ADVERTISEMENT

ಪುರಾತತ್ವ ಇಲಾಖೆಯಲ್ಲಿ ಆರ್ಥಿಕ ಅಶಿಸ್ತು

ವೆಚ್ಚ ₹123 ಕೋಟಿ, ಆದಾಯ ₹1.68 ಕೋಟಿ; ಆದಾಯ ಸಂಗ್ರಹ ನಿರ್ಲಕ್ಷ್ಯ: ಸಿಎಜಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 23:51 IST
Last Updated 23 ಫೆಬ್ರುವರಿ 2025, 23:51 IST
   

ಬೆಂಗಳೂರು: ಸರ್ಕಾರದಿಂದ ಘೋಷಣೆ ಆದ ಅನುದಾನ ₹146.81 ಕೋಟಿ, ಬಳಕೆಯಾದ ಅನುದಾನ ₹123.65 ಕೋಟಿ. ಆದರೆ ಸ್ವಂತ ಮೂಲದಿಂದ ಗಳಿಸಿದ ಆದಾಯ ಕೇವಲ ₹1.68 ಕೋಟಿ. ಗಳಿಕೆಗೆ ಹಲವು ಮೂಲಗಳು ಇದ್ದರೂ ನಿರ್ಲಕ್ಷ್ಯದ ಕಾರಣದಿಂದ ಆದಾಯ ಅತ್ಯಂತ ಕಡಿಮೆ ಮಟ್ಟದಲ್ಲೇ ಇದೆ. ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಹಣಕಾಸಿನ ಸ್ಥಿತಿಗತಿ ಇದು.

ಮಹಾಲೇಖಪಾಲರು (ಸಿಎಜಿ) ಈಚೆಗೆ ಸಲ್ಲಿಸಿರುವ ‘ಕರ್ನಾಟಕ ರಾಜ್ಯದ ಸಂರಕ್ಷಿತ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಮತ್ತು ನಿರ್ವಹಣೆ’ ವರದಿಯಲ್ಲಿ ಈ ಮಾಹಿತಿ ಇದೆ.

2017–18ನೇ ಸಾಲಿನಿಂದ 2021–22ನೇ ಸಾಲಿನಲ್ಲಿ ಇಲಾಖೆಯ ಕಾರ್ಯವೈಖರಿಯನ್ನು ಪರಿಶೋಧನೆಗೆ ಒಳಪಡಿಸಿರುವ ಸಿಎಜಿ, ಇಲಾಖೆಯ ಕಾರ್ಯವೈಖರಿ ಮತ್ತು ಹಣಕಾಸು ನಿರ್ವಹಣೆ ಬಗೆಯನ್ನು ತರಾಟೆಗೆ ತೆಗೆದುಕೊಂಡಿದೆ.

ADVERTISEMENT

‘ಸಂರಕ್ಷಿತ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳ ಪ್ರವೇಶಕ್ಕೆ ಶುಲ್ಕ ಮತ್ತು ಪಾರ್ಕಿಂಗ್‌ ಶುಲ್ಕ ವಿಧಿಸಲು ಅವಕಾಶವಿದೆ. ಬೆಂಗಳೂರಿನ ವಸ್ತು ಸಂಗ್ರಹಾಲಯದಲ್ಲಿ ಮಾತ್ರ ಪ್ರವೇಶಕ್ಕೆ, ಮಂಗಳೂರಿನ ವಸ್ತು ಸಂಗ್ರಹಾಲಯದಲ್ಲಿ ಪಾರ್ಕಿಂಗ್‌ಗೆ ಶುಲ್ಕ ವಿಧಿಸುವುದು ಹೊರತುಪಡಿಸಿ, ಬೇರೆಲ್ಲೂ ಶುಲ್ಕ ವ್ಯವಸ್ಥೆ ಜಾರಿಗೆ ತಂದಿಲ್ಲ. ಪರಿಣಾಮವಾಗಿ ಅಪಾರ ಪ್ರಮಾಣದ ಆದಾಯ ನಷ್ಟವಾಗಿದೆ’ ಎಂದು ಸಿಎಜಿ ವಿವರಿಸಿದೆ.

‘ವಸ್ತು ಸಂಗ್ರಹಾಲಯಗಳಲ್ಲಿ ಪ್ರವೇಶ ಮತ್ತು ಪಾರ್ಕಿಂಗ್‌ ಶುಲ್ಕ ವಿಧಿಸಿ ಎಂದು ಇಲಾಖೆ ಸುತ್ತೋಲೆ ಹೊರಡಿಸಿದ್ದರೂ ಅದು ಜಾರಿಯಾಗಿಲ್ಲ. ಹೀಗಾಗಿ ಎಲ್ಲ ವೆಚ್ಚಕ್ಕೂ ಸರ್ಕಾರದ ಅನುದಾನವನ್ನೇ ಅವಲಂಬಿಸ ಬೇಕಾಗಿದೆ. ಪ್ರವಾಸೋದ್ಯಮ ಇಲಾಖೆ ರೀತಿಯಲ್ಲಿ, ಅಗತ್ಯವಿದ್ದೆಡೆ ಪ್ರವೇಶ ಶುಲ್ಕ ವಿಧಿಸಿ ಆದಾಯ ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ಒಂದು ಸ್ಪಷ್ಟ ನೀತಿ ರೂಪಿಸಬೇಕು’ ಎಂದು ಶಿಫಾರಸು ಮಾಡಿದೆ.

ಆರ್ಥಿಕ ಅಶಿಸ್ತಿಗೆ ಅಸಮಾಧಾನ: ‘ಪುರಾತತ್ವ ಮೌಲ್ಯ ಹೊಂದಿರುವ ತಾಣಗಳ ಪತ್ತೆ, ಸಂರಕ್ಷಣೆ ಮತ್ತು ನಿರ್ವಹಣೆ ಇಲಾಖೆಯ ಪ್ರಧಾನ ಹೊಣೆಗಾರಿಕೆ. ಒಟ್ಟು ಅನುದಾನದಲ್ಲಿ ಶೇ 50.8ರಷ್ಟನ್ನು ಉತ್ಖನನ ಮತ್ತು ಸಂರಕ್ಷಣೆಗೆ ಬಳಸುತ್ತಿದೆ. ಶೇ 28.17ರಷ್ಟು ಅನುದಾನವನ್ನು ಆಡಳಿತ ವೆಚ್ಚಕ್ಕೆಂದೇ ಬಳಸುತ್ತಿದೆ. ಪರಿಣಾಮವಾಗಿ ಸಂರಕ್ಷಿತ ತಾಣಗಳ ನಿರ್ವಹಣೆಗೆ ಅಗತ್ಯ ಹಣ ಇಲ್ಲದಂತಾಗಿದ್ದು, ಅವುಗಳ ಸ್ಥಿತಿ ಶೋಚನೀಯವಾಗಿದೆ’ ಎಂದು ಸಿಎಜಿ ಹೇಳಿದೆ.

‘ಲೆಕ್ಕಪರಿಶೋಧನೆಗೆ ಆಯ್ಕೆ ಮಾಡಿಕೊಳ್ಳಲಾದ ಐದು ವರ್ಷಗಳಲ್ಲಿ ಸಂರಕ್ಷಿತ ಪುರಾತತ್ವ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳ ನಿರ್ವಹಣೆಗೆ ಇಲಾಖೆ ನಿಗದಿ ಮಾಡಿದ್ದು ₹39 ಲಕ್ಷ ಮಾತ್ರ. ಪುರಾತತ್ವ ಸ್ಮಾರಕಗಳ ರಕ್ಷಣೆ ಸಂಬಂಧ ರಾಜ್ಯದಲ್ಲಿ ಒಂದು ಸ್ಪಷ್ಟ ನೀತಿ ಇಲ್ಲದೇ ಇರುವುದೇ ಇದಕ್ಕೆ ಕಾರಣ’ ಎಂದು ವಿಶ್ಲೇಷಿಸಿದೆ.

‘ಇಲಾಖೆಯಲ್ಲಿ ಬಳಕೆಯಾಗದೆ ಉಳಿದ ಅನುದಾನವನ್ನು ವಾಪಸ್‌ ಮಾಡದೆ, ಹಾಗೇ ಉಳಿಸಿಕೊಳ್ಳಲಾಗಿದೆ. ಇದು ನಿಯಮ ಬಾಹಿರ. 2012ರಲ್ಲಿ ಉಳಿದಿದ್ದ ಅನುದಾನವು 2018ರ ವೇಳೆಗೂ ಬಳಕೆಯಾಗಿಲ್ಲ ಎಂಬುದು ಪತ್ತೆಯಾಗಿದೆ. ಇದನ್ನು ಸರಿಪಡಿಸಿ, ಆರ್ಥಿಕ ಶಿಸ್ತು ತರುವ ಅಗತ್ಯವಿದೆ’ ಎಂದಿದೆ.

ಸ್ಮಾರಕ ತಾಣಗಳ ನಿರ್ಲಕ್ಷ್ಯ

  • ಸಂರಕ್ಷಿತ ಸ್ಮಾರಕಗಳ ಸಂಖ್ಯೆಗೆ ಸಂಬಂಧಿಸಿ ಇಲಾಖೆಯ ಬಳಿ ಇರುವ ದತ್ತಾಂಶಗಳು ಮತ್ತು ಜಿಲ್ಲಾ ಮಟ್ಟದಲ್ಲಿನ ದತ್ತಾಂಶಗಳು ಪರಸ್ಪರ ತಾಳೆಯಾಗುವುದಿಲ್ಲ

  • ರಾಜ್ಯದಾದ್ಯಂತ ಒಟ್ಟು 844 ಸ್ಮಾರಕಗಳನ್ನು ಗುರುತಿಸಿರುವುದಾಗಿ ಇಲಾಖೆ ಹೇಳಿದರೆ ಜಿಲ್ಲಾ ಮಟ್ಟದ ದತ್ತಾಂಶಗಳು 848 ಸ್ಮಾರಕಗಳನ್ನು ತೋರಿಸುತ್ತವೆ

  • 561 ಸ್ಮಾರಕಗಳ ರಕ್ಷಣೆಗೆ ಹೊರಡಿಸಿದ ಅಧಿಸೂಚನೆ ಸಂಬಂಧ ದಾಖಲೆಗಳೇ ಲಭ್ಯವಿಲ್ಲ

  • ಸಂರಕ್ಷಣೆ ಯೋಜನೆ ಅಡಿಯಲ್ಲಿ 9552 ಸ್ಮಾರಕಗಳನ್ನು ಗುರುತಿಸಿದ್ದು ಹಲವು ವರ್ಷ ಕಳೆದರೂ ಸಂರಕ್ಷಣೆಗೆ ಅಧಿಸೂಚನೆ ಹೊರಡಿಸಿಲ್ಲ

  • ಕಲಬುರಗಿ ಹಾವೇರಿ ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರಾಗೈತಿಹಾಸಿಕ ತಾಣಗಳೆಂದು ಅಧಿಸೂಚನೆ ಹೊರಡಿಸಿದ 6 ಮತ್ತು 13 ಐತಿಹಾಸಿಕ ತಾಣಗಳು ಎಲ್ಲಿವೆ ಎಂದು ಇಲಾಖೆಯ ಅಧಿಕಾರಿಗಳಿಗೇ ಗೊತ್ತಿಲ್ಲ. ಅವುಗಳು ಪತ್ತೆಯಾಗಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.