ADVERTISEMENT

ಪರಿಹಾರಕ್ಕೆ ಆಗ್ರಹ: ಕಚೇರಿ ಆವರಣದಲ್ಲಿ ಜಾನುವಾರುಗಳನ್ನು ಕಟ್ಟಿ ರೈತರ ಪ್ರತಿಭಟನೆ

ವಿದ್ಯುತ್ ಮಾರ್ಗಕ್ಕೆ ಜಮೀನು ನೀಡಿದ್ದ ರೈತರು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 7:59 IST
Last Updated 20 ನವೆಂಬರ್ 2018, 7:59 IST
   

ಗೌರಿಬಿದನೂರು: ಪವರ್​ಗ್ರಿಡ್ ಕಾಪೋರೇಷನ್ ಅಳವಡಿಸುತ್ತಿರುವ ವಿದ್ಯುತ್ ಮಾರ್ಗಕ್ಕೆ ಜಮೀನು ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರೈತರು, ತಮ್ಮ ಜಾನುವಾರುಗಳನ್ನು ತಾಲ್ಲೂಕು ಕಚೇರಿಯ ಆವರಣದಲ್ಲಿ ಕಟ್ಟಿಮಂಗಳವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರೂ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರು, ತಾಲ್ಲೂಕು ಮತ್ತು ಜಿಲ್ಲಾಡಳಿತ ತಮಗೆ ನ್ಯಾಯ ಕೊಡಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡ ಗುಂಡಾಪುರ ಲೋಕೇಶ್ ಗೌಡ ಮಾತನಾಡಿ, ‘ಪವರ್​ಗ್ರಿಡ್ ಕಾಪೋರೇಷನ್ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ. ರೈತರಿಗೆ ನ್ಯಾಯ ಒದಗಿಸಿಕೊಡಿ ಎಂದು ಅಧಿಕಾರಿಗಳಲ್ಲಿ ಅಂಗಲಾಚಿ ಬೇಡಿದರೂ ಪ್ರಯೋಜನವಾಗಿಲ್ಲ. ರಾತ್ರಿ ಹಗಲು ಹೋರಾಟದಲ್ಲಿ ನಿರತರಾಗಿರುವ ರೈತರಿಗೆ ತಾಲ್ಲೂಕು ಆಡಳಿತ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಕೃಷಿ ಸಚಿವರಿಗೆ ತವರು ಕ್ಷೇತ್ರದಲ್ಲಿಯೇ ರೈತರಿಗೆ ನ್ಯಾಯ ನೀಡಲು ಸಾಧ್ಯವಾಗುತ್ತಿಲ್ಲ. ಉಳಿದಂತೆ ರಾಜ್ಯದ ರೈತರ ಹಿತ ಕಾಯುವರೆ? ರೈತರಿಗೆ ಸೂಕ್ತ ನ್ಯಾಯ ಸಿಗುವವರೆಗೂ ಹೋರಾಟವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಇದಕ್ಕಾಗಿ ತಾಲ್ಲೂಕಿನ ಎಲ್ಲಾ ರೈತರು ಒಗ್ಗಟ್ಟಿನಿಂದ ಹೋರಾಟಕ್ಕೆ ಮುಂದಾಗಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.