ADVERTISEMENT

ಹೋರಾಟದ ಮೂಲಕ ಅಂಬೇಡ್ಕರ್‌ಗೆ ಗೌರವ ಸಲ್ಲಿಸಿ: ರಮಾಬಾಯಿ ಅಂಬೇಡ್ಕರ್‌ ಕರೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 12:36 IST
Last Updated 6 ಡಿಸೆಂಬರ್ 2022, 12:36 IST
ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಮಂಗಳವಾರ 'ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ' ಆಯೋಜಿಸಿದ್ದ ದಲಿತರ ಸಾಂಸ್ಕೃತಿಕ ಪ್ರತಿರೋಧ ಹಾಗೂ ಬೃಹತ್‌ ಪ್ರತಿಭಟನಾ ಸಮಾವೇಶದ ಒಂದು ನೋಟ -ಪ್ರಜಾವಾಣಿ ಚಿತ್ರಗಳು/ ರಂಜು ಪಿ
ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಮಂಗಳವಾರ 'ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ' ಆಯೋಜಿಸಿದ್ದ ದಲಿತರ ಸಾಂಸ್ಕೃತಿಕ ಪ್ರತಿರೋಧ ಹಾಗೂ ಬೃಹತ್‌ ಪ್ರತಿಭಟನಾ ಸಮಾವೇಶದ ಒಂದು ನೋಟ -ಪ್ರಜಾವಾಣಿ ಚಿತ್ರಗಳು/ ರಂಜು ಪಿ   

ಬೆಂಗಳೂರು: ಹಕ್ಕುಗಳಿಗಾಗಿ ಪ್ರಬಲವಾದ ಹೋರಾಟ ನಡೆಸುವುದೇ ಮೂಲಕ ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅಂಬೇಡ್ಕರ್‌ ಅವರ ಮೊಮ್ಮಗಳು ರಮಾಬಾಯಿ ಅಂಬೇಡ್ಕರ್‌ ಹೇಳಿದರು.

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ನೇತೃತ್ವದಲ್ಲಿ ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ದಲಿತ ಸಂಘಟನೆಗಳ ಬೃಹತ್‌ ಐಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಎಲ್ಲ ಹಂತದಲ್ಲೂ ಹೋರಾಟ ನಡೆಯಬೇಕು. ಮನೆಯಿಂದ, ಸಮಾಜದಿಂದ ಎಲ್ಲ ಕಡೆಗಳಲ್ಲೂ ಹೋರಾಟ ನಡೆಸಲು ಸಿದ್ಧರಾಗಬೇಕು’ ಎಂದರು.

ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬುದು ಅಂಬೇಡ್ಕರ್‌ ಈ ದೇಶದ ದುರ್ಬಲ ವರ್ಗಗಳಿಗೆ ನೀಡಿದ ದೊಡ್ಡ ಸಂದೇಶ. ಸಂಘರ್ಷ ಇಲ್ಲದೆ ಅಧಿಕಾರ, ಹಕ್ಕು ಯಾವುದೂ ಸಿಗದು. ಅಂಬೇಡ್ಕರ್‌ ಹೇಳಿದಂತೆ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಂಡು, ಸಂಘಟನೆಯನ್ನು ಕಟ್ಟಿಕೊಳ್ಳಬೇಕು. ಬಳಿಕ ಹೋರಾಟ ನಡೆಸಬೇಕು. ದಲಿತರು, ವಂಚಿತರು, ಬಹುಜನರು ಎಲ್ಲರೂ ಈ ಹೋರಾಟದ ಭಾಗವಾಗಿರಬೇಕು ಎಂದು ಹೇಳಿದರು.

ADVERTISEMENT

ಅಂಬೇಡ್ಕರ್‌ ಅವರು ದೇಶದ ಎಲ್ಲರಿಗೂ ಸಮಾನ ಮತದಾನದ ಹಕ್ಕು ನೀಡುವ ಮೂಲಕ ಪ್ರಜೆಗಳನ್ನು ಸಶಕ್ತಗೊಳಿಸುವ ಕೆಲಸ ಮಾಡಿದ್ದರು. ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು ಎಂದರು.

ಕೆಲವು ವರ್ಷಗಳಿಂದ ದೇಶದಲ್ಲಿ ಜನರ ಹಕ್ಕುಗಳಿಗೆ ಅಪಾಯ ಎದುರಾಗಿದೆ. ಉದ್ಯೋಗ, ವಿದ್ಯಾರ್ಥಿವೇತನ ಎಲ್ಲದಕ್ಕೂ ಕತ್ತರಿ ಬೀಳುತ್ತಿದೆ. ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳೂ ನಡೆಯುತ್ತಿವೆ. ಸಂವಿಧಾನವನ್ನು ರಕ್ಷಿಸಿಕೊಳ್ಳುವ ಹೊಣೆ ದೇಶದ ನಾಗರಿಕರ ಮೇಲಿದೆ ಎಂದು ರಮಾಬಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.