ADVERTISEMENT

ರೈತರಿಗೆ ಸುಗಮ ಸಾಲಕ್ಕೆ ‘ಫ್ರೂಟ್ಸ್‌’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 19:31 IST
Last Updated 22 ಡಿಸೆಂಬರ್ 2020, 19:31 IST
ರಾಜೀವ್‍ ಚಾವ್ಲಾ ಹಾಗೂ ಎ.ಮಣಿಮೇಖಲೈ ಅವರು ‘ಫ್ರೂಟ್ಸ್‌’ ಪೋರ್ಟಲ್‌ಗೆ ಮಂಗಳವಾರ ಚಾಲನೆ ನೀಡಿದರು.ನೀರಜ್ ವರ್ಮಾ ಹಾಗೂ ನಬಾರ್ಡ್‌ ಅಧಿಕಾರಿಗಳು ಇದ್ದರು
ರಾಜೀವ್‍ ಚಾವ್ಲಾ ಹಾಗೂ ಎ.ಮಣಿಮೇಖಲೈ ಅವರು ‘ಫ್ರೂಟ್ಸ್‌’ ಪೋರ್ಟಲ್‌ಗೆ ಮಂಗಳವಾರ ಚಾಲನೆ ನೀಡಿದರು.ನೀರಜ್ ವರ್ಮಾ ಹಾಗೂ ನಬಾರ್ಡ್‌ ಅಧಿಕಾರಿಗಳು ಇದ್ದರು   

ಬೆಂಗಳೂರು: ರೈತರು ಬ್ಯಾಂಕುಗಳಿಂದನೇರವಾಗಿ ಸಾಲ ಪಡೆಯಲು ಅನುಕೂಲ ಕಲ್ಪಿಸಲು ‘ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ’ (ಫ್ರೂಟ್ಸ್‌) (FRUITS – Farmer Registration and Unified beneficiary Information System) ರೂಪಿಸಲಾಗಿದೆ.

ಸರ್ಕಾರ, ನಬಾರ್ಡ್‌ ಹಾಗೂ ಬ್ಯಾಂಕುಗಳ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಈ ಪೋರ್ಟಲ್‌ಗೆ ಮಂಗಳವಾರ ಚಾಲನೆ ನೀಡಲಾಯಿತು.

ಕೆನರಾ ಬ್ಯಾಂಕಿನೊಂದಿಗೆಪ್ರಾಯೋಗಿಕವಾಗಿ ಈ ಪೋರ್ಟಲ್‌ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಬ್ಯಾಂಕುಗಳೊಂದಿಗೆ ಈ ಪೋರ್ಟಲ್ ಸಂಯೋಜನೆಗೊಳ್ಳಲಿದೆ.

ADVERTISEMENT

ಪೋರ್ಟಲ್‌ಗೆ ಚಾಲನೆ ನೀಡಿದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಇ-ಆಡಳಿತ)ರಾಜೀವ್‍ ಚಾವ್ಲಾ,‘ಈ ವೆಬ್‌ಸೈಟ್‌ ರಾಜ್ಯದ ಸಮಸ್ತ ರೈತರ ಭೂಹಿಡುವಳಿ ಹಾಗೂ ಇನ್ನಿತರ ಉಪಯುಕ್ತ ಮಾಹಿತಿಗಳನ್ನು ಒಂದೆಡೆ ಕ್ರೂಡೀಕರಿಸಲು ಹಾಗೂ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಲು ನೆರವಾಗಲಿದೆ’ ಎಂದರು.

‘ರಾಜ್ಯದ ಎಲ್ಲ ರೈತರನ್ನು ನೋಂದಾಯಿಸಿಕೊಂಡು, ವೈಯಕ್ತಿಕ ನೋಂದಣಿ ಸಂಖ್ಯೆ ನೀಡಲಾಗುವುದು. ಇದನ್ನು ಬಳಸಿಕೊಂಡು ಬ್ಯಾಂಕು ಮತ್ತು ಇತರ ಹಣಕಾಸು ಸಂಸ್ಥೆಗಳು ರೈತರ ಭೂ-ದಾಖಲೆಗಳನ್ನು ಪರಿಶೀಲಿಸಬಹುದು. ತ್ವರಿತವಾಗಿ ಸಾಲ ಮಂಜೂರು ನಿರ್ಧಾರಗಳನ್ನು ತೆಗೆದುಕೊಳ್ಳಲೂ ಸಹಕಾರಿ’ ಎಂದರು.

ಕೆನರಾ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿ‌ ಎ.ಮಣಿಮೇಖಲೈ,‘ರಾಜ್ಯ ಸರ್ಕಾರವು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಗಮವಾಗಿ ಬ್ಯಾಂಕಿಂಗ್ ಸೌಲಭ್ಯಗಳನ್ನು ರೈತ ಸಮುದಾಯಕ್ಕೆಒದಗಿಸುವುದರಲ್ಲಿ ಮುಂಚೂಣಿಯಲ್ಲಿದೆ’ ಎಂದರು.

‘ಭೂಮಿ ಆನ್‌ಲೈನ್‌ ಸೇವೆ ಜೊತೆಗೆಫ್ರೂಟ್ಸ್‌ ಪೋರ್ಟಲ್‌ ಸಂಪರ್ಕ ಹೊಂದಿರುವುದರಿಂದ, ರೈತರು ಬ್ಯಾಂಕಿನಿಂದ ಸಾಲ ಪಡೆಯುವ ಸಲುವಾಗಿ ಉಪನೋಂದಣಾಧಿಕಾರಿ ಹಾಗೂ ಕಂದಾಯ ಇಲಾಖೆಯ ವಿವಿಧ ಕಚೇರಿಗಳಿಗೆ ಭೇಟಿ ನೀಡದೆ, ನೇರವಾಗಿ ಬ್ಯಾಂಕಿನ ಶಾಖೆಯಿಂದ ಸಾಲ ಸೌಲಭ್ಯ ಪಡೆಯಬಹುದು’ ಎಂದರು.

ನಬಾರ್ಡ್ ಪ್ರಾದೇಶಿಕ ಕಚೇರಿ ಮುಖ್ಯಸ್ಥ ನೀರಜ್ ವರ್ಮಾ,‘ನಬಾರ್ಡ್ ಸಂಸ್ಥೆ ದೇಶದ ರೈತರ ಜೀವನ ಸುಧಾರಣೆಗಾಗಿ ಕನಿಷ್ಟ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಗ್ರಾಮೀಣ ಬ್ಯಾಂಕುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ ಒದಗಿಸುತ್ತಿದೆ. ಈ ಪೋರ್ಟಲ್‌ ದೇಶದಲ್ಲೇ ಮೊದಲ ಪ್ರಯೋಗ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.