ADVERTISEMENT

386 ಹುದ್ದೆಗೆ ‘ಆರ್ಥಿಕ’ ಅಡ್ಡಗಾಲು:ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ ಆಹಾರ ನಿಗಮ

ರಾಜೇಶ್ ರೈ ಚಟ್ಲ
Published 3 ಆಗಸ್ಟ್ 2025, 0:18 IST
Last Updated 3 ಆಗಸ್ಟ್ 2025, 0:18 IST
<div class="paragraphs"><p> ಆಹಾರ ನಿಗಮ</p></div>

ಆಹಾರ ನಿಗಮ

   

ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವಿವಿಧ ವೃಂದಗಳ 386 ಹುದ್ದೆಗಳನ್ನು ಭರ್ತಿ ಮಾಡಲು 1:3 ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಬಳಿಕ, ಇಡೀ ನೇಮಕಾತಿ ಪ್ರಕ್ರಿಯೆಗೆ ಆರ್ಥಿಕ ಇಲಾಖೆ ಅಡ್ಡಗಾಲು ಹಾಕಿದೆ. 

ರಾಜ್ಯದ ವಿವಿಧೆಡೆ ಆಹಾರ ಧಾನ್ಯದ ಸಗಟು ಮಳಿಗೆ, ಪಡಿತರ ಅಂಗಡಿ, ಸಕ್ಕರೆ–ಲೆವಿ ಅಕ್ಕಿ ಸಂಗ್ರಹ ಹಾಗೂ ಆಹಾರ ಧಾನ್ಯಗಳ ಸಾಗಣೆ ಮಾಡುವ ನಿಗಮವು ತೀವ್ರ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ನಿಗಮದಲ್ಲಿ ಮಂಜೂರಾದ ಒಟ್ಟು 1,497 ಹುದ್ದೆಗಳ ಪೈಕಿ 1,260 ಹುದ್ದೆಗಳು ಖಾಲಿ ಇವೆ.

ADVERTISEMENT

ಒಟ್ಟು ಖಾಲಿ ಹುದ್ದೆಗಳ ಪೈಕಿ ಮೂರಲ್ಲಿ ಒಂದರಷ್ಟು ಸಿಬ್ಬಂದಿಯ ನೇಮಕಕ್ಕೆ ಮುಂದಾದ ಆಹಾರ ನಿಗಮ, ಕಿರಿಯ ಸಹಾಯಕರು 263, ಹಿರಿಯ ಸಹಾಯಕರು 57, ಹಿರಿಯ ಸಹಾಯಕರು (ಲೆಕ್ಕ) 33, ಗುಣಮಟ್ಟ ನಿರೀಕ್ಷಕರು 23, ಸಹಾಯಕ ವ್ಯವಸ್ಥಾಪಕರು 10 ಸೇರಿ ಒಟ್ಟು 386 ಹುದ್ದೆಗಳನ್ನು ನೇರವಾಗಿ ಭರ್ತಿ ಮಾಡಲು ಸರ್ಕಾರದ ಅನುಮೋದನೆ ಪಡೆದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) 2022ರ ಜುಲೈ 7ರಂದು ಪ್ರಸ್ತಾವ ಕಳುಹಿಸಿತ್ತು.

ನೇಮಕಾತಿಗೆ 2023ರ ಜೂನ್‌ 23ರಂದು ಅಧಿಸೂಚನೆ ಹೊರಡಿಸಿದ್ದ ಕೆಇಎ, ಅದೇ ವರ್ಷ ಅಕ್ಟೋಬರ್‌ ಮತ್ತು ನವಂಬರ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. 2,91,954 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 2024ರ ಮಾರ್ಚ್‌ 11ರಂದು ಫಲಿತಾಂಶ ಪ್ರಕಟಿಸಿ, ಜೂನ್‌ 20ರಂದು ಅಂತಿಮ ಅಂಕಪಟ್ಟಿಯನ್ನು ಪ್ರಕಟಿಸಿ, 22ರಂದು ನಿಗಮಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕೆಇಎ ಸಲ್ಲಿಸಿತ್ತು. ಈ ಪಟ್ಟಿಗೆ ಸಂಬಂಧಿಸಿದಂತೆ ಕೆಇಎದಿಂದ ಕೆಲವು ಸ್ಪಷ್ಟೀಕರಣ ಪಡೆದುಕೊಂಡ ನಿಗಮವು ನ. 5ರಂದು 1:3 ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು.

ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದಾಗ ನಡೆದ ಮಂಡಳಿ ಸಭೆಯಲ್ಲಿ (ಡಿ. 31) ಭಾಗವಹಿಸಿದ್ದ ಮಂಡಳಿಯ ನಿರ್ದೇಶಕರೂ ಆಗಿರುವ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ, ನೇಮಕಾತಿಗೆ ಸಂಬಂಧಿಸಿದಂತೆ ವಿವರವಾದ ವರದಿ ಮತ್ತು ಯಾವ ಮೂಲದಿಂದ ಅಗತ್ಯ ಅನುದಾನ ಭರಿಸಲಾಗುವುದು ಎಂಬ ಬಗ್ಗೆ ಮಾಹಿತಿ ಕೇಳಿದ್ದರು. ಅಲ್ಲದೆ, ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಜ. 17ರಂದು ಪತ್ರ ಬರೆದ ಅವರು ನೇಮಕಾತಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದರು.

ಆರ್ಥಿಕ ಇಲಾಖೆಯ ಪತ್ರಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಪ್ರಸ್ತುತ ನಿಗಮದಲ್ಲಿ ಕಾರ್ಯಪ್ರವೃತ್ತರಾಗಿರುವ ಸಿಬ್ಬಂದಿ ಮತ್ತು ನಿಗಮದ ಚಟುವಟಿಕೆಯ ಬಗ್ಗೆ ಸಮಗ್ರವಾದ ಮಾಹಿತಿ ಒದಗಿಸಿದ್ದಾರೆ. ಅಲ್ಲದೆ, ಸಿಬ್ಬಂದಿ ನೇಮಕಾತಿಯ ತುರ್ತಿನ ಬಗ್ಗೆಯೂ ವಿವರಿಸಿದ್ದಾರೆ.

ನಿಗಮದ ಪತ್ರದಲ್ಲಿ ಏನಿದೆ: ‘ಪ್ರಸ್ತುತ ಕೇವಲ 191 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಶೇ 80ರಷ್ಟು ಹುದ್ದೆಗಳು ಖಾಲಿ ಇವೆ. ನಿಗಮವು 223 ಸ್ಥಳಗಳಲ್ಲಿ 223 ಸಗಟು ಮಳಿಗೆಗಳು ಸೇರಿದಂತೆ 431 ಗೋದಾಮುಗಳನ್ನು ಹೊಂದಿದೆ. ಸಿಬ್ಬಂದಿಯ ತೀವ್ರ ಕೊರತೆಯ ಕಾರಣ 2–3 ಸಗಟು ಮಳಿಗೆಗಳನ್ನು ಒಬ್ಬರೇ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ನಿಗಮದ ಕೇಂದ್ರ ಕಚೇರಿಯಲ್ಲಿ 10 ವರ್ಷಗಳ ಹಿಂದೆ, ಅಂದರೆ 2014ನೇ ಸಾಲಿನಲ್ಲಿ 100ಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, 2024ರ ಅಂತ್ಯಕ್ಕೆ ಕೇವಲ 13 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಪತ್ರದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿವರಿಸಿದ್ದಾರೆ.

‘ಕೇಂದ್ರ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಲೆಕ್ಕಪತ್ರ, ಆರ್ಥಿಕ, ಸಂಗ್ರಹಣೆ ಮತ್ತು ಮಾರುಕಟ್ಟೆ ವಿಭಾಗಗಳು ತೀವ್ರ ಹಿನ್ನಡೆ ಅನುಭವಿಸುತ್ತಿವೆ. 2009–10ನೇ ಸಾಲಿನಿಂದ ಕೇಂದ್ರ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪಡೆಯಬೇಕಿರುವ ಸಹಾಯಧನ ಪಡೆಯಲು ಈಗಲೂ ಕಸರತ್ತು ನಡೆಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಪಡೆಯಬೇಕಿರುವ ₹ 2,000 ಕೋಟಿ ಪಡೆಯಲು ಪ್ರಸ್ತಾವ ಸಲ್ಲಿಸಲು ಕೂಡಾ ಸಾಧ್ಯ ಆಗಿಲ್ಲ’ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.