ADVERTISEMENT

ಎಫ್‌ಸಿಐನಲ್ಲೇ ಉಳಿದ 3,760 ಕ್ವಿಂಟಲ್‌ ಅಕ್ಕಿ

ತಿಂಗಳ ಕೊನೆಯ ದಿನ ಸಾಗಣೆಗೆ ತರಾತುರಿ: ಅನುಮಾನ ಹುಟ್ಟಿಸಿದ ಅಧಿಕಾರಿಗಳ ನಡೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 17:47 IST
Last Updated 29 ಏಪ್ರಿಲ್ 2022, 17:47 IST

ಬೆಂಗಳೂರು: ಆದ್ಯತಾ ವಲಯದ ಕುಟುಂಬಗಳ (ಪಿಎಚ್‌ಎಚ್‌) ಪಡಿತರ ಚೀಟಿದಾರರಿಗೆ ವಿತರಿಸಲು ರಾಜ್ಯ ಸರ್ಕಾರ ಖರೀದಿಸಿರುವ 3,760 ಕ್ವಿಂಟಲ್‌ ಅಕ್ಕಿಯನ್ನು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್‌ಸಿಎಸ್‌ಸಿ) ಬೆಂಗಳೂರು ಉತ್ತರ ಜಿಲ್ಲೆಯ ಅಧಿಕಾರಿಗಳು ತಿಂಗಳ ಕೊನೆಯಾದರೂ ಎತ್ತುವಳಿ ಮಾಡಿ, ಸಾಗಿಸಿಲ್ಲ.

ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಮತ್ತು ಬೆಂಗಳೂರು ಉತ್ತರ ಉಪ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಪಿಎಚ್‌ಎಚ್‌ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ ತಲಾ ಒಂದು ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲು ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಖರೀದಿಸಲಾಗಿತ್ತು. ತಿಂಗಳ ಕೊನೆಯ ದಿನದವರೆಗೂ ಅಕ್ಕಿ ಎಫ್‌ಸಿಐ ಬಳಿಯೇ ಉಳಿದಿದೆ.

ರಾಜ್ಯದಾದ್ಯಂತ ಎಲ್ಲ ಪಿಎಚ್‌ಎಚ್ ಕುಟುಂಬಗಳಿಗೆ ತಲಾ ಒಂದು ಕೆ.ಜಿ. ಅಕ್ಕಿಯನ್ನು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ. ಇದಕ್ಕಾಗಿ ಎಫ್‌ಸಿಐನಿಂದ ಇ–ಹರಾಜಿನ ಮೂಲಕ ಮಾರುಕಟ್ಟೆ ದರದಲ್ಲಿ ಅಕ್ಕಿ ಖರೀದಿಸಲಾಗುತ್ತಿದೆ. ಕೆಎಫ್‌ಸಿಎಸ್‌ಸಿಯ ಬೆಂಗಳೂರು ಉತ್ತರ ಜಿಲ್ಲಾ ಕಚೇರಿ ವ್ಯಾಪ್ತಿಯಲ್ಲಿ ವಿತರಣೆಗಾಗಿ 3,760 ಕ್ವಿಂಟಲ್‌ ಅಕ್ಕಿಯನ್ನು ಖರೀದಿಸಿ, ಏಪ್ರಿಲ್‌ 11ರಂದು ಎಫ್‌ಸಿಐಗೆ ಹಣ ಪಾವತಿಸಲಾಗಿದೆ. ಏ.15ಕ್ಕೂ ಮೊದಲೇ ಎತ್ತುವಳಿ ಆದೇಶ ಪಡೆಯದೇ ಇರುವುದರಿಂದ ಅಕ್ಕಿ ಅಲ್ಲಿಯೇ ಉಳಿದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ರಾಜ್ಯದ ಇತರ ಎಲ್ಲ ಜಿಲ್ಲೆಗಳಲ್ಲೂ ಹೆಚ್ಚುವರಿ ವಿತರಣೆಗೆ ಖರೀದಿಸಿದ್ದ ಅಕ್ಕಿಯನ್ನು ಎತ್ತುವಳಿ ಮಾಡಿ, ಪಡಿತರ ಚೀಟಿದಾರರಿಗೆ ನೀಡಲಾಗಿದೆ. ಆದರೆ, ಬೆಂಗಳೂರು ಉತ್ತರ ವ್ಯಾಪ್ತಿಯಲ್ಲಿ ಶುಕ್ರವಾರದವರೆಗೂ (ಏಪ್ರಿಲ್‌ 29) ಈ ಅಕ್ಕಿಯನ್ನು ಎತ್ತುವಳಿ ಮಾಡಿಲ್ಲ. ಎತ್ತುವಳಿಗೆ ಎಫ್‌ಸಿಐನಿಂದ ಅಕ್ಕಿ ಬಿಡುಗಡೆ ಆದೇಶವನ್ನೂ (ಆರ್‌ಒ) ಪಡೆದಿಲ್ಲ ಎಂಬ ಮಾಹಿತಿ ಲಭಿಸಿದೆ.

ಕೊನೆಯ ದಿನ ಸಾಗಣೆಗೆ ಸಿದ್ಧತೆ: ಎಫ್‌ಸಿಐ ಬಳಿಯೇ ಉಳಿದಿರುವ ಅಕ್ಕಿಯನ್ನು ತಿಂಗಳ ಕೊನೆಯ ದಿನ ಸಾಗಿಸಲು ಮುಂದಾಗಿರುವ ಕೆಫ್‌ಸಿಎಸ್‌ಸಿ ಅಧಿಕಾರಿಗಳು, ಶುಕ್ರವಾರ ಸಂಜೆ ಒಪ್ಪಿಗೆ ಪಡೆದುಕೊಂಡಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಎಫ್‌ಸಿಐ ಅಧಿಕಾರಿಗಳು ಅಕ್ಕಿ ಬಿಡುಗಡೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಶನಿವಾರ ಅಷ್ಟೂ ಪ್ರಮಾಣದ ಅಕ್ಕಿಯನ್ನು ಎಫ್‌ಸಿಐ ಗೋದಾಮಿನಿಂದ ಕೆಎಫ್‌ಸಿಎಸ್‌ಸಿ ಬೆಂಗಳೂರು ಉತ್ತರ ವ್ಯಾಪ್ತಿಯ ಸಗಟು ವಿತರಣಾ ಕೇಂದ್ರಗಳಿಗೆ ಸಾಗಿಸಬೇಕು. ಅದರ ಜತೆಯಲ್ಲೇ ನ್ಯಾಯಬೆಲೆ ಅಂಗಡಿಗಳಿಗೂ ತಲುಪಿಸಬೇಕು. ಕೊನೆಯ ದಿನದ ಈ ಕಸರತ್ತು ಬೃಹತ್‌ ಪ್ರಮಾಣದ ಅಕ್ಕಿ ಕಾಳಸಂತೆ ಪಾಲಾಗುವುದಕ್ಕೆ ಅವಕಾಶ ಕಲ್ಪಿಸಬಹುದು ಎಂಬ ಅನುಮಾನ ಆಹಾರ ಇಲಾಖೆಯಲ್ಲೇ ವ್ಯಕ್ತವಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತೆ ಎಂ. ಕನಗವಲ್ಲಿ, ‘ಕೊನೆಯ ದಿನದವರೆಗೂ ಅಕ್ಕಿ ಸಾಗಿಸದೇ ಇರುವುದು ತಪ್ಪು. ಈಗ ಸಾಗಣೆ ಮಾಡುವಾಗ ಅಕ್ರಮಕ್ಕೆ ಅವಕಾಶ ಆಗದಂತೆ ಕಟ್ಟೆಚ್ಚರ ವಹಿಸಲು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದರು.

ಬೆಂಗಳೂರು ಅಕ್ಕಿ ರಾಮನಗರದಲ್ಲಿ ಪತ್ತೆ

ಬೆಂಗಳೂರು ನಗರದಲ್ಲಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸಲು ಪೂರೈಸಿದ್ದ 210 ಕ್ವಿಂಟಲ್‌ ಅಕ್ಕಿಯನ್ನು ಕಾಳಸಂತೆಗೆ ಕೊಂಡೊಯ್ಯುತ್ತಿದ್ದ ಲಾರಿಯೊಂದನ್ನು ರಾಮನಗರ ನಗರ ಠಾಣೆ ಪೊಲೀಸರು ಏಪ್ರಿಲ್‌ 22ರಂದು ವಶಪಡಿಸಿಕೊಂಡಿದ್ದಾರೆ.

ಸಂದೀಪ ರೆಡ್ಡಿ ಮತ್ತು ಕೇಶವ ಎಂಬುವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸುವ ಆಹಾರ ಧಾನ್ಯಗಳ ಸಗಟು ಸಾಗಾಣಿಕೆ ಗುತ್ತಿಗೆ ಹೊಂದಿರುವ ವಿನಾಯಕ ಟ್ರಾನ್ಸ್‌ಪೋರ್ಟ್‌ ಕಂಪನಿಯ ಮಾಲೀಕ ಕೆ.ಎಸ್‌. ವಿಶ್ವನಾಥ್‌ ಅವರಿಗೆ ಸೇರಿದ ಕೆಎ–01 ಎಡಿ–8761 ನೋಂದಣಿ ಸಂಖ್ಯೆಯ ಲಾರಿಯಲ್ಲೇ ಅಕ್ಕಿ ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.