ADVERTISEMENT

ಸೆಕ್ಯೂರಿಟಿ ಕೆಲಸಕ್ಕೆ ಅನುಮತಿ ಕೊಡಿ!: ಆಯುಕ್ತರಿಗೆ ಪತ್ರ ಬರೆದ ಎಫ್‌ಡಿಎ

45 ಎಫ್‌ಡಿಎ; 50 ಸಬ್‌ ರಿಜಿಸ್ಟ್ರಾರ್‌ಗಳಿಗೆ ಸಂಬಳ ಇಲ್ಲ

ರಾಜೇಶ್ ರೈ ಚಟ್ಲ
Published 19 ಆಗಸ್ಟ್ 2020, 21:34 IST
Last Updated 19 ಆಗಸ್ಟ್ 2020, 21:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಗರ್ಭಿಣಿ ಪತ್ನಿ ಮತ್ತು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪೋಷಕರನ್ನು ಉಳಿಸಿಕೊಳ್ಳಲು ಹಣ ಅಗತ್ಯವಿರುವುದರಿಂದ ಸರ್ಕಾರ ಸಂಬಳ ಕೊಡುವವರೆಗೆ ಕಚೇರಿ ಕರ್ತವ್ಯಕ್ಕೆ ಧಕ್ಕೆಯಾಗದಂತೆ ರಾತ್ರಿ ಅವಧಿಯಲ್ಲಿ ಸೆಕ್ಯೂರಿಟಿ ಕೆಲಸ ಮಾಡಲು ಅನುಮತಿ ಕೊಡಿ!’

–ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಅಡಿಟ್‌ ಶಾಖೆಯ ಪ್ರಥಮ ದರ್ಜೆ ಸಹಾಯಕರೊಬ್ಬರು(ಎಫ್‌ಡಿಎ), ಸಂಬಳ ಇಲ್ಲದೆ ಕುಟುಂಬ ಸಾಕಲು ಪರದಾಡುತ್ತಿರುವ ಬಗ್ಗೆ ಇಲಾಖೆಯ ಆಯುಕ್ತ ಕೆ.ಪಿ. ಮೋಹನ್‌ರಾಜ್‌ ಅವರಿಗೆ ಬರೆದ ಪತ್ರದ ಸಾಲುಗಳು ಇವು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯದ ಬೊಕ್ಕಸಕ್ಕೆ ಆದಾಯ ತಂದುಕೊಡುವ ಮೂರನೇ ಅತಿ ದೊಡ್ಡ ಇಲಾಖೆ. ಆದರೆ, ಇಲ್ಲಿ ಕೆಲಸ ಮಾಡುವ ಮೊಯಿನುದ್ದೀನ್‌ ಅವರಂತೆ 100ಕ್ಕೂ ಹೆಚ್ಚು ಸಿಬ್ಬಂದಿ ಸಂಬಳ ಇಲ್ಲದೆ ಪರದಾಡುತ್ತಿದ್ದಾರೆ. ಅಲ್ಲದೆ, ಈ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೂ ಹಲವು ತಿಂಗಳುಗಳಿಂದ ಸಂಬಳ ಸಿಕ್ಕಿಲ್ಲ.

ADVERTISEMENT

ಕೆಪಿಎಸ್‌ಸಿ ಮೂಲಕ 2019ರ ಜುಲೈ ತಿಂಗಳಲ್ಲಿ ನೇಮಕಗೊಂಡ ಗ್ರೂಪ್‌ ‘ಸಿ’ ವೃಂದದ 45 ಪ್ರಥಮ ದರ್ಜೆ ಸಹಾಯಕರು (ಎಫ್‌ಡಿಎ) ಮತ್ತು 50 ಉಪ ನೋಂದಣಾಧಿಕಾರಿಗಳು ಇಲಾಖೆಯ ವಿವಿಧ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ, ಕೆಲವರಿಗೆ ಕೆಲವು ತಿಂಗಳ ಸಂಬಳ ಸಿಕ್ಕಿದ್ದು, ಅನೇಕರಿಗೆ ಕೆಲಸಕ್ಕೆ ನೇಮಕಗೊಂಡ ದಿನದಿಂದಲೂ ಸಿಕ್ಕಿಲ್ಲ.

‘ಪ್ರೊಬೇಷನರಿ ಅವಧಿಯಾಗಿರುವುದರಿಂದ ಮೇಲಧಿಕಾರಿಗಳ ಬಳಿ ಸಂಬಳ ಕೇಳಿದರೆ ಎಲ್ಲಿ ತಮ್ಮ ಉದ್ಯೋಗಕ್ಕೆ ಕುತ್ತು ಬರುತ್ತದೊ ಎಂದು ಹೆದರಿ ಸಂಬಳ ಕೇಳುವ ಗೋಜಿಗೇ ಹೋಗಿಲ್ಲ. ಅಧಿಕಾರಿಗಳಂತೂ ನಮ್ಮ ಕಡೆಗೆ ತಿರುಗಿಯೂ ನೋಡಿಲ್ಲ’ ಎಂಬುದು ಸಿಬ್ಬಂದಿ ಅಳಲು.

ಈ ಪೈಕಿ, ಧೈರ್ಯ ತೋರಿ ಪತ್ರ ಬರೆದಿರುವ ಎಫ್‌ಡಿಎ, ‘ಪತ್ನಿ, ತಂದೆ–ತಾಯಿ, ಅಜ್ಜಿ ಮತ್ತು ಇಬ್ಬರು ಅವಿವಾಹಿತ ಸಹೋದರರು ನನ್ನ ಅವಲಂಬಿತರಾಗಿದ್ದಾರೆ. ಪತ್ನಿ ನಾಲ್ಕು ತಿಂಗಳ ಗರ್ಭಿಣಿ. ಇಡೀ ಕುಟುಂಬ ನನ್ನ ವೇತನ ನಂಬಿದೆ. ಸದ್ಯ ಮೂರು ಹೊತ್ತಿನ ಊಟ, ಕುಟುಂಬದ ವೈದ್ಯಕೀಯ ವೆಚ್ಚ ಭರಿಸಲು ಪರದಾಡುತ್ತಿದ್ದೇನೆ. ಅವರೆಲ್ಲರನ್ನೂ ಉಳಿಸಿಕೊಳ್ಳಲು ಹಣ ಹೊಂದಾಣಿಕೆ ಮಾಡಬೇಕಾಗಿದೆ. ಸಂಬಳ ನೀಡುವವರೆಗೆ ಕಚೇರಿ ಅವಧಿ ಮುಗಿದ ಬಳಿಕ ಸೆಕ್ಯೂರಿಟಿ ಕೆಲಸ ಮಾಡಲು ಅನುಮತಿ ನೀಡಬೇಕು’ ಎಂದು ಆಯುಕ್ತರ ಬಳಿ ಕೋರಿದ್ದಾರೆ.

₹ 7.44 ಕೋಟಿ ಬಿಡುಗಡೆಗೆ ವರ್ಷದ ಬಳಿಕ ಪತ್ರ!
45 ಪ್ರಥಮ ದರ್ಜೆ ಸಹಾಯಕರು ಮತ್ತು 50 ಉಪ ನೋಂದಣಾಧಿಕಾರಿಗಳು ಕರ್ತವ್ಯಕ್ಕೆ ವರದಿ ಮಾಡಿಕೊಂಡ 2019ರ ಜುಲೈ ತಿಂಗಳಿನಿಂದ ಫೆಬ್ರುವರಿ 2021ರವರೆಗೆ ವೇತನ ಮತ್ತು ಭತ್ಯೆ ಪಾವತಿಸಲು ಕ್ರಮವಾಗಿ ₹ 3.06 ಕೋಟಿ ಮತ್ತು ₹ 4.38 ಕೋಟಿ ಸೇರಿ ಒಟ್ಟು ₹ 7.44 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಇಲಾಖೆಯ ಆಯುಕ್ತ ಕೆ.ಪಿ. ಮೋಹನ್‌ರಾಜ್ ಅವರು ಒಂದು ವರ್ಷದ ಬಳಿಕ (ಜುಲೈ 8ರಂದು) ಕಂದಾಯ ಇಲಾಖೆಯ (ನೋಂದಣಿ ಮತ್ತು ಮುದ್ರಾಂಕ) ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

**

ಎಫ್‌ಡಿಎ, ಸಬ್‌ ರಿಜಿಸ್ಟ್ರಾರ್‌ಗಳಿಗೆ ವೇತನ ಪಾವತಿ ಆಗದಿರುವ ಬಗ್ಗೆ ನಾನು ಪರಿಶೀಲಿಸುತ್ತೇನೆ. ನಂತರ ನಿಮಗೆ ಮಾಹಿತಿ ನೀಡುತ್ತೇನೆ.
-ಕೆ.ಪಿ. ಮೋಹನ್‌ರಾಜ್, ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.