ADVERTISEMENT

ಪರಿಹಾರಕ್ಕಾಗಿ ಟವರ್ ಏರಿದ ರೈತರು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 0:03 IST
Last Updated 17 ಮಾರ್ಚ್ 2023, 0:03 IST
ಮಳೆಯಿಂದ ಹಾನಿಯಾದ ಬೆಳೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಜಮಖಂಡಿ ತಾಲ್ಲೂಕಿನ ಚಿಕ್ಕಲಗಿ ಗ್ರಾಮದ ಆರು ಮಂದಿ ರೈತರು ಮೊಬೈಲ್ ಟವರ್ ಏರಿದ್ದರು
ಮಳೆಯಿಂದ ಹಾನಿಯಾದ ಬೆಳೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಜಮಖಂಡಿ ತಾಲ್ಲೂಕಿನ ಚಿಕ್ಕಲಗಿ ಗ್ರಾಮದ ಆರು ಮಂದಿ ರೈತರು ಮೊಬೈಲ್ ಟವರ್ ಏರಿದ್ದರು   

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಗಿ ಗ್ರಾಮದ ಆರು ಜನ ರೈತರು ಮಳೆಯಿಂದಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಮೊಬೈಲ್‌ ಟವರ್‌ ಏರಿ ಕುಳಿತುಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.

ಮಲ್ಲಪ್ಪ ಬಿರಾದಾರ, ಸಿದ್ದು ಶಿಂಧೆ, ಯಲ್ಲಪ್ಪ ಬೆಳ್ಳುಬ್ಬಿ, ಮುನಿಕ ಗುರಚಿ, ಜ್ಞಾನದೇವ ಮಳಿಕ ಹಾಗೂ ಚಿರಾವ ಮೊಹಿತೆ ಟವರ್ ಏರಿದವರು. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ದ್ರಾಕ್ಷಿ ಬೆಳೆ ಹಾಳಾಗಿದೆ. ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮಸ್ಥರು ಕೆಳಗಿಳಿಯುವಂತೆ ಮನವಿ ಮಾಡಿದರೂ, ಅವರು ಅಧಿಕಾರಿಗಳು ಬರುವವರೆಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದರು.

ADVERTISEMENT

ತಹಶೀಲ್ದಾರ್‌ ಸದಾಶಿವ ಮುಕ್ಕೋಜಿ ಭೇಟಿ ನೀಡಿ, ‘ಬೆಳೆ ಹಾನಿಯಾಗಿರುವುದರ ಸರ್ವೆ ಮಾಡಿಸಲಾಗುವುದು. ಹಾನಿಗೆ ಸೂಕ್ತ ಪರಿಹಾರ ನೀಡಲಾಗುವುದು’ ಎಂದು ಭರವಸೆ ನೀಡಿದ ನಂತರ ಕೆಳಗಿಳಿದರು.

ದ್ರಾಕ್ಷಿ ಬೆಳೆಗೆ ಅಪಾರ ಹಾನಿ: ಜಮಖಂಡಿ ಭಾಗದಲ್ಲಿ ಬುಧವಾರ ರಾತ್ರಿ ಬಿದ್ದ ಮಳೆಯಿಂದಾಗಿ, ₹40 ಕೋಟಿಗೂ ಹೆಚ್ಚು ಮೌಲ್ಯದ ದ್ರಾಕ್ಷಿ ಬೆಳೆ ಹಾನಿಯಾಗಿದೆ. ತಾಲ್ಲೂಕಿನಲ್ಲಿ ಐದು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಈ ಭಾಗದಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರ ದ್ರಾಕ್ಷಿ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ. ತೇರದಾಳ ಭಾಗದಲ್ಲಿ ಆಲಿಕಲ್ಲು ಮಳೆಯಾಗಿರುವುದರಿಂದ ಗೋಧಿ ಬೆಳೆ ಹಾನಿಯಾಗಿದೆ. ಬಾದಾಮಿಯಲ್ಲಿಯೂ ಜಿಟಿ ಜಿಟಿ ಮಳೆಯಾಗಿದ್ದು, ಮಹಾಲಿಂಗಪುರ, ಬಾಗಲಕೋಟೆಯಲ್ಲಿಯೂ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.