ADVERTISEMENT

ಉಗ್ರಪ್ಪ ಮನೆಯತ್ತ ಸುಳಿಯದ ಕಾರ್ಯಕರ್ತರು;ದೇವೇಂದ್ರಪ್ಪ ಮನೆಯಲ್ಲಿ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2019, 14:42 IST
Last Updated 23 ಮೇ 2019, 14:42 IST
ಹೋಗಿ ಬರಲೆ.. ಸೋತ ಬಳಿಕ ಮತ ಎಣಿಕೆ ಕೇಂದ್ರಲ್ಲಿ ಮಾಧ್ಯಮದವರತ್ತ ಕೈ ಬೀಸಿದ ವಿ.ಎಸ್‌.ಉಗ್ರಪ್ಪ
ಹೋಗಿ ಬರಲೆ.. ಸೋತ ಬಳಿಕ ಮತ ಎಣಿಕೆ ಕೇಂದ್ರಲ್ಲಿ ಮಾಧ್ಯಮದವರತ್ತ ಕೈ ಬೀಸಿದ ವಿ.ಎಸ್‌.ಉಗ್ರಪ್ಪ   

ಬಳ್ಳಾರಿ: ಲೋಕಸಭೆ ಚುನಾವಣೆ ಫಲಿತಾಂಶವನ್ನು ಎದುರು ನೋಡುತ್ತಿದ್ದ ಮೈತ್ರಿ ಪಕ್ಷಗಳ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಅವರ ಮನೆಯಲ್ಲಿ ಬೆರಳೆಣಿಕೆಯಷ್ಟು ಕಾರ್ಯಕರ್ತರು ಮಾತ್ರ ಕಂಡುಬಂದರು.

ಉಗ್ರಪ್ಪ ಅವರ ಪತ್ನಿ ಮನೆ ಒಳಗೆ ಇದ್ದರೂ ಹೊರಗೆ ಕಾಣಿಸಿಕೊಳ್ಳಲಿಲ್ಲ. ಪತಿಯ ಸೋಲಿನಿಂದ ದುಃಖಿತರಾಗಿದ್ದ ಅವರನ್ನು ಮಗ, ಸೊಸೆ ಮತ್ತು ಸಂಬಂಧಿಕರು ಸಮಾಧಾನ ಪಡಿಸಿದರು.

ಸದಾ ಜನಜಂಗುಳಿಯಿಂದ ಗಮನ ಸೆಳೆಯುತ್ತಿದ್ದ ಅವರ ಮನೆ ಮುಂದೆ ಗುರುವಾರ ಪಕ್ಷದ ಮುಖಂಡರು ಕೂಡ ಹೆಚ್ಚು ಕಂಡುಬರಲಿಲ್ಲ. ಫಲಿತಾಂಶದ ನಂತರ ಉಗ್ರಪ್ಪ, ಕೆಲವು ಮುಖಂಡರೊಂದಿಗೆ ಸೋಲಿನ ಕುರಿತು ಚರ್ಚೆ ನಡೆಸಿದ್ದರು. ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಫಲಿತಾಂಶವನ್ನು ವೀಕ್ಷಿಸಿಸುತ್ತಿದ್ದರು.

ADVERTISEMENT

ಕೆಪಿಸಿಸಿ ಸದಸ್ಯೆ ಕಮಲಾ ಮರಿಸ್ವಾಮಿ, ಯುವ ಕಾಂಗ್ರೆಸ್‌ ಮುಖಂಡ ಹನುಮ ಕಿಶೋರ್, ಡಿ.ವೆಂಕಟೇಶ್‌, ನಗರದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎಸ್‌.ಮಹ್ಮದ್‌ ರಫೀಕ್‌ ಉಗ್ರಪ್ಪ, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ವಿ.ಶಿವಯೋಗಿ ಜೊತೆಗಿದ್ದರು.

ದೇವೇಂದ್ರಪ್ಪ ಮನೆಯಲ್ಲಿ ಸಂಭ್ರಮ

ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ವಿಜೇತ ಅಭ್ಯರ್ಥಿ ವೈ.ದೇವೇಂದ್ರಪ್ಪ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು.

ನಗರದ ಬಸವೇಶ್ವರ ನಗರದ ಮನೆಯಲ್ಲಿದ್ದ ದೇವೇಂದ್ರಪ್ಪ ತಮ್ಮ ಗೆಲುವು ಖಚಿತವಾಗುತ್ತಿದ್ದಂತೆಯೇ, ಮನೆಮಂದಿಯೊಂದಿಗೆ ಸಂತಸ ಹಂಚಿಕೊಂಡರು.

ಮೈಸೂರಿನಲ್ಲಿ ಇತಿಹಾಸ ಉಪನ್ಯಾಸಕರಾಗಿರುವ ದೇವೇಂದ್ರಪ್ಪ ಪುತ್ರ ವೈ.ರಂಗನಾಥ್, ‘ಕುಟುಂಬ ಸದಸ್ಯರೆಲ್ಲರೂ ಒಂದೊಂದು ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದೆವು. ಹೀಗಾಗಿ, ದೊಡ್ಡ ಗೆಲುವು ಸಿಕ್ಕಿದೆ’ ಎಂದು ನಕ್ಕರು.

ದೇವೇಂದ್ರಪ್ಪ ಪತ್ನಿ ವೈ.ಸುಶೀಲಮ್ಮ ಅವರು ಮೂಕವಿಸ್ಮಿತರಾಗಿದ್ದರು. ತಮ್ಮ ಸಂಭ್ರಮವನ್ನು ಹೇಳಿಕೊಳ್ಳಲು ಅವರಿಗೆ ಮಾತುಗಳು ಬರಲಿಲ್ಲ.

ಬೆಳಗಾವಿಯಲ್ಲಿ ಅಬಕಾರಿ ಜಂಟಿ ನಿರ್ದೇಶಕರಾಗಿರುವ ದೇವೇಂದ್ರಪ್ಪ ಅವರ ಮತ್ತೊಬ್ಬ ಪುತ್ರ ವೈ.ಮಂಜುನಾಥ ಕೂಡ ಈ ಸನ್ನಿವೇಶಕ್ಕೆ ಸಾಕ್ಷಿಯಾದರು.

ತಮ್ಮ ಅಜ್ಜ ಗೆದ್ದಿದ್ದಕ್ಕೆ ಮೊಮ್ಮಕ್ಕಳು ಖುಷಿಯಿಂದ ಕುಣಿದು ಕುಪ್ಪಳಿಸಿ ಸಿಹಿ ತಿಂದರು. ಸುದ್ದಿವಾಹಿನಿಗಳಲ್ಲಿ ದೇವೇಂದ್ರಪ್ಪ ಅವರ ಗೆಲುವಿನ ಕುರಿತು ಸುದ್ದಿ ಬಂದಾಗ ಕುಣಿದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.