ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ನಕಲಿ ಪತ್ರ ಹಂಚಿಕೆ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 15:36 IST
Last Updated 13 ಫೆಬ್ರುವರಿ 2026, 15:36 IST
   

ಬೆಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯೊಬ್ಬರನ್ನು (ಡಿಎಚ್‌ಒ) ಅಬಕಾರಿ ಉಪ ಆಯುಕ್ತರ ಹುದ್ದೆಗೆ ನಿಯೋಜನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ನಕಲಿ ಪತ್ರದ ವಿರುದ್ಧ ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮುಖ್ಯಮಂತ್ರಿ ಅವರ ಅಧಿಕೃತ ಲೆಟರ್‌ಹೆಡ್‌ ರೀತಿ ಕಾಣುವ ಪತ್ರದಲ್ಲಿ ಮಂಡ್ಯ ಜಿಲ್ಲೆಯ ಡಿಎಚ್‌ಒ ಡಾ.ಕೆ.ಮೋಹನ್‌ ಅವರನ್ನು ಅಬಕಾರಿ ಇಲಾಖೆಯ ಮೈಸೂರು ಗ್ರಾಮಾಂತರ ವಿಭಾಗದ ಉಪ ಆಯಕ್ತರ ಹುದ್ದೆಗೆ ನಿಯೋಜನೆ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಪತ್ರದಲ್ಲಿ 2024 ಇಸವಿ ಇದ್ದು, ದಿನಾಂಕ, ತಿಂಗಳು ನಮೂದಿಸಿಲ್ಲ. ಆದರೆ, ಸಿದ್ದರಾಮಯ್ಯ ಅವರ ಸಹಿಯ ಹೋಲಿಕೆ ಇರುವ ಸಹಿ ಇದೆ. 

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಈ ಪತ್ರವನ್ನು ಬಳಸಿಕೊಂಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಆಶೋಕ, ಶಾಸಕರಾದ ಸುರೇಶ್‌ಕುಮಾರ್‌, ವಿ.ಸುನಿಲ್‌ಕುಮಾರ್‌ ಅವರು ಸರ್ಕಾರ ಹಾಗೂ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.

ADVERTISEMENT

‘ಅಬಕಾರಿ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ಕಿಕ್ ಬ್ಯಾಕ್ ದಂಧೆಯ ಹಿಂದೆ ಇಂಥ ಅವೈಜ್ಞಾನಿಕ ಹಾಗೂ ನಿಯಮ ಬಾಹಿರ ವರ್ಗಾವಣೆಯ ಸೂಚನೆಗಳು ಕೆಲಸ ಮಾಡಿರುವ ಸಾಧ್ಯತೆಗಳು ದಟ್ಟವಾಗಿದೆ. ಮುಖ್ಯಮಂತ್ರಿಗಳೇ ಆಯಕಟ್ಟಿನ ಇಲಾಖೆಗೆ ಮಾತ್ರ ನೀವು ಈ ರೀತಿ ಎರವಲು ಸೇವೆಯ ಶಿಫಾರಸು ಮಾಡುತ್ತೀರಾ ಅಥವಾ ನಿಮ್ಮಿಂದ ಮಾಡಿಸುತ್ತಾರಾ’ ಎಂದು ಪ್ರಶ್ನಿಸಿದ್ದಾರೆ.

ನಕಲಿ ಪತ್ರದ ವಿರುದ್ಧ ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ಅರುಣ್‌ ಫುರ್ಟಾಡೊ ಅವರು ವಿಧಾನಸೌಧದ ಠಾಣೆಗೆ ದೂರು ನೀಡಿದ್ದು, ‘ಟಿಪ್ಪಣಿಯು ಮುಖ್ಯಮಂತ್ರಿ ಅವರ ಸಚಿವಾಲಯದ ಇ–ತಂತ್ರಾಂಶದಲ್ಲಿ ನಮೂದಿಸಿಲ್ಲ. ಯಾವುದೇ ಇಲಾಖೆಗೆ ನೀಡಿಲ್ಲ. ಅಂತಹ ನಿಯೋಜನೆಯೂ ನಡೆದಿಲ್ಲ. ಆದರೂ, ಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ದುರುದ್ದೇಶದಿಂದ ಇಂತಹ ಕೃತ್ಯ ಎಸಗಲಾಗಿದೆ. ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆ ಮಾಡಬೇಕು. ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.