ADVERTISEMENT

ನೋಟು ಮುದ್ರಿಸುತ್ತಿದ್ದ ಡ್ರೈವರ್, ಕಂಡಕ್ಟರ್!

₹ 81.30 ಲಕ್ಷ ಮುಖಬೆಲೆ ಖೋಟಾ ನೋಟುಗಳ ಜಪ್ತಿ

​ಪ್ರಜಾವಾಣಿ ವಾರ್ತೆ
Published 3 ಮೇ 2019, 20:12 IST
Last Updated 3 ಮೇ 2019, 20:12 IST
ಸೋಮನಗೌಡ, ಕಿರಣ್, ನಂಜೇಗೌಡ
ಸೋಮನಗೌಡ, ಕಿರಣ್, ನಂಜೇಗೌಡ   

ಬೆಂಗಳೂರು: ₹ 500 ಹಾಗೂ ₹ 2 ಸಾವಿರ ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿದ್ದ ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕ, ಅವುಗಳನ್ನು ಚಲಾವಣೆ ಮಾಡುವ ಯತ್ನದಲ್ಲಿ ಯಲಹಂಕ ಪೊಲೀಸರಿಗೆ ಸಿಕ್ಕಿಬಿದ್ದು ಕಂಬಿ ಹಿಂದೆ ಸೇರಿದ್ದಾರೆ.

ಬಿಎಂಟಿಸಿಯ ಜಯನಗರ ಡಿಪೊ ನಿರ್ವಾಹಕ ಸೋಮನಗೌಡ ಅಲಿಯಾಸ್ ಸೋಮ (38) ಹಾಗೂ ಚಾಲಕ ನಂಜೇಗೌಡ ಅಲಿಯಾಸ್ ಸ್ವಾಮಿ (32) ಬಂಧಿತರು. ಕೃತ್ಯಕ್ಕೆ ಸಹಕರಿಸಿದ್ದಕ್ಕೆ ಅವರ ಜತೆ ಚನ್ನರಾಯಪಟ್ಟಣದ ಸ್ಟುಡಿಯೊ ಛಾಯಾಗ್ರಾಹಕ ಕಿರಣ್ ಕುಮಾರ್ (24) ಕೂಡ ಜೈಲು ಸೇರಿದ್ದಾನೆ. ಬಂಧಿತರಿಂದ ₹ 81.30 ಲಕ್ಷ ಮುಖಬೆಲೆಯ (ಮೌಲ್ಯ) ಖೋಟಾ ನೋಟುಗಳನ್ನು ಜಪ್ತಿ ಮಾಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ದಂಧೆಯ ರೂವಾರಿ ರಾಮಕೃಷ್ಣ ಎಂಬಾತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಹಣದ ದಾಹ: ರಾಯಚೂರಿನ ಸೋಮನಗೌಡನಿಗೆ, ತನ್ನ ಸ್ನೇಹಿತ ಹುಸೇನ್ ಮೂಲಕ ವರ್ಷದ ಹಿಂದೆ ರಾಮಕೃಷ್ಣನ ಪರಿಚಯವಾಗಿತ್ತು. ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ರಾಮಕೃಷ್ಣ, ಹಣ ದುಪ್ಪಟ್ಟು (ಡಬ್ಲಿಂಗ್) ಮಾಡಿಕೊಡುವುದಾಗಿಯೂ ನಂಬಿಸಿ ಜನರಿಗೆ ವಂಚಿಸುತ್ತಿದ್ದ.

ADVERTISEMENT

ಅಂತೆಯೇ ಸೋಮನಗೌಡನಿಗೂ, ‘ನೀವು ಈಗ ನನಗೆ ಎಷ್ಟು ದುಡ್ಡು ಕೊಡ್ತೀರೋ, ತಿಂಗಳ ಬಳಿಕ ಅದರ ದುಪ್ಪಟ್ಟು ಹಣವನ್ನು ನಿಮಗೆ ನೀಡ್ತೀನಿ’ ಎಂದು ಹೇಳಿದ್ದ. ಆ ಮಾತು ನಂಬಿ ಆತ ₹ 1 ಲಕ್ಷ ಕೊಟ್ಟಿದ್ದ. ಆರಂಭದಲ್ಲಿ ವಿಶ್ವಾಸ ಗಿಟ್ಟಿಸಿಕೊಳ್ಳಲು ರಾಮಕೃಷ್ಣ ತಿಂಗಳ ಬಳಿಕ ₹ 2 ಲಕ್ಷವನ್ನು ವಾಪಸ್ ಕೊಟ್ಟಿದ್ದ.

ಸುಲಭವಾಗಿ ಲಕ್ಷ ರೂಪಾಯಿ ಸಿಕ್ಕಿದ್ದರಿಂದ ಹಣದ ದಾಹಕ್ಕೆ ಬಿದ್ದ ಸೋಮನಗೌಡ, ತನ್ನ ಜಮೀನನ್ನೇ ಬೇರೆಯವರಿಗೆ ಅಡವಿಟ್ಟು ₹ 7.5 ಲಕ್ಷ ಹೊಂದಿಸಿದ್ದ. ಆ ಹಣವನ್ನು ರಾಮಕೃಷ್ಣನಿಗೆ ಕೊಟ್ಟು, ದುಪ್ಪಟ್ಟು ಮಾಡಿಕೊಡುವಂತೆ ಕೋರಿದ್ದ. ಆ ದುಡ್ಡು ಪಡೆದುಕೊಂಡ ಬಳಿಕ, ಆತ ವರಸೆ ಬದಲಿಸಿ ಸತಾಯಿಸಲು ಪ್ರಾರಂಭಿಸಿದ್ದ.

ಆರು ತಿಂಗಳಾದರೂ ದುಡ್ಡು ಬಾರದಿದ್ದಾಗ, ‘ಹಣ ಕೊಡದಿದ್ದರೆ ಆತ್ಮಹತ್ಯೆ ಮಾಡ್ಕೋತೀನಿ’ ಎಂದು ಸೋಮನಗೌಡ ಬೆದರಿಸಲು ಶುರು ಮಾಡಿದ್ದ. ಆಗ ರಾಮಕೃಷ್ಣ, ‘ಅಷ್ಟಕ್ಕೆಲ್ಲ ಸಾಯೋ ಮಾತೇಕೆ ಆಡ್ತೀರಾ? ಖೋಟಾ ನೋಟು ಪ್ರಿಂಟ್ ಮಾಡೋದನ್ನ ನಿಮ್ಗೆ ಹೇಳಿಕೊಡ್ತೀನಿ. ಎಷ್ಟ್ ಬೇಕೋ ಅಷ್ಟು ಹಣ ಮಾಡ್ಕೊಳಿ’ ಎಂದು ನೋಟು ಮುದ್ರಿಸುವ ತಂತ್ರವನ್ನು ಸೋಮನಗೌಡನಿಗೂ ಹೇಳಿಕೊಟ್ಟಿದ್ದ.

ಪ್ರತ್ಯೇಕ ಮನೆ ಮಾಡಿದ: ಆನಂತರ ಕಂಪ್ಯೂಟರ್ ಹಾಗೂ ಕಲರ್ ಪ್ರಿಂಟರ್ ಖರೀದಿಸಿದ ಸೋಮನಗೌಡ, ನೋಟು ಮುದ್ರಿಸುವುದಕ್ಕಾಗಿಯೇ ಗಾರ್ವೇಬಾವಿಪಾಳ್ಯದಲ್ಲಿ ಪ್ರತ್ಯೇಕ ಮನೆ ಮಾಡಿದ್ದ. ಒಬ್ಬನಿಂದಲೇ ಈ ಕೆಲಸ ಸಾಧ್ಯವಿಲ್ಲವೆಂದು, ತನ್ನದೇ ಡಿಪೊದ ಚಾಲಕ ನಂಜೇಗೌಡನ ನೆರವು ಕೇಳಿದ್ದ. ರಾತ್ರೋರಾತ್ರಿ ಶ್ರೀಮಂತನಾಗಬಹುದೆಂದು ಆತನೂ ಕೃತ್ಯಕ್ಕೆ ಕೈಜೋಡಿಸಿದ್ದ. ಅಲ್ಲದೆ, ಫೋಟೋಶಾಪ್ ಮಾಡಲು ಬೇಕಾಗುತ್ತದೆ ಎಂದು ನಂಜೇಗೌಡನೇ ತನ್ನೂರಿನ ಸ್ಟುಡಿಯೊ ಛಾಯಾಗ್ರಾಹಕ ಕಿರಣ್‌ನನ್ನೂ ಕರೆತಂದಿದ್ದ.

ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ಆರೋಪಿಗಳು, ರಾತ್ರಿ ವೇಳೆ ಆ ಮನೆ ಸೇರಿ ನೋಟು ತಯಾರಿಕೆಯ ಕೆಲಸದಲ್ಲಿ ತೊಡಗುತ್ತಿದ್ದರು. ಒಟ್ಟು ₹ 81.30 ಲಕ್ಷ ಮೌಲ್ಯದ ಖೋಟಾ ನೋಟುಗಳ ಪ್ರಿಂಟ್‌ ಔಟ್ ತೆಗೆದ ಅವರು, ರಾಮಕೃಷ್ಣನ ಸೂಚನೆಯಂತೆ ಅದನ್ನು ಚಲಾವಣೆ ಮಾಡಲು ಏ.26ರಂದು ಕೋಗಿಲು ಕ್ರಾಸ್ ಬಳಿ ತೆರಳಿದ್ದಾಗ ಯಲಹಂಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

*
ಸೋಮನಗೌಡ ಹಾಗೂ ನಂಜೇಗೌಡನನ್ನು ಸೇವೆಯಿಂದ ಅಮಾನತು ಮಾಡಿ, ಇಲಾಖಾ ವಿಚಾರಣೆಗೆ ಕ್ರಮ ಕೈಗೊಳ್ಳಲಾಗಿದೆ.
-ಬಿಎಂಟಿಸಿ ಪ್ರಕಟಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.