ADVERTISEMENT

ನೆರೆ ಪರಿಹಾರ ವಿತರಣೆಯಲ್ಲಿ ಲೋಪ: ಟಿ.ಎ.ನಾರಾಯಣಗೌಡ

ಕೇಂದ್ರದಿಂದ ಪರಿಹಾರ ತರಲು ರಾಜ್ಯ ಸರ್ಕಾರ ವಿಫಲ: ಕರವೇ ಆರೋಪ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 21:30 IST
Last Updated 14 ನವೆಂಬರ್ 2020, 21:30 IST

ಬೆಂಗಳೂರು: ‘ಉತ್ತರ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳಿಗೆ ಇದುವರೆಗೆ ಕೇವಲ ₹4.5 ಕೋಟಿಗಳಷ್ಟು ಪರಿಹಾರ ವಿತರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿಕೆ ನೀಡಿದ್ದಾರೆ. ಆದರೆ, ಆಗಿರುವ ನಷ್ಟಕ್ಕೂ ವಿತರಿಸಲಾಗಿರುವ ಪರಿಹಾರಕ್ಕೂ ಅಜಗಜಾಂತರವಿದೆ. ಪರಿಹಾರ ವಿತರಣೆಯಲ್ಲೂ ತಾರತಮ್ಯ ಮಾಡಲಾಗಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ.ನಾರಾಯಣಗೌಡ ಆರೋಪಿಸಿದರು.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೆರೆಪೀಡಿತರ ಸ್ಥಿತಿಗತಿ ಬಗ್ಗೆ ಚರ್ಚಿಸಲು ಕರವೇ ಶನಿವಾರ ಏರ್ಪಡಿಸಿದ್ದ ವಿಡಿಯೊ ಸಂವಾದದಲ್ಲಿ ಆ ಜಿಲ್ಲೆಗಳ ಮುಖಂಡರು, ಸರ್ಕಾರ ಸಂತ್ರಸ್ತರನೆರವಿಗೆ ಧಾವಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

‘ಈ ಭಾಗದಲ್ಲಿ ಸುಮಾರು ₹25 ಸಾವಿರ ಕೋಟಿ ನಷ್ಟ ಸಂಭವಿಸಿದೆ ಎಂದು ಕಂದಾಯ ಸಚಿವರೇ ಹೇಳಿಕೆ ನೀಡಿದ್ದಾರೆ. ಆದರೆ, ವಾಸ್ತವವಾಗಿ ಅದಕ್ಕಿಂತ ಮೂರುಪಟ್ಟು ನಷ್ಟ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಇದನ್ನು ಗಮನಿಸಿದರೆ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇದೆಯೇ ಎಂಬ ಅನುಮಾನ ಮೂಡುತ್ತಿದೆ’ ಎಂದರು.

ADVERTISEMENT

’ಕೇಂದ್ರ ಸರ್ಕಾರದಿಂದ ಪರಿಹಾರ ತರಲು ರಾಜ್ಯ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರದ ಮೇಲೆ ಒತ್ತಡ ಹೇರಿ ಪರಿಹಾರ ತರುವ ಶಕ್ತಿ ಕಳೆದುಕೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಅಭಿವೃದ್ಧಿಗೆ ಒಳ್ಳೆಯದು ಎಂದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರತಿಪಾದಿಸಿತ್ತು. ಆದರೆ, ಆ ಮಾತು ಸುಳ್ಳಾಗಿದೆ. ಸರ್ಕಾರದ ವೈಫಲ್ಯದ ವಿರುದ್ಧ ದನಿ ಎತ್ತಬೇಕಿದ್ದ ವಿರೋಧ ಪಕ್ಷಗಳೂ ಮೌನಕ್ಕೆ ಶರಣಾಗಿವೆ’ ಎಂದು ಟೀಕಿಸಿದರು.

‘ಶೀಘ್ರವೇ ನೆರೆಪೀಡಿತ ಜಿಲ್ಲೆಗಳ ಕರವೇ ಘಟಕಗಳ ಅಧ್ಯಕ್ಷರ ನಿಯೋಗವನ್ನು ಮುಖ್ಯಮಂತ್ರಿ ಬಳಿ ಕರೆದೊಯ್ಯಲಿದ್ದೇವೆ. ಪರಿಹಾರ ಸಿಗದಿದ್ದರೆ, ರಾಜ್ಯದಾದ್ಯಂತ ಬೃಹತ್ ಹೋರಾಟ ಅನಿವಾರ್ಯ’ ಎಂದು ಎಚ್ಚರಿಸಿದರು.

ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ ಜಾವಗಲ್‌, ‘ಸಂತ್ರಸ್ತರ ಪಾಲಿಗೆ ಈಗ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆರಡೂ ಇಲ್ಲವಾಗಿವೆ. ಪ್ರತಿಭಟನೆಗೆ ಕೊರೊನಾ ನೆಪ ಹೇಳಿಅನುಮತಿ ನಿರಾಕರಿಸುವ ಮೂಲಕ ಚಳವಳಿಗಳನ್ನು ಹತ್ತಿಕ್ಕಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ನಿರ್ಣಾಯಕ ಹೋರಾಟವನ್ನು ಸಂಘಟಿಸಬೇಕಿದೆ. ರಾಜ್ಯದ ಜನರೂ ದೇಶದ ಪ್ರಜೆಗಳು ಎಂಬುದನ್ನು ಮನದಟ್ಟು ಮಾಡಬೇಕಿದೆ’ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷರಾದ ಹನುಮಂತ ಅಬ್ಬಿಗೇರಿ (ಗದಗ), ಮಹೇಶ್ ಕಾಶಿ (ಕಲಬುರ್ಗಿ), ಸೋಮುನಾಥ ಮುಧೋಳ (ಬೀದರ್), ಎಂ.ಸಿ.ಮುಲ್ಲಾ (ಬಿಜಾಪುರ), ಭೀಮೂ ನಾಯಕ್ (ಯಾದಗಿರಿ), ವಿನೋದ್ ರೆಡ್ಡಿ (ರಾಯಚೂರು), ರುದ್ರೇಶ್ (ಧಾರವಾಡ), ದೀಪಕ್ (ಬೆಳಗಾವಿ), ರಮೇಶ್ ಬದ್ನೂರ (ಬಾಗಲಕೋಟೆ) ಅವರು ಸಭೆಯಲ್ಲಿ ತಮ್ಮ ಜಿಲ್ಲೆಗಳ ಪ್ರವಾಸ ಸಂತ್ರಸ್ತರ ಸ್ಥಿತಿ ಗತಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.