ADVERTISEMENT

ರೈತ ಹೋರಾಟಕ್ಕೆ ಬೆಂಬಲ ಕೋರಿ ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 14:45 IST
Last Updated 12 ಫೆಬ್ರುವರಿ 2026, 14:45 IST
ಭೇಟಿಯ ವೇಳೆ ಸಿದ್ದರಾಮಯ್ಯ ಅವರು ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕರ ಜತೆ ಮಾತುಕತೆ ನಡೆಸಿದರು 
ಭೇಟಿಯ ವೇಳೆ ಸಿದ್ದರಾಮಯ್ಯ ಅವರು ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕರ ಜತೆ ಮಾತುಕತೆ ನಡೆಸಿದರು    

ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ, 2013ರ ಭೂಸ್ವಾಧೀನ ಕಾಯ್ದೆಯ ಮರುಜಾರಿಗೆ ಒತ್ತಾಯಿಸಿ ತಾವು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಸಂಯುಕ್ತ ಕಿಸಾನ್‌ ಮೋರ್ಚಾವು (ರಾಜಕೀಯೇತರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದೆ.

ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ (ಎಂಎಸ್‌ಪಿ) ನೀಡಬೇಕು, ಎಂಎಸ್‌ಪಿಗೆ ಕಾನೂನಿನ ಖಾತರಿ ಒದಗಿಸಬೇಕು, ಶೇ 75ರಷ್ಟು ರೈತರು ಒಪ್ಪಿದರಷ್ಟೇ ಭೂಸ್ವಾಧೀನಕ್ಕೆ ಆಧಿಸೂಚನೆ ಹೊರಡಿಸಬೇಕು ಎನ್ನುವ 2013 ಭೂಸ್ವಾಧೀನ ಕಾಯ್ದೆಯನ್ನು ಮರುಜಾರಿ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಸಂಯುಕ್ತ ಕಿಸಾನ್‌ ಮೋರ್ಚಾವು (ಎಸ್‌ಕೆಎಂ) ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಜಾಗೃತಿ ಯಾತ್ರೆ ನಡೆಸುತ್ತಿದೆ.

ತಮಿಳುನಾಡಿನಿಂದ ಚಾಮರಾಜನಗರ ಪ್ರವೇಶಿಸಿದ್ದ ಯಾತ್ರೆಯು ಗುರುವಾರ ಬೆಂಗಳೂರು ತಲುಪಿತು. ಯಾತ್ರೆಯ ಭಾಗವಾಗಿ ಎಸ್‌ಕೆಎಂನ ರಾಷ್ಟ್ರೀಯ ಸಂಚಾಲಕ ಜಗಜಿತ್ ಸಿಂಗ್ ದಲ್ಲೇವಾಲ್, ರಾಷ್ಟ್ರೀಯ ಸಹಸಂಚಾಲಕ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತ ಮುಖಂಡರು ಸಿದ್ದರಾಮಯ್ಯ ಅವರನ್ನು ಅವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಭೇಟಿ ಮಾಡಿದರು.

ADVERTISEMENT

‘ನಮ್ಮ ಬೇಡಿಕೆಗಳ ಈಡೇರಿಕೆಗೆ ನಿಮ್ಮ ಸರ್ಕಾರದ ಮಟ್ಟದಲ್ಲಿ ಸಾಧ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.