ADVERTISEMENT

ಭಾರತ ಬಂದ್‌: ರಾಜ್ಯದ ಹಲವು ಸಂಘಟನೆಗಳ ನೈತಿಕ ಬೆಂಬಲ, ರೈತರ ರ‍್ಯಾಲಿ

ಇಂದಿನ ಬಂದ್‌ಗೆ ನೈತಿಕ ಬೆಂಬಲ ಘೋಷಿಸಿರುವ ಬಹುತೇಕ ಸಂಘಟನೆಗಳು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 20:52 IST
Last Updated 26 ಸೆಪ್ಟೆಂಬರ್ 2021, 20:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ (ಸೆ.27) ಕರೆ ನೀಡಿರುವ ‘ಭಾರತ್ ಬಂದ್‌’ಗೆ ರಾಜ್ಯದಲ್ಲಿ ಹಲವು ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿದ್ದು, ರೈತ ಸಂಘಟನೆಗಳು ರಾಜ್ಯದಾದ್ಯಂತ ಬೃಹತ್‌ ಪ್ರತಿಭಟನಾ ರ‍್ಯಾಲಿಗಳನ್ನು ಆಯೋಜಿಸಿವೆ.

ಬೆಂಗಳೂರಿನಲ್ಲಿ ವಿವಿಧೆಡೆ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರಗಳು ಹಾಗೂ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲೂ ರ‍್ಯಾಲಿಗಳನ್ನು ಆಯೋಜಿಸಲು ಉದ್ದೇಶಿಸಿವೆ.ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ರಾಜ್ಯದಲ್ಲಿ ಶಾಲಾ–ಕಾಲೇಜುಗಳು, ಅಂಗಡಿ ಮುಂಗಟ್ಟು, ಸಾರಿಗೆ ಸೇವೆ ಸೇರಿದಂತೆ ಎಲ್ಲ ಅಗತ್ಯ ಸೇವೆಗಳೂ ಎಂದಿನಂತೇ ಇರಲಿವೆ.

ADVERTISEMENT

‘ಬೆಂಗಳೂರು ನಗರದಲ್ಲಿ ಕೆ.ಆರ್‌. ಪುರದಿಂದ ಟೌನ್‌ಹಾಲ್‌ವರೆಗೆ, ಶಿವಾಜಿನಗರದಿಂದ ಟೌನ್‌ಹಾಲ್‌ವರೆಗೆ, ಸುಮನಹಳ್ಳಿಯಿಂದ ಟೌನ್‌ಹಾಲ್‌ವರೆಗೆ ರೈತರ ರ‍್ಯಾಲಿಗಳು ನಡೆಯಲಿವೆ. ನಂತರ, ಬೆಳಿಗ್ಗೆ 11 ಗಂಟೆಗೆ ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್‌ ವೃತ್ತದವರೆಗೆ ಬೃಹತ್‌ ರ‍್ಯಾಲಿ ನಡೆಯಲಿದೆ’ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದಾರೆ.

‘ಸುಮಾರು 10 ಸಾವಿರ ರೈತರು, ನಾಗರಿಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕೋವಿಡ್‌–19ನಿಂದ ಆಟೋ ಚಾಲಕರು ಸೇರಿದಂತೆ ಜನಸಾಮಾನ್ಯರು ಸಂಕಷ್ಟದಲ್ಲಿರುವುದು ನಿಜ. ಆದರೆ, ಕೇಂದ್ರ ಸರ್ಕಾರದ ನೀತಿಗಳು ಜನ ವಿರೋಧಿಯಾಗಿವೆ. ಕೃಷಿ ವಲಯವೂ ಇದಕ್ಕೆ ಹೊರತಾಗಿಲ್ಲ. ಆದರೆ, ರೈತರಿಂದ ಮಾತ್ರ ಪ್ರತಿರೋಧ ವ್ಯಕ್ತವಾಗಿದೆ’ ಎಂದು ತಿಳಿಸಿದ್ದಾರೆ.

’ಸರ್ಕಾರ ಬಂದ್‌ ವಿಫಲಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಖಾಲಿ ಬಸ್‌ಗಳನ್ನು ಸಹ ಓಡಿಸಬಹುದು. ಆದರೂ, ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಆದರೆ, ಹೋಟೆಲ್‌ಗಳ ಸಂಘ, ಆಟೋ ರಿಕ್ಷಾ ಚಾಲಕರ ಸಂಘ, ಒಲಾ–ಉಬರ್‌ ಚಾಲಕರು ಮತ್ತು ಮಾಲೀಕರ ಸಂಘ, ಸಾರಿಗೆ ನೌಕರರ ಕೂಟ ಸೇರಿದಂತೆ ಹಲವು ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಿಸಿದ್ದು, ಬಂದ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿವೆ. ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳು ಎಂದಿನಂತೆ ಸಂಚರಿಸಲಿವೆ.

ರಾಜ್ಯದಾದ್ಯಂತ ಬಿಗಿ ಭದ್ರತೆ ಕೈಗೊಳ್ಳುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು ಎಲ್ಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮತ್ತು ಕಮಿಷನರ್‌ಗಳಿಗೆ ಸೂಚಿಸಿದ್ದಾರೆ.

ಕೆಲವು ರಾಜ್ಯಗಳಲ್ಲಿ ಪರಿಣಾಮ?

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್‌ ಮೋರ್ಚಾ ಸೋಮವಾರ ಕರೆ ನೀಡಿರುವ ಭಾರತ್‌ ಬಂದ್‌ಗೆ ಕೆಲ ರಾಜ್ಯ ಸರ್ಕಾರಗಳು ಹಾಗೂ ಕಾಂಗ್ರೆಸ್‌ ಸೇರಿದಂತೆ ದೇಶದ ವಿವಿಧ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.

ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳು ಬಂದ್‌ಗೆ ಪೂರ್ಣ ಪ್ರಮಾಣದ ಬೆಂಬಲ ಸೂಚಿಸಿವೆ. ಆಂಧ್ರ ಪ್ರದೇಶ ಸರ್ಕಾರವು ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯಾಹ್ನದವರೆಗೆ
ಎಪಿಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

ಎಎಪಿ, ವೈಎಸ್‌ಆರ್‌ ಕಾಂಗ್ರೆಸ್‌, ಡಿಎಂಕೆ, ತೆಲುಗು ದೇಶಂ, ಎಡಪಕ್ಷಗಳು, ಬಿಎಸ್‌ಪಿ ಸೇರಿದಂತೆ ಇತರ ಪಕ್ಷಗಳು ಬಂದ್‌ಗೆ ಬೆಂಬಲ ನೀಡಿವೆ.

ಏನೇನು ಇರಲಿವೆ?

l ಆಟೋ ರಿಕ್ಷಾಗಳು,

l ಬಸ್‌ಗಳು, ರೈಲು, ಮೆಟ್ರೊ,

l ಶಾಲಾ–ಕಾಲೇಜುಗಳು

l ಹೋಟೆಲ್‌ಗಳು

l ಚಿತ್ರಮಂದಿರಗಳು

l ವ್ಯಾಪಾರ ವಹಿವಾಟು

l ಮಾಲ್‌ಗಳು

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ
- ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.