ADVERTISEMENT

ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕಷ್ಟೇ ಸೀಮಿತವಾದ ಕರ್ನಾಟಕ ಚಲನಚಿತ್ರ ಅಕಾಡೆಮಿ

ಅಭಿಲಾಷ್ ಪಿ.ಎಸ್‌.
Published 4 ಜನವರಿ 2026, 1:50 IST
Last Updated 4 ಜನವರಿ 2026, 1:50 IST
ಚಲನಚಿತ್ರ ಅಕಾಡೆಮಿ 
ಚಲನಚಿತ್ರ ಅಕಾಡೆಮಿ    

ಬೆಂಗಳೂರು: ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗೆ ಶ್ರಮಿಸಬೇಕಾದ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕಷ್ಟೇ ಸೀಮಿತವಾಗಿದೆ ಎಂದು ಅಕಾಡೆಮಿಯ ಕೆಲವು ಸದಸ್ಯರು ಆರೋಪಿಸಿದ್ದಾರೆ.

ಉತ್ಕೃಷ್ಟ ಸಿನಿಮಾಗಳ ಸಂರಕ್ಷಣೆ–ಪ್ರದರ್ಶನ, ಸಿನಿಮಾ ನಿರ್ಮಾಣ ಕೌಶಲ ತರಬೇತಿ, ಜನರಲ್ಲಿ ಸಿನಿಮಾಗಳ ಬಗ್ಗೆ ಆಸಕ್ತಿ, ಸಿನಿಮಾ ಸಂಸ್ಕೃತಿಯ ಪೋಷಣೆಗಾಗಿ ಕಾರ್ಯನಿರ್ವಹಿಸುವುದು ಅಕಾಡೆಮಿಯ ಮೂಲ ಮಂತ್ರ. ಆದರೆ, ಅಕಾಡೆಮಿ ಚಿತ್ರೋತ್ಸವ ಬಂದಾಗಷ್ಟೇ ಕ್ರಿಯಾಶೀಲವಾಗುತ್ತದೆ ಎನ್ನುತ್ತಾರೆ ಸದಸ್ಯರು.

2024ರ ಫೆಬ್ರುವರಿಯಲ್ಲಿ ಅಕಾಡೆಮಿ ಅಧ್ಯಕ್ಷರಾಗಿ ಸಾಧು ಕೋಕಿಲ ನೇಮಕವಾದರು. 2025ರ ಫೆಬ್ರುವರಿಯಲ್ಲಿ ಏಳು ಮಂದಿಯನ್ನು ಸಾಮಾನ್ಯ ಸಮಿತಿಗೆ ಸದಸ್ಯರನ್ನಾಗಿ ಸರ್ಕಾರ ನೇಮಿಸಿತು. ಅಕಾಡೆಮಿಯ ಸಾಮಾನ್ಯ ಸಭೆಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ಸೆಪ್ಟೆಂಬರ್‌ ಬಳಿಕ ಇಲ್ಲಿಯವರೆಗೂ ಸಭೆ ನಡೆದೇ ಇಲ್ಲ.

ಅಕಾಡೆಮಿ ಆಯೋಜಿಸುತ್ತಿದ್ದ ‘ಬೆಳ್ಳಿಹೆಜ್ಜೆ’, ಸಿನಿಮಾ ಕುರಿತಾದ ಕಾರ್ಯಾಗಾರಗಳು–ವಿಚಾರ ಸಂಕಿರಣ, ಸಂವಾದಗಳು, ಜಿಲ್ಲಾ ಮಟ್ಟದಲ್ಲಿ ಚಲನಚಿತ್ರೋತ್ಸವ ಸಪ್ತಾಹ, ರಾಷ್ಟ್ರ–ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳ ಪ್ರದರ್ಶನ ಮತ್ತು ವಿಶ್ಲೇಷಣೆಯಂಥ ಕಾರ್ಯಕ್ರಮಗಳು ನಿಂತು ಕೆಲ ವರ್ಷಗಳಾಗಿವೆ.

ADVERTISEMENT

‘ಈ ಹಿಂದೆ ನಡೆದ ಸಭೆಗಳಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳು, ಕ್ರಿಯಾ ಯೋಜನೆ ಬಗ್ಗೆ ನಿರ್ಣಯಗಳನ್ನು ಅಂಗೀಕರಿಸಿದ್ದೆವು. ಸದಸ್ಯರೊಬ್ಬರು ‘ಶಿಕ್ಷಣದಲ್ಲಿ ಚಲನಚಿತ್ರ’ ಎಂಬ ಕಲ್ಪನೆಯಡಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸಿನಿಮಾ ಕ್ಲಬ್‌ ಸ್ಥಾಪನೆ, ವಿದ್ಯಾರ್ಥಿಗಳಿಗಾಗಿ ಸಿನಿಮಾ ಸಂಬಂಧಿಸಿದ ಕಾರ್ಯಕ್ರಮ, ‍ಗಡಿನಾಡ ಚಿತ್ರೋತ್ಸವ ಆಯೋಜನೆ ಬಗ್ಗೆ ಪ್ರಸ್ತಾವನೆ ನೀಡಿದ್ದರು. ಆದರೆ ಇದರ ಮುಂದುವರಿಕೆ ಬಗ್ಗೆ ಅಕಾಡೆಮಿ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಸದಸ್ಯರು ತಾವೇ ಖರ್ಚು ಮಾಡಿ ಇಂತಹ ಕಾರ್ಯಕ್ರಮ ಆಯೋಜಿಸಲು ಸಿದ್ಧರಿದ್ದರೂ ಒಪ್ಪಿಗೆ ಸಿಗುತ್ತಿಲ್ಲ’ ಎನ್ನುತ್ತಾರೆ ಸದಸ್ಯರೊಬ್ಬರು.

ಈ ಎರಡು ವರ್ಷಗಳಲ್ಲಿ ಸಿನಿಮಾ ಕ್ಷೇತ್ರದಲ್ಲಿ ಹಲವು ಪ್ರಮುಖ ವಿದ್ಯಮಾನಗಳು ಘಟಿಸಿವೆ. ನಟ ಅನಂತನಾಗ್‌ ಅವರಿಗೆ ಪದ್ಮಭೂಷಣ, ಸಾಹಸ ನಿರ್ದೇಶಕ ಕೆ.ಎಚ್‌.ರಘು ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಾಗ ಎಲ್ಲರೂ ಸಂಭ್ರಮಿಸಿದರು. ನಟ ದ್ವಾರಕೀಶ್‌, ಬಿ.ಸರೋಜಾದೇವಿ ಸೇರಿದಂತೆ ಹಲವು ಖ್ಯಾತ ಕಲಾವಿದರು–ತಂತ್ರಜ್ಞರ ನಿಧನ ಎಲ್ಲರನ್ನೂ ಕಾಡಿತು. ಆದರೆ ಇವು ಯಾವುವೂ ಅಕಾಡೆಮಿಗೆ ಸಂಭ್ರಮಬೇಕಾದ, ನುಡಿ ನಮನ ಸಲ್ಲಿಸುವ ಸಂದರ್ಭ ಅನಿಸಲೇ ಇಲ್ಲ.

‘ಶಿವಮ್ಮ’, ‘ಫೋಟೋ’, ‘ಹೆಬ್ಬುಲಿ ಕಟ್‌’, ‘ಪಪ್ಪಿ’ಯಂಥ ಕಾಡುವ ಚಿತ್ರಗಳು ಬಂದಾಗಲಾಗಲಿ ಅಥವಾ ‘ಕಾಂತಾರ ಚಾಪ್ಟರ್‌–1’ ಮೂಲಕ ಇತರೆ ಚಿತ್ರರಂಗಗಳ ಗಮನ ಕನ್ನಡ ಚಿತ್ರರಂಗದ ಮೇಲೆ ಬಿದ್ದಾಗಲಾಗಲಿ ಅಕಾಡೆಮಿ ಜಾಗೃತವಾಗಲಿಲ್ಲ. ಈ ಸಿನಿಮಾಗಳನ್ನು ಚರ್ಚಿಸುವ, ವಿಶ್ಲೇಷಿಸುವ ವೇದಿಕೆಯನ್ನು ಕಲ್ಪಿಸಲೇ ಇಲ್ಲ.

‘ಕಾರ್ಯಕ್ರಮಗಳನ್ನು ಮಾಡದೇ ಇದ್ದರೆ ಹೋರಾಡಿ ಚಲನಚಿತ್ರ ಅಕಾಡೆಮಿ ಮಾಡಿದ ಉದ್ದೇಶವೇ ವಿಫಲವಾಗುತ್ತದೆ. ಹೊಸ ಕಾರ್ಯಕ್ರಮಗಳನ್ನು ಮಾಡಬೇಕು. ಹೀಗಾದರೆ ಚಿತ್ರರಂಗಕ್ಕೆ ಹೊಸ ವಿಷಯ ತರಬಹುದು’ ಎನ್ನುತ್ತಾರೆ ಅಕಾಡೆಮಿ ಮಾಜಿ ಅಧ್ಯಕ್ಷ ರಾಜೇಂದ್ರ ಸಿಂಗ್‌ ಬಾಬು.

ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಎರಡೂವರೆ ಎಕರೆಯಲ್ಲಿ ನಿರ್ಮಾಣವಾದ ಚಲನಚಿತ್ರ ಅಕಾಡೆಮಿಯ ಕಚೇರಿಯಲ್ಲಿ ಸುಸಜ್ಜಿತವಾದ ಥಿಯೇಟರ್‌ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ. ಚಿತ್ರೋತ್ಸವವನ್ನು ಇಲ್ಲಿಯೂ ನಡೆಸಲು ಅವಕಾಶವಿದ್ದರೂ ಆ ವ್ಯವಸ್ಥೆ, ಕಾಮಗಾರಿಗಳನ್ನು ಅಕಾಡೆಮಿ ಇಲ್ಲಿಯವರೆಗೂ ಮಾಡಿಲ್ಲ.

‘ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕು ಎನ್ನುವುದು ಸದಸ್ಯರ ಬಯಕೆ. ಬೆಳ್ಳಿಹೆಜ್ಜೆ, 50 ವರ್ಷ ಪೂರೈಸಿದ ಸಂಸ್ಥೆಗಳಿಗೆ, ಕಲಾವಿದರಿಗೆ ಸನ್ಮಾನ ಮಾಡಬೇಕು, ಅಕಾಡೆಮಿಯಲ್ಲಿ ಬಹುಪರದೆ ಚಿತ್ರಮಂದಿರ ನಿರ್ಮಾಣವಾದರೆ ಚಿತ್ರೋತ್ಸವಕ್ಕೂ, ಚಿತ್ರರಂಗಕ್ಕೂ ಸಹಾಯವಾಗಲಿದೆ ಎನ್ನುವ ಸಲಹೆ ನೀಡಿದ್ದೆ. ‘ಅನುದಾನದ ಕೊರತೆಯಿದೆ, ಮುಖ್ಯಮಂತ್ರಿಗಳನ್ನು ಕೇಳಿದ್ದೇವೆ’ ಎನ್ನುವ ಉತ್ತರ ದೊರೆಯಿತು’ ಎನ್ನುತ್ತಾರೆ ಸದಸ್ಯ ಸುಧೀಂದ್ರ ವೆಂಕಟೇಶ್‌.

ಅಕಾಡೆಮಿಯ ಕಾರ್ಯಚಟುವಟಿಕೆಗಳಿಗೆ ಘೋಷಣೆಯಾಗಿದ್ದ ಅನುದಾನವನ್ನು ಮೈಸೂರಿನಲ್ಲಿ ನಿರ್ಮಾಣವಾಗಲಿರುವ ಚಿತ್ರನಗರಿಯ ಕಾಂಪೌಂಡ್‌ ನಿರ್ಮಾಣಕ್ಕೆ ಕೊಡಲಾಗಿದೆ. ಇದರಿಂದ ಉಳಿದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತೊಡಕಾಗಿದೆ ಎನ್ನುತ್ತಾರೆ ಸದಸ್ಯರೊಬ್ಬರು.

ಅಕಾಡೆಮಿಯಲ್ಲಿ ಬಹುಪರದೆಗಳಿರುವ ಚಿತ್ರಮಂದಿರ ಸಮುಚ್ಚಯವನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ಚಲನಚಿತ್ರ ಭಂಡಾರವನ್ನು ₹3 ಕೋಟಿ ವೆಚ್ಚದಲ್ಲಿ ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ. ‘ಖಾಸಗಿ ಸಹಭಾಗಿತ್ವದಲ್ಲಿ ಈ ಚಿತ್ರಮಂದಿರ ನಿರ್ಮಾಣದ ಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಆದರೆ ಹೂಡಿಕೆದಾರರು ಬೇಕಾಗಿದ್ದಾರೆ’ ಎನ್ನುತ್ತಾರೆ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ.

ನಾನು 2024ರಲ್ಲಿ ಅಧ್ಯಕ್ಷನಾದೆ. ಹಿಂದಿನ ಅಧ್ಯಕ್ಷರಿಂದಲೂ ಏನೂ ಕಾರ್ಯಕ್ರಮ ಆಗಿರಲಿಲ್ಲ. ಕಾರ್ಯಕ್ರಮಗಳೆಲ್ಲವೂ ಆಗಿದ್ದು ರಾಜೇಂದ್ರ ಸಿಂಗ್‌ ಬಾಬು ಅವರ ಅವಧಿಯಲ್ಲಿ. ಸಿನಿಮಾದವರಿಗೆ ಕಾರ್ಯಕ್ರಮಗಳೇನಾಗಬೇಕೋ ಅವುಗಳನ್ನು ಚರ್ಚಿಸಿದ್ದೇವೆ.
–ಸಾಧು ಕೋಕಿಲ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ
ಬೇರೆಲ್ಲಾ ಅಕಾಡೆಮಿಗಳು ಕೆಲಸ ಮಾಡುತ್ತಿದ್ದು ನಾವು ನಿಷ್ಕ್ರಿಯರಾಗಿದ್ದೇವೆ. ಕ್ರಿಯಾ ಯೋಜನೆ ಕೊಟ್ಟಿದ್ದರೂ ಕಾರ್ಯಗತವಾಗುತ್ತಿಲ್ಲ. ಚಿತ್ರೋತ್ಸವಕ್ಕೆ ಬಂದ ಸಿನಿಮಾಗಳು ಅಕಾಡೆಮಿಯ ಬಳಿಯೇ ಇದ್ದು ಇವುಗಳಲ್ಲಿ ಅತ್ಯುತ್ತಮವಾದುದನ್ನು ವಾರ್ತಾ ಇಲಾಖೆ ಕಚೇರಿಯಲ್ಲಿ ಪ್ರದರ್ಶಿಸೋಣ ಎಂದಿದ್ದೆ. ಅಕಾಡೆಮಿ ಚಿತ್ರೋತ್ಸವಕ್ಕಷ್ಟೇ ಸೀಮಿತವಾಗಿದೆ
–ಐವಾನ್‌ ಡಿಸಿಲ್ವ ಸದಸ್ಯರು
ಅನುದಾನದ ಕೊರತೆ ಎನ್ನುವುದು ಸರಿಯಾದ ಉತ್ತರವಲ್ಲ. ಚಿತ್ರೋತ್ಸವದ ಸಮಿತಿಗಳಲ್ಲಿ ನಮಗೆ ಅವಕಾಶವೇ ಇಲ್ಲ. ನಮ್ಮನ್ನು ಬಳಸಿಕೊಳ್ಳದೇ ಹೋದರೆ ಸಭೆಗಷ್ಟೇ ಸೀಮಿತವಾಗುತ್ತೇವೆ.
–ಎಚ್‌.ವಿಷ್ಣುಕುಮಾರ್‌ ಸದಸ್ಯರು
ನಮಗೆ ಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಆಸೆಯಿದೆ. ಚರ್ಚೆಯೂ ನಡೆದಿದೆ. ಎಲ್ಲದಕ್ಕೂ ಅನುದಾನದ ಕೊರತೆ ಇದೆ. ಚಿತ್ರೋತ್ಸವದ ಬಳಿಕ ಕಾರ್ಯಕ್ರಮಗಳು ನಡೆಸುವ ಭರವಸೆ ನೀಡಿದ್ದಾರೆ. ಸಿನಿಮಾ ಭಂಡಾರ ನಿರ್ಮಾಣದ ಕುರಿತು ಪುಣೆ ಆರ್ಕೈವ್ಸ್‌ಗೆ ಸದಸ್ಯರು ಭೇಟಿ ನೀಡಿದ್ದೆವು. ಒಟಿಟಿ ವೇದಿಕೆ ನಿರ್ಮಾಣ ಕುರಿತು ಸಭೆ ನಡೆದಿದೆ.
–ನಿಖಿತಾ ಸ್ವಾಮಿ ಎಸ್‌. ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.