ADVERTISEMENT

ಗ್ರಾಮ ಪಂಚಾಯಿತಿ: ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 15:29 IST
Last Updated 23 ಫೆಬ್ರುವರಿ 2024, 15:29 IST
   

ಬೆಂಗಳೂರು: ಹಳೆಯ ಗ್ರಾಮ ಠಾಣಾ ಪ್ರದೇಶಗಳನ್ನು ಮೀರಿ ಅಭಿವೃದ್ಧಿ ಹೊಂದಿರುವ ಎಲ್ಲ ಆಸ್ತಿಗಳನ್ನು ತೆರಿಗೆ ಪಟ್ಟಿಗೆ ಸೇರಿಸುವ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ ಸ್ವಂತ ತೆರಿಗೆ ವರಮಾನವನ್ನು ಹೆಚ್ಚಿಸಬೇಕು ಎಂದು ಐದನೇ ರಾಜ್ಯ ಹಣಕಾಸು ಆಯೋಗ ಶಿಫಾರಸು ಮಾಡಿದೆ.

ಸಿ. ನಾರಾಯಣಸ್ವಾಮಿ ಅಧ್ಯಕ್ಷತೆಯ ರಾಜ್ಯ ಹಣಕಾಸು ಆಯೋಗ ಸಲ್ಲಿಸಿರುವ ವರದಿಯನ್ನು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು.

‘ಗ್ರಾಮ ಠಾಣಾ ಪ್ರದೇಶಗಳನ್ನು ಮೀರಿ ಅಭಿವೃದ್ಧಿ ಹೊಂದಿರುವ ಪ್ರದೇಶಗಳಿಗೆ ನೀರು, ರಸ್ತೆ, ಬೀದಿ ದೀಪ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಆದರೆ, ಅಲ್ಲಿನ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದಿಲ್ಲ. ಅಂತಹ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಕ್ರಮಬದ್ಧಗೊಳಿಸಬೇಕು. ಆಗ ಪಂಚಾಯಿತಿಗಳಿಗೆ ಹೆಚ್ಚಿನ ಆದಾಯ ದೊರಕುತ್ತದೆ’ ಎಂದು ಆಯೋಗ ಹೇಳಿದೆ.

ADVERTISEMENT

2016–17ರಲ್ಲಿ ಗ್ರಾಮ ಪಂಚಾಯಿತಿಗಳ ಸ್ವಂತ ತೆರಿಗೆ ವರಮಾನ ₹ 306 ಕೋಟಿಯಷ್ಟಿತ್ತು. 2022–23ರ ವೇಳೆಗೆ ಅದು ₹ 771 ಕೋಟಿಗೆ ಏರಿಕೆಯಾಗಿದೆ. ಹಿಂದಿನ ವರ್ಷಗಳ ತೆರಿಗೆ ಬಾಕಿ ₹ 1,696 ಕೋಟಿಯಷ್ಟಿದೆ. ಅದನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದೆ.

ಗ್ರಾಮ ಪಂಚಾಯಿತಿಗಳು ರಾಜ್ಯದ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಾಕಿ ಇರಿಸಿಕೊಂಡಿರುವ ₹ 3,766.82 ಕೋಟಿ ವಿದ್ಯುತ್‌ ಶುಲ್ಕ ಪಾವತಿಯನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕು. ಗ್ರಾಮ ಪಂಚಾಯಿತಿಗಳ ಎಲ್ಲ ವಿದ್ಯುತ್‌ ಸಂಪರ್ಕಗಳಿಗೆ ಕಡ್ಡಾಯವಾಗಿ ಮೀಟರ್‌ ಅಳವಡಿಸಬೇಕು. ನಿಷ್ಕ್ರಿಯವಾಗಿರುವ ಕೊಳವೆ ಬಾವಿಗಳು ಸೇರಿದಂತೆ ಬಳಕೆಯಾಗದ ಎಲ್ಲ ವಿದ್ಯುತ್‌ ಸಂಪರ್ಕಗಳನ್ನು ಕಡಿತಗೊಳಿಸಬೇಕು ಎಂಬ ಶಿಫಾರಸುಗಳು ವರದಿಯಲ್ಲಿವೆ.

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರತಿ ವರ್ಷ ಶೇಕಡ 1ರಷ್ಟು ಹೆಚ್ಚಿನ ಅನುದಾನ ಹಂಚಿಕೆ ಮಾಡಬೇಕು. ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.