ADVERTISEMENT

ರಾತ್ರಿಯಿಡೀ ಹಾರಾಡಿದ ರಾಷ್ಟ್ರ ಧ್ವಜ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 19:02 IST
Last Updated 27 ಜನವರಿ 2021, 19:02 IST
ಹೊಸಪೇಟೆ ರೋಟರಿ ವೃತ್ತದ 150 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಬುಧವಾರ ಸತತ ಎರಡನೇ ದಿನ ರಾಷ್ಟ್ರ ಧ್ವಜ ಹಾರಾಡಿತು
ಹೊಸಪೇಟೆ ರೋಟರಿ ವೃತ್ತದ 150 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಬುಧವಾರ ಸತತ ಎರಡನೇ ದಿನ ರಾಷ್ಟ್ರ ಧ್ವಜ ಹಾರಾಡಿತು   

ಹೊಸಪೇಟೆ: ಗಣರಾಜ್ಯೋತ್ಸವದ ನಿಮಿತ್ತ ನಗರದ ರೋಟರಿ ವೃತ್ತದ 150 ಅಡಿ ಧ್ವಜ ಸ್ತಂಭದಲ್ಲಿ ಮಂಗಳವಾರ ಬೆಳಿಗ್ಗೆ ಹಾರಿಸಿದ ತ್ರಿವರ್ಣ ಧ್ವಜ ರಾತ್ರಿಯಿಡೀ ಹಾರಾಡಿದೆ.

ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಅವರು ಧ್ವಜಾರೋಹಣ ಮಾಡಿದ್ದರು. ಆ ಧ್ವಜ ಮಂಗಳವಾರ ರಾತ್ರಿ, ಬುಧವಾರ ದಿನವಿಡೀ ಹಾಗೆಯೇ ಇತ್ತು. ಸಚಿವರ ಕಡೆಯವರು ಕಾರ್ಯಕ್ರಮ ಸಂಘಟಿಸಿದ್ದರಿಂದ ಜಿಲ್ಲಾಡಳಿತ ಮೌನವಾಗಿದೆ. ಬೇರೆಯವರು ಈ ರೀತಿ ಕಾನೂನು ಉಲ್ಲಂಘಿಸಿದ್ದರೆ ಸುಮ್ಮನೆ ಇರುತ್ತಿದ್ದರೆ ಎಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ.

ಈ ಕುರಿತು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಎಲ್ಲೇ ರಾಷ್ಟ್ರ ಧ್ವಜಾರೋಹಣ ಮಾಡಿದರೆ ಸೂರ್ಯಾಸ್ತದ ವೇಳೆ ಗೌರವದಿಂದ ಕೆಳಗಿಳಿಸಬೇಕು. ರಾತ್ರಿಯಿಡೀ ಹಾಗೆಯೇ ಇಡುವಂತಿಲ್ಲ. ರೋಟರಿ ವೃತ್ತದಲ್ಲಿ ಹಾರಿಸಿರುವ ಧ್ವಜ ತಾಲ್ಲೂಕು ಆಡಳಿತಕ್ಕೆ ಸಂಬಂಧಿಸಿದ್ದಲ್ಲ. ಆದರೆ, ಅಲ್ಲಿ ಮೊದಲ ಬಾರಿಗೆ ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಿರುವುದರಿಂದ ನೋಡಲು ಅಂದವಾಗಿ ಕಾಣುತ್ತದೆ ಎಂದು ರಾತ್ರಿಯೂ ಹಾಗೆಯೇ ಬಿಟ್ಟಿದ್ದಾರೆ. ಬುಧವಾರ ಸಂಜೆಯೊಳಗೆ ಧ್ವಜ ಕೆಳಗಿಳಿಸುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘100 ಅಡಿಗಿಂತ ಎತ್ತರದಲ್ಲಿ ಹಗಲು, ರಾತ್ರಿ ರಾಷ್ಟ್ರ ಧ್ವಜ ಹಾಗೆಯೇ ಇಡಬಹುದು. ‘ಮಾನುಮೆಂಟಲ್‌ ಫ್ಲ್ಯಾಗ್‌’ಗಳಿಗೆ ಮಾತ್ರ ಈ ಅವಕಾಶ ಕೊಡಲಾಗಿದೆ’ ಎಂದು ಡಿವೈಎಸ್ಪಿ ವಿ. ರಘುಕುಮಾರ, ಉಪವಿಭಾಗಾಧಿಕಾರಿ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.