ADVERTISEMENT

ಬೈಕ್, ಟಿವಿ ಕಾರಣಕ್ಕೆ ಬಿಪಿಎಲ್ ರದ್ದಾಗಿಲ್ಲ: ಆಹಾರ ಇಲಾಖೆ ಆಯುಕ್ತ ಇಕ್ಬಾಲ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 20:02 IST
Last Updated 4 ಸೆಪ್ಟೆಂಬರ್ 2021, 20:02 IST
ಪಡಿತರ ಚೀಟಿಗಳು (ಸಾಂದರ್ಭಿಕ ಚಿತ್ರ)
ಪಡಿತರ ಚೀಟಿಗಳು (ಸಾಂದರ್ಭಿಕ ಚಿತ್ರ)   

ಬೆಂಗಳೂರು: ‘ಬೈಕ್, ಟಿ.ವಿ, ಫ್ರಿಡ್ಜ್ ಹೊಂದಿರುವರೆಂಬ ಕಾರಣಕ್ಕೇ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್ (ಆದ್ಯತಾ) ಪಡಿತರ ಚೀಟಿ ರದ್ದುಪಡಿಸಿಲ್ಲ’ ಎಂದು ಆಹಾರ ಇಲಾಖೆ ಆಯುಕ್ತರಾದ ಶಮ್ಲಾ ಇಕ್ಬಾಲ್‌ ಸ್ಪಷ್ಟಪಡಿಸಿದ್ದಾರೆ.

ಬೈಕ್, ಟಿವಿ, ಫ್ರಿಡ್ಜ್ ಹೊಂದಿರುವ ಕುಟುಂಬಗಳು ಬಿಪಿಎಲ್‌ ಪಡಿತರ ಚೀಟಿ ಹೊಂದಲು ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಲ್ಲಿ ಅವಕಾಶವಿದೆ’. ಇದೇ ಕಾರಣಕ್ಕೇ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಲು ಯಾವುದೇ ನಿರ್ದೇಶನವನ್ನು ಸರ್ಕಾರ ನೀಡಿಲ್ಲ’ ಎಂದು ತಿಳಿಸಿದ್ದಾರೆ.

‘ನಿಗದಿತ ಮಾನದಂಡಗಳಿಗೆ ವಿರುದ್ಧವಾಗಿ ಎಎವೈ ಅಥವಾ ಬಿಪಿಎಲ್ ಪಡಿತರ ಚೀಟಿ ಪಡೆದಿದ್ದಲ್ಲಿ ಅನರ್ಹವೆಂದು ಗುರುತಿಸಲಾಗುತ್ತಿದೆ. ಅಂಥ ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಸೂಚಿಸಲಾಗಿದೆ. ಅಲ್ಲದೆ, ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಿ ಎಪಿಎಲ್‌ (ಆದ್ಯತೇತರ) ಪಡಿತರ ಚೀಟಿಗಳಾಗಿ ಪರಿವರ್ತಿಸಲಾಗುತ್ತಿದೆ’ ಎಂದಿದ್ದಾರೆ.

ADVERTISEMENT

‘ಮೂರು ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವ ಮತ್ತು ವಾರ್ಷಿಕ ಆದಾಯ ₹ 1.20 ಲಕ್ಷಕ್ಕಿಂತ ಹೆಚ್ಚು ಇರುವ ಕುಟುಂಬಗಳ ಪ್ರಸ್ತುತ ಸ್ಥಿತಿಗತಿ ಪರಿಶೀಲಿಸಿ ಬಿಪಿಎಲ್‌ ಅರ್ಹತೆ ನಿರ್ಧರಿಸಬೇಕು. ಅನರ್ಹರಾಗಿದ್ದರೆ ಎಪಿಎಲ್‌ಗೆ ಪರಿವರ್ತಿಸುವ ಬಗ್ಗೆ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಆದಾಯ ತೆರಿಗೆ ಇಲಾಖೆ ಮತ್ತು ವಾರ್ಷಿಕ ವರಮಾನ ಹಾಗೂ ಇತರ ಕಾರಣಗಳಿಗಾಗಿ ಎಪಿಎಲ್‌ ಪಡಿತರ ಚೀಟಿಯಾಗಿ ಪರಿವರ್ತಿಸಿದ ಕೆಲವು ಕುಟುಂಬಗಳು ಸಲ್ಲಿಸುವ ಮನವಿಯನ್ನು ಮರು ಪರಿಶೀಲಿಸಿ, ಅರ್ಹತೆ ಇದ್ದರೆ ಮತ್ತೆ ಬಿಪಿಎಲ್‌ ಕುಟುಂಬಗಳಾಗಿ ಮುಂದುವರಿಸಲು ಕಾಲಕಾಲಕ್ಕೆ ಸೂಚನೆ ನೀಡಲಾಗುತ್ತಿದೆ. ಅರ್ಹ ಕುಟುಂಬಗಳ ಎಎವೈ ಮತ್ತು ಬಿಪಿಎಲ್‌ ಪಡಿತರ ಚೀಟಿಗಳನ್ನು ಆಧಾರರಹಿತವಾಗಿ ರದ್ದುಪಡಿಸಿದ್ದರೆ, ಎಪಿಎಲ್‌ಗೆ ಪರಿವರ್ತಿಸಿದರೆ, ಅಂಥವರು ತಹಶೀಲ್ದಾರ್, ಜಿಲ್ಲಾಧಿಕಾರಿ ಅಥವಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು’ ಎಂದಿದ್ದಾರೆ.

ರಾಜ್ಯದಲ್ಲಿ ಈವರೆಗೆ 27,527 ಎಎವೈ ಸೇರಿ ಒಟ್ಟು 3,55,516 ಅನರ್ಹ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ. ಅದರಲ್ಲಿ ಸರ್ಕಾರಿ ನೌಕರರು ಪಡೆದ ಕಾರ್ಡ್‌ಗಳು 2,127. ಈ ಪೈಕಿ, 1,17,203 ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.