ADVERTISEMENT

ಚಳವಳಿ ಬಿಟ್ಟು, ಕೇಂದ್ರದಿಂದ ರಸಗೊಬ್ಬರ ಕೊಡಿಸಿ: BJP, JDSಗೆ ಸಿದ್ದರಾಮಯ್ಯ ಸವಾಲು

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 12:31 IST
Last Updated 28 ಜುಲೈ 2025, 12:31 IST
   

ಮಂಡ್ಯ: ‘ಗೊಬ್ಬರ ಅಭಾವವಿದೆ ಎಂದು ಚಳವಳಿ ಮಾಡುವುದನ್ನು ಬಿಟ್ಟು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ರಸಗೊಬ್ಬರವನ್ನು ಬಿಡುಗಡೆ ಮಾಡಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಜೆಡಿಎಸ್‌ ನಾಯಕರಿಗೆ ಸವಾಲು ಹಾಕಿದರು.

ಮದ್ದೂರಿನಲ್ಲಿ ಸೋಮವಾರ ₹1,146 ಕೋಟಿ ಮೊತ್ತದ 87 ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು. 

‘ಕೇಂದ್ರದಿಂದ ರಾಜ್ಯಕ್ಕೆ 6.80 ಲಕ್ಷ ಟನ್‌ ರಸಗೊಬ್ಬರ ಪೂರೈಕೆಯಾಗಬೇಕಿತ್ತು. ಆದರೆ, 5.27 ಲಕ್ಷ ಟನ್‌ ಮಾತ್ರ ಸರಬರಾಜಾಗಿದೆ. ಈ ಬಗ್ಗೆ ನಾನು ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ವಾರ ಕಳೆದರೂ, ಬಾಕಿ ರಸಗೊಬ್ಬರ ಬಿಡುಗಡೆಯಾಗಿಲ್ಲ. ಕೇಂದ್ರದ ಪ್ರಭಾವಿ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಗೊಬ್ಬರ ಕೊಡಿಸಲಿ. ನಿಮ್ಮ ಈ ನಾಟಕ ಜನರ ಮುಂದೆ ಬಹಳ ವರ್ಷ ನಡೆಯುವುದಿಲ್ಲ’ ಎಂದು ತಿರುಗೇಟು ನೀಡಿದರು. 

ADVERTISEMENT

‘ವಿಜಯೇಂದ್ರನಿಂದ ನಾವು ಪಾಠ ಕಲಿಯಬೇಕಾ? ಅವರ ಅಪ್ಪನ (ಬಿ.ಎಸ್‌.ಯಡಿಯೂರಪ್ಪ) ಸರ್ಕಾರದ ಅವಧಿಯಲ್ಲಿ ರಸಗೊಬ್ಬರ ಕೊಡಲು ಸಾಧ್ಯವಾಗದೆ, ಇಬ್ಬರು ರೈತರನ್ನು ಗೋಲಿಬಾರ್ ಮಾಡಿ ಸಾಯಿಸಿದರು. ನಮ್ಮನ್ನು ಪ್ರಶ್ನೆ ಮಾಡುವ ಇವರಿಗೆ ನಾಚಿಕೆಯಾಗಬೇಕು’ ಎಂದು ಕುಟುಕಿದರು. 

‘ತಲಾದಾಯದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇದಕ್ಕೆ ನಾವು ಜಾರಿಗೊಳಿಸಿದ ಪಂಚ ಗ್ಯಾರಂಟಿಗಳೇ ಕಾರಣ. ಮಹಿಳೆಯರ ಉದ್ಯೋಗ ದರ ಜಾಸ್ತಿಯಾಗಿದೆ. ನಿರುದ್ಯೋಗ ಸಮಸ್ಯೆ ನಿವಾರಿಸಿ, ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ’ ಎಂದರು. 

‘ಜೆಡಿಎಸ್ ನಾಯಕರೇ ಸಮಯ ವ್ಯರ್ಥ ಮಾಡಬೇಡಿ’

‘ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ರಾಜ್ಯ ಮತ್ತು ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಜೆಡಿಎಸ್‌ ನಾಯಕರೇ ನೀವು ನಿಮ್ಮ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಈಗೇನಿದ್ದರೂ ಕಾಂಗ್ರೆಸ್ ಕಾಲ. ಶಿವಪುರ ಸೌಧದಲ್ಲಿ ಹೇಗೆ ರಾಷ್ಟ್ರಧ್ವಜ ಹಾರುತ್ತಿದೆಯೋ ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಧ್ವಜ ನಿರಂತರವಾಗಿ ಹಾರಾಡಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. 

‘ಯೋಗಿ’ ಎಂದು ಕರೆಸಿಕೊಳ್ಳುವುದಕ್ಕಿಂತ, ‘ಉಪಯೋಗಿ’ ಎಂದು ಜನರಿಂದ ಕರೆಸಿಕೊಳ್ಳುವುದು ಮುಖ್ಯ. ದೇವರು ವರ ಮತ್ತು ಶಾಪ ಎರಡನ್ನೂ ಕೊಡುವುದಿಲ್ಲ. ಅವಕಾಶವನ್ನು ಮಾತ್ರ ಕೊಡುತ್ತಾನೆ. ಈ ಅವಕಾಶ ಬಳಸಿಕೊಂಡು ಜನಪರ ಆಡಳಿತ ಕೊಡುತ್ತಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.