ADVERTISEMENT

ಸಾಲ ಮನ್ನಾ, ಕಬ್ಬಿಗೆ ಬೆಂಬಲ ಬೆಲೆ: ವಿಧಾನಸೌಧ ಮುತ್ತಿಗೆಗೆ ಮುಂದಾದ ರೈತರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 7:31 IST
Last Updated 19 ನವೆಂಬರ್ 2018, 7:31 IST
ಪ್ರತಿಭಟನಾನಿತರ ರೈತರು. ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌
ಪ್ರತಿಭಟನಾನಿತರ ರೈತರು. ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌    

ಬೆಂಗಳೂರು:ಕಬ್ಬಿನ ಬಾಕಿ ಬಿಡುಗಡೆ ಹಾಗೂ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಎಂದು ಬೆಳಗಾವಿಯಲ್ಲಿ ಬೀದಿಗಿಳಿದಿದ್ದ ರೈತರ ಹೋರಾಟ ಇದೀಗ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ ಬಂದು ತಲುಪಿದೆ.

ಸರ್ಕಾರ ರೈತರ ಸಾಲ ಮನ್ನಾದ ಗೊಂದಲಗಳನ್ನು ನಿವಾರಿಸಬೇಕು, ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂಬುದು ಸೇರಿದಂತೆ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಅನ್ನದಾತರು ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ರೈತರನ್ನು ವಿಧಾನಸೌಧ ಬಳಿ ತೆರಳದಂತೆ ಪೊಲೀಸರು ತಡೆದಿದ್ದು, ಸ್ವತಂತ್ರ್ಯ ಉದ್ಯಾನದಲ್ಲಿ ರೈತರು ಸೇರಿದ್ದಾರೆ.

ವಿವಿಧ ಜಿಲ್ಲೆಗಳಿಂದ ನೂರಾರು ರೈತರು ಬೆಳಿಗ್ಗೆ 6ಕ್ಕೆ ಕೆಂಪೇಗೌಡ ರೈಲುನಿಲ್ದಾಣದಲ್ಲಿ ಜಮಾವಣೆಗೊಂಡಿದ್ದಾರೆ. ಇತರ ಜಿಲ್ಲೆಗಳಿಂದ ರೈತರು ಬರುತ್ತಿದ್ದು, ಎಲ್ಲರೂ ಜಮಾವಣೆಗೊಂಡರೆ ರೈತರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ.

ADVERTISEMENT
ರೈತರು ವಿಧಾನಸೌಧದತ್ತ ತೆರಳದಂತೆ ಪೊಲೀಸರು ಬ್ಯಾರಿಕೇಡ್‌ ಹಾಕಿ ತಡೆದಿದ್ದಾರೆ.

‘ಸಿಎಂ ಸಾಲ ಮನ್ನಾ ವಿಷಯವನ್ನು ಐದು ತಿಂಗಳಿಂದ ಗೊಂದಲ ಗೂಡಾಗಿಸಿದ್ದಾರೆ. ಅವರು ಮಾತಿನಂತೆ ನಡೆದುಕೊಂಡಿಲ್ಲ. ಈಗ, ಆಗ ಎಂದು ಸಿಎಂ ಹೇಳುತ್ತಲೇ ಬರುತ್ತಿದ್ದಾರೆ. ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾಕ್ಕೆ ರೈತರಿಂದ ಕೇಳುತ್ತಿರುವ ದಾಖಲೆಗಳನ್ನು ಸಲ್ಲಿಸಲು ತಲೆಕೆಟ್ಟೋಗಿದೆ’ ಎಂದು ರೈತ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಎಲ್ಲಿಯೂ ಖರೀದಿ ಕೇಂದ್ರಗಳನ್ನು ಸರಿಯಾಗಿ ತೆರೆದಿಲ್ಲ ಎಂದು ದೂರಿದ ರೈತರು, ರೈತರ ಎಲ್ಲಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿಧಾನಸೌಧ ಮುತ್ತಿಗೆ ಹಾಕಲು ತೀರ್ಮಾನಿಸಿದ್ದೇವೆಎಂದು ಹೇಳಿದರು.

ವಿಧಾನಸೌಧ ಮುತ್ತಿಗೆಗೆ ಮಂಡ್ಯದಿಂದ ಹೊರಟ ರೈತ ಮುಖಂಡರು.

ಮೆರವಣಿಗೆ
ರೈಲುನಿಲ್ದಾಣದಲ್ಲಿ ತಮಟೆ ಬಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು, ಸರ್ಕಾರ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಎಲ್ಲಾ ರೈತರು ಜಮಾವಣೆಯಾದ ಬಳಿಕ ರೈಲು ನಿಲ್ದಾಣದಿಂದ ವಿಧಾನಸೌಧದವರೆಗೆ ಮೆರವಣಿಗೆ ತೆರಳಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ರೈತ ಮುಖಂಡರು ತಿಳಿಸಿದರು.

ರೈತರು ಬೆಂಗಳೂರಿನ ರೈಲು ನಿಲ್ದಾಣದಿಂದಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಭದ್ರತೆ
ನಿನ್ನೆಯಷ್ಟೇ ರೈತ ಮಹಿಳೆ ಕುರಿತು ಸಿಎಂ ನೀಡಿರುವ ಹೇಳಿಗೆ ಅಸಮಾಧಾನ ಗೊಂಡಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರೈಲು ನಿಲ್ದಾಣದ ಬಳಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಧಾನಸೌಧಕ್ಕೆ ಬಿಡುವುದಿಲ್ಲ: ನಿಯಮ ಉಲ್ಲಂಘಿಸಿದರೆ ಕ್ರಮ– ಪೊಲೀಸರ ಎಚ್ಚರಿಕೆ

ಪ್ರತಿಭಟನಾಕಾರನ್ನುಫ್ರೀಡಂ ಪಾರ್ಕ್‌ ಬಳಿ ತಡೆಯಲು ನಗರ ಪೊಲೀಸರು ಎಲ್ಲ ಸಿದ್ಧತೆಗಳನ್ನುಮಾಡಿಕೊಂಡಿದ್ದಾರೆ. ವಿಧಾನಸೌಧದ ಕಡೆಗೆ ಹೋಗುವ ರೈತರನ್ನು ಫ್ರೀಡಂ ಪಾರ್ಕ್‌ಗೆ ತಿರುಗಿಸಲು ಶೇಷಾದ್ರಿ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ರಾಶಿ ಹಾಕಿಕೊಂಡಿದ್ದಾರೆ.

ಮೆರವಣಿಗೆಯಲ್ಲಿ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಅವಕಾಶ ನೀಡುವುದಿಲ್ಲ. ಅಲ್ಲಿಯವರಗೆ ರೈತರನ್ನು ಬಿಡುವುದಿಲ್ಲ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್‌ ಅಧಿಕಾರಿಗಳು ರೈತರಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಸುನಿತಾ ಪುಟ್ಟಣ್ಣಯ್ಯ, ಕೆ.ಟಿ. ಗಂಗಾಧರ್‌ ಸೇರಿದಂತೆ ಇತರರು ಇದ್ದಾರೆ. ‍ಪ್ರಜಾವಾಣಿ ಚಿತ್ರಗಳು: ಎಸ್‌.ಕೆ. ದಿನೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.