರೋಪ ಸಾಬೀತಾದರೆ ದಂಡ ವಿಧಿಸಲು ಅವಕಾಶ ಇದೆ. ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮಗಳ ಅನ್ವಯ ಆರೋಪ ಸಾಬೀತಾಗಿರುವುದರಿಂದ ಉದ್ಯೋಗಕ್ಕೆ ಅನರ್ಹರಾಗಿದ್ದಾರೆ’ ಎಂದು ಪರಿಗಣಿಸಿ ನಿರ್ದೇಶನಾಲಯದ ನಿರ್ದೇಶಕ (ಶಿಸ್ತು ಪ್ರಾಧಿಕಾರಿ) ಎನ್‌. ಮಾಧುರಾಮ್‌ ಅವರು ಈ ನಾಲ್ವರನ್ನೂ ಕರ್ತವ್ಯದಿಂದ ವಜಾಗೊಳಿಸಿ ಆದೇಶಿಸಿದ್ದಾರೆ.

‘ಕಠಿಣ ಶಿಕ್ಷೆ ಅನಿವಾರ್ಯ’

ನಕಲಿ ಪದವಿಪ್ರಮಾಣ ಪತ್ರದ ಸಲ್ಲಿಸಿದ್ದ ನಾಲ್ವರು ಅಧಿಕಾರಿಗಳ ಸಮಜಾಯಿಷಿಯನ್ನು ಒಪ್ಪದ ಇಲಾಖಾ ವಿಚಾರಣಾಧಿಕಾರಿ, ‘ಸರ್ಕಾರಿ ನೌಕರನೊಬ್ಬ ನಕಲಿ ಪದವಿ ಪ್ರಮಾಣಪತ್ರ ನೀಡಿ ಉನ್ನತ ಹುದ್ದೆಗೆ ಬಡ್ತಿ ಹೊಂದುವುದು, ಸರ್ಕಾರಿ ನೌಕರನಿಗೆ ಸಲ್ಲದ ಗಂಭೀರ ಸ್ವರೂಪದ ವರ್ತನೆಯಾಗಿದೆ. ‌ಇಂಥ ನೌಕರ ಅದೇ ನಕಲಿ ಪದವಿ ಪ್ರಮಾಣಪತ್ರದ ಆಧಾರದಲ್ಲಿ ‘ಬಿ’, ‘ಎ’ ವೃಂದ ಹುದ್ದೆಗೆ ಬಡ್ತಿ ಪಡೆದು, ಕಚೇರಿ ಮುಖ್ಯಸ್ಥನಾದರೆ ತನ್ನ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬಲ್ಲ ಎಂದು ಊಹಿಸಲೂ ಅಸಾಧ್ಯ. ಆದ್ದರಿಂದ ಅವರಿಗೆ ಕಠಿಣ ಶಿಕ್ಷೆ ಅನಿವಾರ್ಯವಾಗಿದೆ’ ಎಂದು ವರದಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.