ಬೆಳಗಾವಿ: ಅತಿವೃಷ್ಟಿಯಿಂದ ಹಾನಿಗೊಳಗಾದ ವಾಣಿಜ್ಯ ಕಟ್ಟಡಕ್ಕೆ ಮನೆಹಾನಿ ಎಂದು ತಪ್ಪು ವರದಿ ನೀಡಿದ ಆರೋಪದ ಮೇಲೆ ಕಂದಾಯ ಇಲಾಖೆ, ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯ ನಾಲ್ಕು ಜನ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅನಗೋಳದ ಗ್ರಾಮ ಲೆಕ್ಕಿಗ ಎಸ್.ಜಿ.ಜೋಗಳೇಕರ, ಕಂದಾಯ ನಿರೀಕ್ಷಕ ಜೆ.ಕೆ.ಪಕಾಲೆ, ಮಹಾನಗರ ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕ ಹಾಗೂ ಪ್ರಭಾರಿ ಕಂದಾಯ ನಿರೀಕ್ಷಕ ಸಿ.ಐ ಪಾಟೀಲ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಎಸ್.ಸಿ.ಮಠಪತಿ ಅವರನ್ನು ಅಮಾನತುಗೊಳಿಸಲಾಗಿದೆ.
ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ಅನಗೋಳದ ಅರುಣ ಎನ್. ಗಾವಡೆ ಎಂಬುವರ ಗ್ಯಾರೇಜ್ ಕಟ್ಟಡವನ್ನು ವಾಸದ ಮನೆ ಎಂದು ಅಧಿಕಾರಿಗಳು ವರದಿ ನೀಡಿದ್ದರಿಂದ ಸರ್ಕಾರದಿಂದ ಅವರ ಖಾತೆಗೆ ಮೊದಲ ಕಂತಿನ ಪರಿಹಾರದ ಹಣ₹ 1 ಲಕ್ಷ ಜಮೆ ಮಾಡಲಾಗಿತ್ತು.
ತಪ್ಪು ವರದಿ ನೀಡಿದ್ದರಿಂದ ಅನರ್ಹರಿಗೆ ಪರಿಹಾರದ ಮೊತ್ತ ಜಮೆಯಾಗಿರುತ್ತದೆ. ಇದಕ್ಕೆ ಕಾರಣಕರ್ತರಾದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.