ADVERTISEMENT

‘ನಮ್ಮೂರ ಭೂಮಿ ನಮಗಿರಲಿ’ ಚಳವಳಿ ಆರಂಭ

ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ವಿರುದ್ಧ ಮೈಸೂರು– ಚಾಮರಾಜನಗರದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 21:44 IST
Last Updated 3 ಆಗಸ್ಟ್ 2020, 21:44 IST
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ರೈತರು ಮೈಸೂರಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ರೈತರು ಮೈಸೂರಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ಮೈಸೂರು: ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ’ ಎಂಬ ಘೋಷಣೆಯ ಬ್ಯಾನರ್‌ಗಳನ್ನು ರೈತರು ತಮ್ಮ ಜಮೀನು
ಗಳಲ್ಲಿ ಕಟ್ಟುವ ಮೂಲಕ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ವಿರುದ್ಧ ವಿನೂತನ ಚಳವಳಿಯನ್ನು ಜಿಲ್ಲೆಯ ವಿವಿಧೆಡೆ ಸೋಮವಾರ ಆರಂಭಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಇಲ್ಲಿನ ಎಚ್.ಡಿ.ದೇವೇಗೌಡ ವೃತ್ತದಲ್ಲಿ ಚಳವಳಿಗೆ ಚಾಲನೆ ನೀಡಿದರು. ಇದೇ ಸಮಯದಲ್ಲಿ ಜಿಲ್ಲೆಯ 30ಕ್ಕೂ ಅಧಿಕ ಕಡೆ ಚಳವಳಿ ಆರಂಭವಾಯಿತು. ಇದೇ ಬಗೆಯ ಚಳವಳಿ ಚಾಮರಾಜನಗರ ಜಿಲ್ಲೆಯ ಹಲವೆಡೆ ನಡೆದಿವೆ.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಮೈಸೂರು–ಚಾಮರಾಜನಗರ ಜಿಲ್ಲಾ ಸುಸ್ಥಿರ ಸಾವಯವ ಕೃಷಿಕರ ಒಕ್ಕೂಟದ ಕಾರ್ಯಕರ್ತರು ಇದಕ್ಕೆ ಸಾಥ್ ನೀಡಿದರು.

ADVERTISEMENT

‘ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ಇಲ್ಲ’ ಎಂಬ ಪತ್ರವನ್ನು ರೈತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆಯುವ ಮೂಲಕ ಪತ್ರ ಚಳವಳಿಯನ್ನೂ ಇದೇ ಸಂದರ್ಭದಲ್ಲಿ ಆರಂಭಿಸಿದರು.

‘ಇದು ಆರಂಭ ಮಾತ್ರ. ಮುಂಬರುವ ದಿನಗಳಲ್ಲಿ ಇನ್ನಷ್ಟು ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು. ಇದೇ 8ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅರೆಬೆತ್ತಲೆ ಚಳವಳಿ, 15ರಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಪ್ಪುಪಟ್ಟಿ ಧರಿಸುವ ಮೂಲಕ ಕರಾಳ ದಿನಾಚರಣೆಯನ್ನಾಗಿ ಆಚರಿಸಲಾಗುವುದು. ಇದಕ್ಕೂ ಬಗ್ಗದಿದ್ದರೆ ‘ಮಾಡು ಇಲ್ಲವೇ ಮಡಿ’ ಚಳವಳಿ ನಡೆಸಲಾಗುವುದು’ ಎಂದು ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.