ADVERTISEMENT

ಕುಂದಾಪುರ ಕಡಲ ತೀರ: ಬಲೆಗೆ ಬಿದ್ದ ರಾಶಿ ರಾಶಿ ಮೀನು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 12:45 IST
Last Updated 17 ನವೆಂಬರ್ 2018, 12:45 IST
   

ಉಡುಪಿ: ಕುಂದಾಪುರ ಸಮೀಪದ ಕೋಡಿ ಹಳೆ ಅಳವೆ ಕಡಲತೀರದಲ್ಲಿ ಈಚೆಗೆ ಕೈರಂಪಣಿ ಬಲೆಗೆ ರಾಶಿರಾಶಿ ಭೂತಾಯಿ (ಬೈಗೆ) ಮೀನು ಸಿಕ್ಕಿಬಿದ್ದಿದೆ. ಬಲೆಗೆ ಸಿಕ್ಕಿಬಿದ್ದ ಭಾರಿ ಪ್ರಮಾಣದ ಮೀನನ್ನು ದಡಕ್ಕೆ ಎಳೆದು ತರಲು ಮೀನುಗಾರರು ಹರಸಾಹಸ ಪಡಬೇಕಾಯಿತು.

ಬಲೆಯನ್ನು ದಡಕ್ಕೆ ಎಳೆದು ತರುತ್ತಿದ್ದಂತೆ ಮೀನುಗಳು ವಿಲವಿಲನೆ ಒದ್ದಾಡಿದವು. ಸ್ಥಳೀಯರು ಕೈಗೆ ಸಿಕ್ಕಷ್ಟು ಬಾಚಿಕೊಂಡು ಹೋದರು. ತೀರದಲ್ಲಿ ವಾಸಮಾಡುತ್ತಿದ್ದ ಮೀನುಗಾರರು, ವ್ಯಾಪಾರಿಗಳೆಲ್ಲ ಸೇರಿ ಮೀನಿನ ರಾಶಿಯನ್ನು ದಡಕ್ಕೆ ಎಳೆದುತಂದರು.

ಕರಾವಳಿಯಲ್ಲಿ ಭೂತಾಯಿ ಮೀನಿಗೆ ಬೇಡಿಕೆ ಹೆಚ್ಚು. ಸ್ಥಳೀಯವಾಗಿ ಇದನ್ನು ಬೈಗೆ ಎಂತಲೂ ಕರೆಯಲಾಗುತ್ತದೆ. ಇತರ ಮೀನುಗಳಿಗಿಂತ ಭೂತಾಯಿ ಮೀನಿನ ರುಚಿ ಭಿನ್ನ. ಹೊರ ರಾಜ್ಯಗಳಲ್ಲೂ ಈ ಮೀನಿಗೆ ಬೇಡಿಕೆ ಹೆಚ್ಚು ಎನ್ನುತ್ತಾರೆ ಸ್ಥಳೀಯ ಮೀನುಗಾರರು.

ADVERTISEMENT

ಅಪರೂಪಕ್ಕೊಮ್ಮೆ ಈ ರೀತಿ ರಾಶಿ ಮೀನುಗಳು ಸಾಂಪ್ರದಾಯಿಕ ಮೀನುಗಾರರ ಬಲೆಗೆ ಬೀಳುತ್ತವೆ. ಹೆಚ್ಚಾಗಿ ಬಂಗುಡೆ, ಭೂತಾಯಿ ಹಾಗೂ ನಂಗ್ ಜಾತಿಯ ಮೀನುಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಬಂಪರ್ ಲಾಟರಿ ಹೊಡೆದಂತೆ ಎನ್ನುತ್ತಾರೆ ಮೀನುಗಾರರು.

ರಾಶಿ ಮೀನುಗಳು ಬಲೆಗೆ ಬೀಳುವುದು ಏಕೆ?

ಆಳ ಸಮುದ್ರದಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆ ಸಂಪೂರ್ಣವಾಗಿ ನಿಷೇಧವಾಗಿರುವುದರಿಂದ ಬಂಗುಡೆ, ಭೂತಾಯಿ ಸೇರಿದಂತೆ ಸಣ್ಣಗಾತ್ರದ ಮೀನುಗಳ ಪ್ರಮಾಣ ಹೆಚ್ಚಾಗಿದೆ. ಈ ಜಾತಿಯ ಮೀನುಗಳು ಏಕಾಂಗಿಯಾಗಿ ಸಂಚರಿಸುವುದಿಲ್ಲ. ಗುಂಪಾಗಿಯೇ ಸಾಗುತ್ತವೆ. ಸಮುದ್ರದಲ್ಲಿ ಬೋಟ್‌ಗಳ ಸದ್ದಿಗೆ ಹೆದರಿ ಕೆಲವೊಮ್ಮೆ ದಡದತ್ತ ಬರುತ್ತವೆ. ಹೀಗೆ, ಬರುವಾಗ ಕೈರಂಪಣಿ ಬಲೆಗೆ ಬೀಳುತ್ತವೆ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಾರ್ಶ್ವನಾಥ್ ಮಾಹಿತಿ ನೀಡಿದರು.

ಈಚೆಗೆ ಹೆಜಮಾಡಿ, ಪಡುಬಿದ್ರೆ ಬೀಚ್‌ಗಳಲ್ಲೂ ಬಲೆಗೆ ಭಾರಿ ಪ್ರಮಾಣದ ಮೀನುಗಳು ಬಿದ್ದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.