ವಕೀಲ
ಬೆಂಗಳೂರು: ‘ರಾಜ್ಯದ ವಿವಿಧೆಡೆ ನಕಲಿ ವಕೀಲರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿರುವ ‘ಕರ್ನಾಟಕ ರಾಜ್ಯ ವಕೀಲರ ಪರಿಷತ್’ (ಕೆಎಸ್‌ಬಿಸಿ), ‘ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಲಿದೆ’ ಎಂದು ಎಚ್ಚರಿಸಿದೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಪರಿಷತ್ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ್, ‘ನಕಲಿ ವಕೀಲರ ಹಾವಳಿಯಿಂದ ವಕೀಲ ಸಮುದಾಯಕ್ಕೆ ಕಳಂಕ ತಗುಲಿದೆ. ಈ ನಿಟ್ಟಿನಲ್ಲಿ ರಾಜ್ಯ ವಕೀಲರ ಪರಿಷತ್‌ಗೆ ಸುಳ್ಳು ಮಾಹಿತಿ ನೀಡಿ, ಖೊಟ್ಟಿ ದಾಖಲೆಗಳನ್ನು ಸಲ್ಲಿಸಿ ನೋಂದಣಿಯಾದವರು ಸ್ವತಃ ತಪ್ಪು ಒಪ್ಪಿಕೊಂಡು ಸನ್ನದು ವಾಪಸು ನೀಡಬೇಕು. ಇಲ್ಲವಾದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
‘ಹೊರ ರಾಜ್ಯಗಳಲ್ಲಿ ಕಾನೂನು ಪದವಿ (ಎಲ್‌ಎಲ್‌ಬಿ) ಪಡೆದಿದ್ದೇವೆ ಎಂದು ಹೇಳಿಕೊಂಡು ಕರ್ನಾಟಕದಲ್ಲಿ ವಕೀಲಿಕೆ ಆರಂಭಿಸಲು ಸನ್ನದು ಕೋರಿ ರಾಜ್ಯ ವಕೀಲರ ಪರಿಷತ್‌ಗೆ ಬರುವ ಅನೇಕರಿಗೆ ತಾವು ವ್ಯಾಸಂಗ ಮಾಡಿದ ವಿಶ್ವವಿದ್ಯಾಲಯ ಅಥವಾ ಕಾಲೇಜಿನ ವಿಳಾಸವೇ ಅರಿವಿಲ್ಲ. ಕಳೆದ ಐದು ತಿಂಗಳಲ್ಲಿ ಇಂತಹ 300ರಿಂದ 400 ನಕಲಿ ಅಭ್ಯರ್ಥಿಗಳಿಗೆ ಸನ್ನದು ನೀಡದೆ ವಾಪಸ್ ಕಳುಹಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಸಂದರ್ಶನಕ್ಕೂ ಮುನ್ನ ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ವಿತರಿಸಿರುವ ಆಯಾ ವಿಶ್ವವಿದ್ಯಾಲಯಗಳಿಗೆ ಪರಿಶೀಲನೆಗೆ ಕಳುಹಿಸಲಾಗುವುದು. ಇವುಗಳ ಸಾಚಾತನದ ಬಗ್ಗೆ ಆಯಾ ವಿಶ್ವವಿದ್ಯಾಲಯಗಳು ಪರಿಷತ್‌ಗೆ ಪತ್ರ ಬರೆಯುತ್ತವೆ. ಈ ಮಾಹಿತಿ ಬಂದ ನಂತರ ನಕಲಿ ಅಂಕಪಟ್ಟಿ ತಂದವರಿಗೆ ಸನ್ನದು ನಿರಾಕರಿಸಿ ಹಿಂಬರಹ ನೀಡಲಾಗುತ್ತಿದೆ. ಅಗತ್ಯವಿದ್ದಲ್ಲಿ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು’ ಎಂದು ಮಿಟ್ಟಲಕೋಡ್ ವಿವರಿಸಿದ್ದಾರೆ.
‘ನಕಲಿ ಅಂಕಪಟ್ಟಿ ಹೊಂದಿದ ಒಂದು ಸಾವಿರಕ್ಕೂ ಹೆಚ್ಚು ಜನ ಸನ್ನದು ಪಡೆಯಲು ಅರ್ಜಿ ಸಲ್ಲಿಸಿರುವುದು ಪತ್ತೆಯಾಗಿದೆ. ಇಂಥವರು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಪಂಜಾಬ್-ಹರಿಯಾಣ ರಾಜ್ಯಗಳ ಕಾನೂನು ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಕಾನೂನು ಪದವಿಯ ನಕಲಿ ಅಂಕಪಟ್ಟಿ ಪಡೆದು, ಕರ್ನಾಟಕದಲ್ಲಿ ವಕೀಲಿಕೆ ಆರಂಭಿಸಲು ಸನ್ನದು ಕೋರಿ ರಾಜ್ಯ ವಕೀಲರ ಪರಿಷತ್‌ಗೆ ಅರ್ಜಿ ಸಲ್ಲಿಸಿದ್ದಾರೆ’ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್
ಕಾಲೇಜಿಗೆ ಹೋಗದೆ ಅಗತ್ಯ ಹಾಜರಿ ಇಲ್ಲದೆ ಹಣ ಕಟ್ಟಿ ನಕಲು ಪ್ರಮಾಣ ಪತ್ರ ಪಡೆದು ಬರುತ್ತಿರುವವರೇ ಹೆಚ್ಚಾಗಿ ನಕಲಿ ವಕೀಲರ ಪಟ್ಟಿಯಲ್ಲಿದ್ದಾರೆ. ಇಂಥವರು ಮತ್ತೊಬ್ಬ ನೋಂದಾಯಿತ ವಕೀಲರ ಸಂಖ್ಯೆಯನ್ನು ಪಡೆದು ಅವರ ಹೆಸರಿನಲ್ಲಿ ವಕಾಲತ್ ನಾಮೆ ಸಲ್ಲಿಸಿ ವಕೀಲಿಕೆ ನಡೆಸುತ್ತಿರುವುದೂ ಕಂಡುಬಂದಿದೆ. ಇದನ್ನು ನಿಯಂತ್ರಿಸಲು ಸೂಕ್ತ ಕ್ರಿಯಾ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ.ಎಂ.ದೇವರಾಜ, ಸನ್ನದು ದಾಖಲಾತಿ ಸಮಿತಿ ಮಾಜಿ ಅಧ್ಯಕ್ಷ
ಬಿಸಿಐ (ಭಾರತೀಯ ವಕೀಲರ ಪರಿಷತ್) ನಿಯಮಗಳಿಗೆ ಅನುಸಾರವಾಗಿ ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಿಂದ ಎಲ್‌ಎಲ್‌ಬಿ ಪದವಿ ಪ್ರಮಾಣ ಪತ್ರ ಪಡೆದುಕೊಂಡಿದ್ದರೆ ಅಂಥವರು ದೇಶದ ಯಾವುದೇ ರಾಜ್ಯದಲ್ಲಿ ಸ್ಥಳೀಯ ವಿಳಾಸದೊಂದಿಗೆ ಸನ್ನದು ನೋಂದಾಯಿಸಬಹುದು. ಈ ಕುರಿತಂತೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಹಲವು ಪೂರ್ವನಿರ್ಣಯಗಳೂ ಇವೆ. ಹೀಗಾಗಿ ಸನ್ನದು ದಾಖಲು ಮಾಡಿಕೊಳ್ಳುವುದನ್ನು ತಿರಸ್ಕರಿಲು ಆಗದು. ಆದಾಗ್ಯೂ ನಕಲಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಮ ಅನಿವಾರ್ಯ.ಎಸ್.ಹರೀಶ್, ಸನ್ನದು ದಾಖಲಾತಿ ಸಮಿತಿ ಮಾಜಿ ಸದಸ್ಯ
‘ಈ ಹಿಂದೆ ನಕಲಿ ಅಂಕಪಟ್ಟಿ ಸಲ್ಲಿಸಿ ಸನ್ನದು ಪಡೆದವರ ಪತ್ತೆ ಕಾರ್ಯಕ್ಕೂ ಪರಿಷತ್ ಮುಂದಾಗಿದೆ. ಅಂಥವರ ಅಂಕಪಟ್ಟಿಗಳನ್ನು ಅವರು ವ್ಯಾಸಂಗ ಮಾಡಿರುವ ಕಾಲೇಜು ವಿಶ್ವವಿದ್ಯಾಲಯಗಳ ಪರಿಶೀಲನೆಗೆ ಕಳುಹಿಸಿ ಅವು ಅಸಲಿಯೋ ಅಥವಾ ನಕಲಿಯೋ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಒಂದು ವೇಳೆ ನಕಲಿ ಅಂಕಪಟ್ಟಿ ಪಡೆದಿದ್ದರೆ ಅಂಥವರು ಸ್ವಯಂ ಪ್ರೇರಿತವಾಗಿ ಸನ್ನದು ಹಿಂದಿರುಗಿಸಲು 2025ರ ಆಗಸ್ಟ್ 30ರವರೆಗೆ ಗಡುವು ವಿಧಿಸಲಾಗಿದೆ. ಅಷ್ಟರೊಳಗೆ ಹಿಂದಿರುಗಿಸದೇ ಹೋದರೆ ಎಫ್‌ಐಆರ್ ದಾಖಲಿಸಲು ಮತ್ತು ಸನ್ನದು ರದ್ದುಪಡಿಸಲು ಪರಿಷತ್ ನಿರ್ಧರಿಸಿದೆ’ ಎಂದು ಮಿಟ್ಟಲಕೋಡ್ ತಿಳಿಸಿದ್ದಾರೆ.
‘ಕೆಎಸ್‌ಬಿಸಿ ಆಡಳಿತ ಮಂಡಳಿಯ ನಿಗದಿತ ಐದು ವರ್ಷಗಳ ಅವಧಿ 2023ರ ಜೂನ್‌ನಲ್ಲೇ ಪೂರ್ಣಗೊಂಡಿದ್ದು ಹಾಲಿ ಆಡಳಿತ ಮಂಡಳಿಯನ್ನು ಪದಚ್ಯುತಗೊಳಿಸಿ ಹೊಸದಾಗಿ ಚುನಾವಣೆ ನಡೆಸುವ ಬಗ್ಗೆ ಪ್ರತಿಕ್ರಿಯೆ ಕೊಡಿ’ ಎಂದು ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಹೈಕೋರ್ಟ್ ಇತ್ತೀಚೆಗಷ್ಟೇ ನಿರ್ದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಸಂಬಂಧ ಹೈಕೋರ್ಟ್ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯ ಹಂತದಲ್ಲಿದೆ. ‘ವಕೀಲರ ಕಾಯ್ದೆ–1961ರ ಕಲಂ 8 ರ ಅನ್ವಯ ಪರಿಷತ್‌ನ ಅವಧಿ ಮುಗಿಯುವ ಮುನ್ನವೇ ರಾಜ್ಯ ವಕೀಲರ ಪರಿಷತ್‌ಗೆ ಚುನಾವಣೆ ನಡೆಸದೇ ಹೋದರೆ ಬಿಸಿಐ ವಿಶೇಷ ಸಮಿತಿ ರಚಿಸಿ ಅದಕ್ಕೆ ಅಧಿಕಾರ ನೀಡಬೇಕು ಮತ್ತು ಆದಷ್ಟು ಶೀಘ್ರ ಪರಿಷತ್‌ಗೆ ಚುನಾವಣೆ ನಡೆಸಬೇಕಾಗುತ್ತದೆ’ ಎಂದು ನ್ಯಾಯಪೀಠ ಮೌಖಿಕವಾಗಿ ತಿಳಿಸಿದೆ. ಸದ್ಯ ಎಸ್.ಎಸ್.ಮಿಟ್ಟಲಕೋಡ್ ಬಿಸಿಐನಿಂದ ನಾಮನಿರ್ದೇಶಿತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎಂ.ದೇವರಾಜ, ಎಸ್.ಎಸ್.ಮಿಟ್ಟಲಕೋಡ್, ಎಸ್.ಹರೀಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.