ADVERTISEMENT

ಆಹಾರ ಧಾನ್ಯ ವಿತರಣೆಗೆ ಆರ್‌ಎಸ್‌ಎಸ್‌ಗೆ ಅವಕಾಶವೇಕೆ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 5:36 IST
Last Updated 27 ಮಾರ್ಚ್ 2020, 5:36 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್    

ಬೆಂಗಳೂರು: ಕೊರೊನಾ ‘ಕರ್ಫ್ಯೂ’ ಹಿನ್ನೆಲೆಯಲ್ಲಿ ಕೂಲಿ– ಕಾರ್ಮಿಕರು ಮತ್ತು ದುಡಿಮೆ ಇಲ್ಲದವರಿಗೆ ಆಹಾರ ಧಾನ್ಯ ವಿತರಿಸುತ್ತೇವೆ ಎಂದು ಆರ್‌ಎಸ್‌ಎಸ್‌ ಮುಂದಾಗಿದೆ. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಕೂಲಿ, ಕಾರ್ಮಿಕರು, ದುಡಿಮೆ ಇಲ್ಲದವರಿಗೆ ಸಹಾಯ ಮಾಡುತ್ತೇವೆ ಎಂದು ಸಂಘ ಪರಿವಾರದ ವ್ಯಕ್ತಿಗಳು ವಸೂಲಿಗೆ ಇಳಿದಿದ್ದಾರೆ ಎಂದು ಅವರು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಟೀಕಿಸಿದರು.

ಅಕ್ಕಿ, ಬೇಳೆ, ಅಡುಗೆ ಎಣ್ಣೆ ನೀಡುವುದಾಗಿ ಹೇಳಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾರೆ. ಅಸಹಾಯಕರಿಗೆ ಹಂಚುವ ಹೆಸರಿನಲ್ಲಿ ವಸೂಲಿಗೆ ಇಳಿದಿದ್ದಾರೆ. ಪ್ರಧಾನಿಯವರು ಇಡೀ ದೇಶದಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿದ್ದಾರೆ. ಅದನ್ನು ಜನರು ಪಾಲಿಸುತ್ತಿದ್ದಾರೆ. ಆದರೆ, ಆರ್‌ಎಸ್‌ಎಸ್‌ನವರು ಮುಖ್ಯಮಂತ್ರಿ ಮತ್ತು ಪೊಲೀಸರಿಂದ ಅನುಮತಿ ಪಡೆದಿದ್ದೇವೆ ಎಂದು ಹೇಳಿಕೊಂಡು ರಸ್ತೆಗೆ ಇಳಿದಿದ್ದಾರೆ. ಇದು ಒಂದು ಸರ್ಕಾರ ಅಥವಾ ದೇಶದ ಸಮಸ್ಯೆ ಅಲ್ಲ. ಇಡೀ ವಿಶ್ವದಲ್ಲೇ ಈ ಸಮಸ್ಯೆ ಇದೆ. ಇಂತಹ ಸಂದರ್ಭದಲ್ಲಿ ಕೇವಲ ಒಂದು ಸಂಸ್ಥೆಗೆ ಅವಕಾಶ ಕೊಟ್ಟು, ಬೇರೆಯವರಿಗೆ ಕೊಡುವುದಿಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಶಿವಕುಮಾರ್‌ ಪ್ರಶ್ನಿಸಿದರು.

ADVERTISEMENT

‘ಕಾಂಗ್ರೆಸ್‌ ಕಾರ್ಯಕರ್ತರೂ ಈ ರೀತಿ ಸೇವೆಗೆ ಮುಂದಾಗಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಕರೆ ಮಾಡಿ ನಾವೂ ಸೇವೆಗೆ ಇಳಿಯುತ್ತೇವೆ ಎನ್ನುತ್ತಿದ್ದಾರೆ. ಪ್ರಧಾನಿ ಮತ್ತು ಸರ್ಕಾರದ ಆದೇಶ ಪಾಲಿಸಬೇಕು ಎಂಬ ಕಾರಣಕ್ಕೆ ಆ ರೀತಿ ಮಾಡುವುದು ಬೇಡ ಎಂದು ತಡೆ ಹಿಡಿದಿದ್ದೇನೆ’ ಎಂದು ಶಿವಕುಮಾರ್‌ ಹೇಳಿದರು.

‘ಕಾಂಗ್ರಸ್‌ ಅಲ್ಲದೆ, ರೈತ ಸಂಘವೂ ಸೇರಿ ಹಲವು ಸಂಘಟನೆಗಳೂ ಜನರ ಸಹಾಯಕ್ಕೆ ಮುಂದಾಗುವುದಾಗಿ ಹೇಳಿವೆ. ಪ್ರಧಾನಿಯವರ ಆದೇಶದ ಮೇರೆಗೆ ಎಲ್ಲರೂ ಕಾನೂನು ಪಾಲಿಸುತ್ತಿರುವಾಗ ವಸೂಲಿ ವೀರರಾದ ಆರ್‌ಎಸ್ಎಸ್‌ನವರು ಮಾತ್ರ ಏಕೆ ಹೊರಗೆ ಹೊರಟಿದ್ದಾರೆ’ ಎಂದು ಅವರು ಪ್ರಶ್ನಿಸಿದರು.

ಮಾರ್ಗಸೂಚಿ ಅಗತ್ಯ:ಈ ತುರ್ತು ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿದವರು ಅಗತ್ಯ ಸ್ಥಳಗಳಿಗೆ ತಲುಪಲು ಏನು ಮಾಡಬೇಕು ಎಂಬುದರ ಕುರಿತು ಮಾರ್ಗಸೂಚಿಯನ್ನು ರೂಪಿಸಬೇಕು. ನಗರದಲ್ಲಿರುವ ಮಹಿಳೆಯೊಬ್ಬರ ಪತಿ ರಾಜಸ್ಥಾನದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಅಲ್ಲಿಗೆ ಹೋಗಲು ಆಗುತ್ತಿಲ್ಲ. ಪತ್ನಿ ಬಾರದ ಕಾರಣ ಅವರು ಬಂದ ಬಳಿಕವೇ ಅಂತ್ಯ ಸಂಸ್ಕಾರ ಮಾಡುವುದಾಗಿ ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಧಾವಿಸಲು ಏನು ಮಾಡಬೇಕು ಎಂಬ ಮಾರ್ಗಸೂಚಿಯನ್ನು ತಕ್ಷಣವೇ ರೂಪಿಸುವಂತೆ ಸರ್ಕಾರಕ್ಕೆ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.