ADVERTISEMENT

ಗಣಿ: ಜನಾರ್ದನ ರೆಡ್ಡಿಯಿಂದ ಆದ ನಷ್ಟ ವಸೂಲಿಗೆ ಟಪಾಲ್ ಸಹೋದರರ ಹೋರಾಟ ಆರಂಭ?

ಕರ್ನಾಟಕ ಭಾಗದಲ್ಲಿದ್ದ ಅದಿರು ಉತ್ತಮ ಗುಣಮಟ್ಟದ್ದು * 28.90 ಲಕ್ಷ ಟನ್‌ ಅದಿರಿನ ಮೊತ್ತ ಕನಿಷ್ಠ ₹867 ಕೋಟಿ

ಆರ್. ಹರಿಶಂಕರ್
Published 11 ಮೇ 2025, 1:31 IST
Last Updated 11 ಮೇ 2025, 1:31 IST
ಗಾಲಿ ಜನಾರ್ದನ ರೆಡ್ಡಿ
ಗಾಲಿ ಜನಾರ್ದನ ರೆಡ್ಡಿ   

ಬಳ್ಳಾರಿ: ಜನಾರ್ದನ ರೆಡ್ಡಿ ಮತ್ತು ಓಬುಳಾಪುರಂ ಮೈನಿಂಗ್‌ ಕಂಪನಿಯ (ಓಎಂಸಿ) ಅಕ್ರಮ ಗಣಿಗಾರಿಕೆಯಿಂದ ರಾಜ್ಯಕ್ಕೆ ಆದ ನಷ್ಟದ ವಸೂಲಿಗಾಗಿ ಮತ್ತೊಂದು ಹಂತದ ನ್ಯಾಯಾಂಗ ಹೋರಾಟ ಆರಂಭಿಸಲು, ಸರ್ಕಾರಕ್ಕೆ ಮನವಿ ಸಲ್ಲಿಸಲು ಪ್ರತ್ಯೇಕ ಪ್ರಯತ್ನಗಳು ಆರಂಭವಾಗಿವೆ.

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌ ಹಿರೇಮಠ ಮತ್ತು ಗಣಿ ಉದ್ಯಮಿಗಳಾದ ಟಪಾಲ್ ಸಹೋದರರು ಪ್ರತ್ಯೇಕವಾಗಿ ಹೋರಾಟ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ ಮಲಪನಗುಡಿ ಗ್ರಾಮದ ಅಂತರಗಂಗಮ್ಮ ಕೊಂಡ ಎಂಬಲ್ಲಿ 68.50 ಹೆಕ್ಟೇರ್‌ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಓಎಂಸಿ ಕಂಪನಿಯು ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವಿನ ಅಂತರರಾಜ್ಯ ಗಡಿ ನಾಶಪಡಿಸಿದೆ. ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ 28.90 ಲಕ್ಷ ಟನ್‌ ಅದಿರನ್ನು ಹೊರತೆಗೆದು, ಅಕ್ರಮವಾಗಿ ಸಾಗಿಸಿದೆ ಎಂಬುದು ಸಾಬೀತಾಗಿದೆ. ಸಿಬಿಐ ನ್ಯಾಯಾಲಯ ಇತ್ತೀಚೆಗೆ ಪ್ರಕಟಿಸಿದ ತೀರ್ಪಿನಲ್ಲಿ ಇದರ ಉಲ್ಲೇಖವಿದೆ.

ADVERTISEMENT

ಕರ್ನಾಟಕ ಭಾಗದಲ್ಲಿದ್ದ ಅದಿರು ಉತ್ತಮ ಗುಣಮಟ್ಟದ್ದು. ಅದಕ್ಕೆ ಜನಾರ್ದನ ರೆಡ್ಡಿ ಅಕ್ರಮವಾಗಿ ಹೊರತೆಗೆದು ಸಾಗಿಸಿದ್ದರು. ಈ ಅದಿರಿನ ಬೆಲೆ ಟನ್‌ಗೆ ಕನಿಷ್ಠ ₹3,000 ಎಂದು ಲೆಕ್ಕ ಹಾಕಿದರೂ, 28.90 ಲಕ್ಷ ಟನ್‌ ಅದಿರಿನ ಮೊತ್ತ ಕನಿಷ್ಠ ₹ 867 ಕೋಟಿ ಆಗುತ್ತದೆ.

‘ಜನಾರ್ದನ ರೆಡ್ಡಿ ದೋಷಿಯಾಗಿದ್ದು, ಶಿಕ್ಷೆಯೂ ಘೋಷಣೆಯಾಗಿದೆ. ಈಗ ತೀರ್ಪೇ ನಮಗೆ ಆಧಾರ. ಅಕ್ರಮ ಗಣಿಗಾರಿಕೆ ಮೂಲಕ ಜನಾರ್ದನ ರೆಡ್ಡಿ ರಾಜ್ಯ, ಹೊರ ರಾಜ್ಯ, ವಿದೇಶಗಳಲ್ಲಿ ಆಸ್ತಿ ಮಾಡಿದ್ದಾರೆ. ಇದೆಲ್ಲವನ್ನೂ ‘ಪ್ರೊಸೀಡ್ಸ್ ಆಫ್ ಕ್ರೈಂ (ಅಪರಾಧ ಚಟುವಟಿಕೆ ಮೂಲಕ ಮಾಡಿದ ಆಸ್ತಿ)’ ಎಂದು ಪರಿಗಣಿಸಬೇಕು. ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಸರ್ಕಾರ ಈ ಕ್ರಮಕ್ಕೆ ಮುಂದಾಗಬೇಕಾಗಿತ್ತು. ಆದರೆ, ಅದು ಆಗುತ್ತಿಲ್ಲ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನಾರ್ದನ ರೆಡ್ಡಿ ರಾಜ್ಯದ ಸಂಪತ್ತು ಕದ್ದು ಸಾಗಿಸಿರುವುದನ್ನು ಕೋರ್ಟ್‌ ಕೂಡ ಪರಿಗಣಿಸಿದೆ. ರೆಡ್ಡಿ ನಮ್ಮ ಗಣಿಯಿಂದಲೂ ಅದಿರು ಸಾಗಿಸಿದ್ದರು. ಲೂಟಿ ಹೊಡೆದ ರಾಜ್ಯದ ಸಂಪತ್ತಿಗೆ ಪರಿಹಾರವನ್ನು ಸರ್ಕಾರ ರೆಡ್ಡಿಯಿಂದ ವಸೂಲಿ ಮಾಡಬೇಕು. ನಮ್ಮ ಗಣಿಯಿಂದ ಲೂಟಿಯಾಗಿದ್ದ ಅದಿರಿನ ಪಾಲನ್ನು ನಮಗೂ ಕೊಡಿಸಿಕೊಡಬೇಕು ಎಂದು ನಾವು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇವೆ. ಈ ನಿಟ್ಟಿನಲ್ಲಿಯೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಗಣಿ ಉದ್ಯಮಿ ಟಪಾಲ್ ಏಕಾಂಬರಂ ತಿಳಿಸಿದರು.

‌ಗಣಿ–ಖನಿಜ ಕಾಯ್ದೆ ಏನು ಹೇಳುತ್ತದೆ?

‘ಯಾವುದೇ ವ್ಯಕ್ತಿ ಕಾನೂನಾತ್ಮಕ ಅಧಿಕಾರವಿಲ್ಲದೆ ಯಾವುದೇ ಭೂಮಿಯಿಂದ ಯಾವುದೇ ಖನಿಜವನ್ನು ಹೊರತೆಗೆದು, ವಿಲೇವಾರಿ ಮಾಡಿದ್ದರೆ, ಅದರ ಮೌಲ್ಯವನ್ನು ವಸೂಲಿ ಮಾಡಬಹುದು. ವ್ಯಕ್ತಿಯು ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದ ಅವಧಿಗೆ ಬಾಡಿಗೆ, ರಾಯಧನ ಅಥವಾ ತೆರಿಗೆಯನ್ನೂ ವಸೂಲಿ ಮಾಡಬಹುದು’ ಎಂದು ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್‌ 21(5) ವಿವರಿಸುತ್ತದೆ. 

ಎಸ್.ಆರ್. ಹಿರೇಮಠ

ನಷ್ಟ ವಸೂಲಿ ಇಲ್ಲಿ ಮುಖ್ಯ. ಇಲ್ಲದಿದ್ದರೆ ಕದ್ದು ಜೈಲಿಗೆ ಹೋಗಿ ಬಂದರಾಯ್ತು ಎಂಬ ಭಾವನೆ ಬರುತ್ತದೆ. ನಷ್ಟ ಪರಿಹಾರಕ್ಕೆ ಏನು ಮಾಡಬಹುದು ಎಂಬುದರ ಬಗ್ಗೆ ಅಧ್ಯಯನ ನಡೆದಿದೆ

– ಸಂತೋಷ ಹೆಗ್ಡೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ

ಈಗ ನಮ್ಮ ಎದುರು ಕಾನೂನು ಹೋರಾಟದ ಆಯ್ಕೆ ಇದೆ. ಕರ್ನಾಟಕದಿಂದ ಸಂಪತ್ತು ಲೂಟಿಯಾಗಿದೆ ಎಂದು ನ್ಯಾಯಾಲಯವೇ ಹೇಳಿದೆ. ಅದರ ವಸೂಲಿಗೆ ಸರ್ಕಾರಕ್ಕೂ ಇಚ್ಛಾಶಕ್ತಿ ಬೇಕು.

–ಎಸ್.ಆರ್.ಹಿರೇಮಠ ಮುಖ್ಯಸ್ಥ ಸಮಾಜ ಪರಿವರ್ತನಾ ಸಮುದಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.