ADVERTISEMENT

ರಾಜ್ಯದ ವಸತಿಶಾಲೆ ಮಕ್ಕಳ ಮೊದಲ ಮೇಳ: ಗಮನಸಳೆದ ವಿಜ್ಞಾನ ಮಾದರಿಗಳು

ರಾಜ್ಯದ ವಸತಿಶಾಲೆ ಮಕ್ಕಳ ಮೊದಲ ಮೇಳ l ಇಸ್ರೊ ವಿಜ್ಞಾನಿ ನಾಗರಾಜ್ ಅನಂತ್‌ ಭಾಗಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 22:35 IST
Last Updated 27 ಜನವರಿ 2023, 22:35 IST
ಬೆಂಗಳೂರಿನಲ್ಲಿ ಶುಕ್ರವಾರ ಆರಂಭವಾದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ವಿಮಾನದ ಮಾದರಿ ವೀಕ್ಷಿಸಿದರು
ಬೆಂಗಳೂರಿನಲ್ಲಿ ಶುಕ್ರವಾರ ಆರಂಭವಾದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ವಿಮಾನದ ಮಾದರಿ ವೀಕ್ಷಿಸಿದರು   

ಬೆಂಗಳೂರು: ‘ಸಾರ್ ಅಷ್ಟೊಂದು ಉಪಗ್ರಹಗಳನ್ನು ವಿವಿಧ ದೇಶಗಳು ಭೂ ಕಕ್ಷೆಗೆ ಬಿಡುತ್ತಿವೆ. ಅವುಗಳ ಆಯಸ್ಸು ಮುಗಿದ ಮೇಲೆ ಭೂಮಿಗೆ ಬೀಳುವುದಿಲ್ಲವೇ? ಅಪಾಯ ಅಲ್ಲವೇ?’

–ಇದು ದಾವಣಗೆರೆ ಜಗಳೂರು ಮುಗ್ಗಿದರಾಗಿಹಳ್ಳಿ ಮೊರಾರ್ಜಿ ಶಾಲೆಯ ಭಾವನಾ, ತೃಪ್ತಿ ಅವರು ಶುಕ್ರವಾರ ಆರಂಭವಾದ ವಿಜ್ಞಾನ ಮೇಳದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿ ನಾಗರಾಜ್ ಅನಂತ್‌ ಅವರನ್ನು ಪ್ರಶ್ನಿಸಿದ
ಪರಿ.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಸಾಗರದಲ್ಲಿ ಅವುಗಳನ್ನು ಬೀಳಿಸಲಾಗುತ್ತದೆ. ಹಾಗಾಗಿ ಮನುಷ್ಯರಿಗೆ ಏನೂ ಆಗದು’ ಎಂದರು.

ADVERTISEMENT

‘ಅಯ್ಯೋ ಅಲ್ಲಿನ ಎಷ್ಟೊಂದು ಜಲಚರಗಳು ಸಾಯುತ್ತವೆ ಅಲ್ಲವೆ?’ ಎಂದ ಮಕ್ಕಳಲ್ಲಿನ ಪರಿಸರ ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಯಿತು.

ನೆಲಮಂಗಲ ಸಮೀಪದ ಭೈರನಾಯಕನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆಯ ಮಕ್ಕಳು ಸಿದ್ಧಪಡಿಸಿದ್ದ ಬೀದಿ ದೀಪದಲ್ಲಿ ಸಮಸ್ಯೆ ಎದುರಾದಾಗ ಮೊಳಗಿಸುವ ಎಚ್ಚರಿಕೆ ನೀಡುವ ಸೈರನ್, ಚನ್ನಗಿರಿ ತಾಲ್ಲೂಕು ಕಾಕನೂರು ಶಾಲೆಯ ಮಕ್ಕಳ ತ್ಯಾಜ್ಯ ಪ್ಲಾಸ್ಟಿಕ್‌ ಸದ್ಬಳಕೆಯ ತಂತ್ರಜ್ಞಾನ, ರಸ್ತೆ ಉಬ್ಬುಗಳಿಂದ ವಿದ್ಯುತ್ ಉತ್ಪಾದಿಸುವ ಚನ್ನಪಟ್ಟಣ ಹೊನ್ನನಾಯಕನ ಹಳ್ಳಿ ಮಕ್ಕಳ ಆವಿಷ್ಕಾರ, ಶಿವಮೊಗ್ಗ ಜಿಲ್ಲೆ ಗಾಜನೂರು ವಸತಿಶಾಲೆ ಮಕ್ಕಳ ವಾಲಿಬಾಲ್‌ ಅಂಕಣದಿಂದ ವಿದ್ಯುತ್‌ ಉತ್ಪಾದನೆ, ಚಾಮರಾಜಪೇಟೆ ಶಾಲೆಯ ಮಕ್ಕಳ ಭಾರದ ವಸ್ತು ಎತ್ತುವ ರಾಟೆಗಳು, ಆನೇಕಲ್ ಕಿತ್ತೂರು ರಾಣಿ‌ ಚೆನ್ನಮ್ಮ ಶಾಲೆಯ ಮಕ್ಕಳ ಪೆಪ್ಪರ್ ಭೂತ, ಕೋಲಾರ ಅಂಬೇಡ್ಕರ್ ವಸತಿಶಾಲೆ ಮಕ್ಕಳ ಸಮುದ್ರದಲ್ಲಿ ಹಡಗುಗಳಿಂದ ತೈಲ ಸೋರಿಕೆ ತಡೆ ಸಾಧನ, ಗೌರಿಬಿದನೂರು ಶಾಲೆ ಮಕ್ಕಳ ಔಷಧ ಸಸ್ಯ ಸಂರಕ್ಷಣೆ ವಿಧಾನಗಳು ಗಮನಸೆಳೆದವು.

ವಾತಾವರಣದಲ್ಲಿ ಹೆಚ್ಚಿನ ಇಂಗಾಲ ಡೈಆಕ್ಸೈಡ್‌ ಅನ್ನು ಆಮ್ಲಜನಕವಾಗಿ ಪರಿವರ್ತನೆ ಮಾಡುವ ಮಾದರಿ, ಜೈವಿಕ ಅನಿಲ ಉತ್ಪಾದನಾ ಮಾದರಿ, ಸದೃಢ ಹಾಗೂ ಆಧುನಿಕ ಕೃಷಿ ವಿಧಾನ, ವಿದ್ಯುತ್ ಕಳವು ನಿಯಂತ್ರಣ, ವಾತಾವರಣದಲ್ಲಿನ ತೇವಾಂಶ ವಿದ್ಯುತ್ ಆಗಿ ಪರಿವರ್ತನೆ, ಪ್ರವಾಹ ಮುನ್ಸೂಚನೆ ಸಾಧನಗಳು, ಬಾಹ್ಯಾಕಾಶದ ರೋಬೊ, ರಸ್ತೆ ಸುರಕ್ಷತೆ, ನೈಸರ್ಗಿಕ ತಂಪು, ಅಂಗವಿಕಲರಿಗೆ ಸೆನ್ಸಾರ್ ಸ್ಟಿಕ್, ಮಾದರಿ ಕೈಗಾರಿಕಾ ಪದ್ಧತಿ, ಸುರಕ್ಷತಾ ವಾಹನ ಸಂಚಾರ ಸೇರಿದಂತೆ ಹಲವು ಮಾದರಿಗಳು ಜನರನ್ನು
ಆಕರ್ಷಿಸಿದವು.

ಭಾರತೀಯ ಸೇನೆ ಪ್ರಸುತ ಪಡಿಸಿರುವ ಆಕರ್ಷಕ ಶಸ್ತ್ರಾಸ್ತಗಳು, ರಾಕೆಟ್‌, ವಿಮಾನ ಹಾಗೂ ಹೆಲಿಕಾಪ್ಟರ್ ಮಾದರಿ, ವಿಂಟೇಜ್ ಕಾರುಗಳ ಪ್ರದರ್ಶನ ವಿದ್ಯಾರ್ಥಿಗಳನ್ನು ಆಕರ್ಷಿಸಿದವು. 200ಕ್ಕೂ ಹೆಚ್ಚು ವಸತಿಶಾಲೆಗಳ ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಮಾದರಿಗಳ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.