ADVERTISEMENT

ಕೃಷ್ಣೆಯ ಪ್ರವಾಹ ಯಥಾಸ್ಥಿತಿ: ಬೆಳಗಾವಿಯಲ್ಲಿ ತಗ್ಗಿದ ಪ್ರವಾಹ

ಶಿವಮೊಗ್ಗ, ಕೊಡಗಿನಲ್ಲಿ ಮಳೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 19:31 IST
Last Updated 30 ಜುಲೈ 2021, 19:31 IST
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಅನಕಸುಗುರು ಗ್ರಾಮದಲ್ಲಿ ಭತ್ತದ ಗದ್ದೆ ಜಲಾವೃತವಾಗಿರುವುದು
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಅನಕಸುಗುರು ಗ್ರಾಮದಲ್ಲಿ ಭತ್ತದ ಗದ್ದೆ ಜಲಾವೃತವಾಗಿರುವುದು   

ರಾಯಚೂರು/ಯಾದಗಿರಿ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೊರಬಿಡುವ ನೀರಿನ ಪ್ರಮಾಣ ಏರುಗತಿಯಲ್ಲಿದ್ದು, ಯಾದಗಿರಿ ಜಿಲ್ಲೆಯಲ್ಲಿ ನದಿತೀರದ ಗ್ರಾಮಗಳಲ್ಲಿ ಆತಂಕ ತಲೆದೋರಿದೆ.

ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ, ವಡಗೇರಾ ತಾಲ್ಲೂಕಿನ ಸಾವಿರಾರು ಎಕರೆಯಲ್ಲಿ ಬೆಳೆ ಜಲಾವೃತವಾಗಿದೆ. ಸುರಪುರ ತಾಲ್ಲೂಕಿನಲ್ಲಿ 15 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ಪ್ರವಾಹ ಮಟ್ಟ ಯಥಾಸ್ಥಿತಿಯಲ್ಲಿದೆ.

ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯು ತಗ್ಗಿದೆ. ಮಹಾರಾಷ್ಟ್ರ ಮತ್ತು ಗಡಿ ಭಾಗದಲ್ಲಿ ಮಳೆ ಬಹುತೇಕ ಕಡಿಮೆಯಾಗಿದೆ. ಮಹಾರಾಷ್ಟ್ರದ ಕಡೆಯಿಂದ 3.04 ಲಕ್ಷ ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಬಂದು ಸೇರುತ್ತಿದೆ.

ADVERTISEMENT

ಚಿಕ್ಕೋಡಿ, ಕಾಗವಾಡ, ರಾಯಬಾಗ ಮತ್ತು ಅಥಣಿ ತಾಲ್ಲೂಕುಗಳ ನದಿ ತೀರಿದ ಗ್ರಾಮಗಳು ಜಲಾವೃತ ಸ್ಥಿತಿಯಲ್ಲೇ ಇವೆ. ಮಲ‍ಪ್ರಭಾ, ಮಾರ್ಕಂಡೇಯ ಹಾಗೂ ಘ‍ಟಪ್ರಭಾ ನದಿಗಳಲ್ಲಿಯೂ ಪ್ರವಾಹ ತಗ್ಗಿದೆ.

ಶಿವಮೊಗ್ಗ ವರದಿ: ಜಿಲ್ಲೆಯಲ್ಲಿ ಹೊಸನಗರ, ಸೊರಬ, ಶಿಕಾರಿಪುರ, ಸಾಗರ ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. 186 ಅಡಿ ಸಾಮರ್ಥ್ಯದ ಭದ್ರಾ ಜಲಾಶಯಲ್ಲಿ ನೀರಿನ ಮಟ್ಟ 181.90 ಅಡಿಗೆ ತಲುಪಿದೆ. ಲಿಂಗನಮಕ್ಕಿ ಜಲಾಶಯಕ್ಕೆ 21 ಸಾವಿರ ಕ್ಯುಸೆಕ್‌, ತುಂಗಾ ಜಲಾಶಯಕ್ಕೆ 16 ಸಾವಿರ ಕ್ಯುಸೆಕ್‌ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರು ಬಿಡಲಾಗುತ್ತಿದೆ.

ಬಿರುಸಿನ ಮಳೆ: ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ತಲಕಾವೇರಿ, ಭಾಗಮಂಡಲ, ಕಕ್ಕಬ್ಬೆ, ಕುಂಜಿಲ ಭಾಗದಲ್ಲಿ ಬಿರುಸಿನ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.