ಬೆಂಗಳೂರು: ರಾಜ್ಯದಲ್ಲಿನ ನರ್ಸಿಂಗ್ ಪದವೀಧರರಿಗೆ ವಿದೇಶಗಳಲ್ಲಿ ‘ಉದ್ಯೋಗ ಭಾಗ್ಯ’ ದೊರೆಯುತ್ತಿದ್ದು, ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿ ರುವ ಐದು ಸಾವಿರ ಮಂದಿಗೆ ಈ ವರ್ಷ ಜರ್ಮನಿ, ಇಟಲಿ, ಸ್ಪ್ಯಾನಿಷ್, ಇಟಲಿ ಭಾಷೆಗಳಲ್ಲಿ ಸಂವಹನ ಕುರಿತ ತರಬೇತಿ ನೀಡಲು ಕೌಶಲ ಅಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಮುಂದಾಗಿದೆ.
ಜರ್ಮನಿ, ಜಪಾನ್ ಸೇರಿದಂತೆ ವಿದೇಶಗಳಲ್ಲಿ ನರ್ಸ್‌ಗಳಿಗೆ ಭಾರಿ ಬೇಡಿಕೆ ಇದೆ. ಇದನ್ನು ಮನಗಂಡು ಪದವೀಧರರಿಗೆ ಸೂಕ್ತ ತರಬೇತಿ ನೀಡುವ ಸಂಬಂಧ ಜರ್ಮನಿಯ ಸರ್ಕಾರ ದೊಂದಿಗೆ ಒಪ್ಪಂದ ಮಾಡಿಕೊಳ್ಳ ಲಾಗಿದೆ. ತರಬೇತಿ ಪೂರ್ಣಗೊಂಡ ಬಳಿಕ ಅಲ್ಲಿನ ಸರ್ಕಾರವೇ ಉದ್ಯೋಗಕ್ಕೂ ವ್ಯವಸ್ಥೆ ಮಾಡಲಿದೆ ಎಂದು ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ನರ್ಸಿಂಗ್ ಕೋರ್ಸ್ ಮಾಡಿದವರಿಗೆ ವೃತ್ತಿಗೆ ಸಂಬಂಧಿಸಿದ ಕೌಶಲ ಇರುತ್ತದೆ. ಆದರೆ, ವಿದೇಶಿ ಭಾಷೆಗಳಲ್ಲಿ ಸಂವಹನ ನಡೆಸಲು ಬೇಕಾದ ಕೌಶಲ ಇಲ್ಲ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೌಶಲ ಅಭಿವೃದ್ಧಿ ನಿಗಮದ ಮೂಲಕ ತರಬೇತಿ ನೀಡಲಾಗುತ್ತದೆ. ಕಳೆದ ವರ್ಷ ತರಬೇತಿ ಪಡೆದ 900 ಮಂದಿಗೆ ಉದ್ಯೋಗ ಸಿಕ್ಕಿದೆ. ಮುಂದಿನ ವರ್ಷ 10 ಸಾವಿರ ಮಂದಿಗೆ ತರಬೇತಿ ನೀಡುವ ಉದ್ದೇಶವಿದೆ. ತರಬೇತಿ ನಂತರ ಜರ್ಮನಿ ಸರ್ಕಾರದವರೇ ಸರ್ಟಿಫಿಕೇಟ್ ನೀಡುತ್ತಾರೆ. ಆರಂಭದಲ್ಲಿ ಅವರೇ ತರಬೇತಿ ನೀಡುತ್ತಾರೆ, ಕ್ರಮೇಣ ನಾವೇ ತರಬೇತಿ ಆರಂಭಿಸುತ್ತೇವೆ’ ಎಂದು ವಿವರಿಸಿದರು.
‘ಜರ್ಮನಿ ಭಾಷೆಯ ಬಗ್ಗೆ ಈಗಾಗಲೇ ತರಬೇತಿ ಶುರುವಾಗಿದೆ. ಈ ವರ್ಷ ಜಪಾನ್, ಇಟಲಿ ಭಾಷೆಗಳಲ್ಲೂ ಶುರು ಮಾಡುತ್ತೇವೆ. ಈ ಮೂಲಕ ರಾಜ್ಯದ ನರ್ಸಿಂಗ್ ಪದವೀಧರರಿಗೆ ವಿದೇಶಗಳಲ್ಲೂ ಉದ್ಯೋಗಾವಕಾಶ ಕಲ್ಪಿಸಿಕೊಡಲು ಮುಂದಾಗಿದ್ದೇವೆ. ಬೇಡಿಕೆ ಆಧರಿಸಿ ಮುಂದಿನ ದಿನಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಇದೇ ರೀತಿ ಸಂವಹನ ಕುರಿತ ತರಬೇತಿ ನೀಡುವ ಉದ್ದೇಶವನ್ನು ಇಲಾಖೆ ಹೊಂದಿದೆ’ ಎನ್ನುತ್ತಾರೆ ಮೀನಾ.
‘ಪ್ರತಿ ವರ್ಷ ಸುಮಾರು 40 ಸಾವಿರ ಮಂದಿ ನರ್ಸಿಂಗ್ ಪದವಿ ಪಡೆದು ಹೊರಬರುತ್ತಾರೆ. ಅವರಲ್ಲಿ ಎಲ್ಲರಿಗೂ ರಾಜ್ಯದಲ್ಲಿಯೇ ಉದ್ಯೋಗ, ಉತ್ತಮ ವೇತನ ಸಿಗುವುದಿಲ್ಲ. ಹೊರ ದೇಶಗಳಲ್ಲಿ ಒಳ್ಳೆಯ ಅವಕಾಶಗಳು ಇವೆ, ಇದನ್ನು ಮನಗಂಡು ಅವರಿಗೆ ತರಬೇತಿ ನೀಡುವ ಮೂಲಕ ಉದ್ಯೋಗ ಪಡೆಯಲು ನೆರವಾಗುತ್ತಿದ್ದು ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಅವರು ಪ್ರತಿಕ್ರಿಯಿಸಿದರು.
ಇಂಗ್ಲಿಷ್‌ನಲ್ಲಿ ಸಂವಹನ ತರಬೇತಿ
ರಾಜ್ಯದಲ್ಲಿನ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) 72 ಸಾವಿರ ವಿದ್ಯಾರ್ಥಿಗಳು ಇದ್ದು, ಈ ವರ್ಷ ಸುಮಾರು 20 ಸಾವಿರ ವಿದ್ಯಾರ್ಥಿ ಗಳಿಗೆ ಸಂವಹನ ಮತ್ತು ಇಂಗ್ಲಿಷ್ ಭಾಷೆಯ ಬಗ್ಗೆ ತರಬೇತಿ ನೀಡುವ ಮೂಲಕ ಉದ್ಯೋಗಾವಕಾಶಕ್ಕೆ ನೆರವಾಗಲು ಇಲಾಖೆ ಮುಂದಾಗಿದೆ.
ಐಟಿಐಗಳಲ್ಲಿ ಹೊಸ ಟ್ರೇಡ್‌ಗಳನ್ನು ಪರಿಚಯಿಸುವುದಲ್ಲದೇ, ಶೇ 50ರಷ್ಟು ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲು ನಿರ್ಧರಿಸಲಾಗಿದೆ. ಜಿಲ್ಲೆಗೆ ಒಂದು ಕ್ಲಸ್ಟರ್‌ಗಳನ್ನು ಗುರುತಿಸಿ, ಅಲ್ಲಿ ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ಇದರಿಂದ ಕೌಶಲ ವೃದ್ಧಿಯಾಗಲಿದ್ದು, ಮುಂದೆ ಉದ್ಯೋಗದಲ್ಲಿ ತೊಡಗಿಕೊಳ್ಳಲು ಅನುಕೂಲವಾಗಲಿದೆ ಎಂದು ಮನೋಜ್‌ಕುಮಾರ್ ಮೀನಾ ತಿಳಿಸಿದರು.
ಮಾರುಕಟ್ಟೆಯಲ್ಲಿನ ಉದ್ಯೋಗಾವಕಾಶಕ್ಕೆ ತಕ್ಕಂತೆ ವಿದ್ಯಾರ್ಥಿ ಗಳಿಗೆ ಸೂಕ್ತ ಶಿಕ್ಷಣ, ಪ್ರಾಯೋಗಿಕ ತರಬೇತಿ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ, ಬದಲಾವಣೆ ಗಳನ್ನು ತರಲಾಗಿದೆ. ವಿದೇಶಗಳಲ್ಲಿನ ಉದ್ಯೋಗಾವಕಾಶ ಗಮನದಲ್ಲಿಟ್ಟುಕೊಂಡು, ಅಲ್ಲಿನ ಭಾಷೆಗಳಲ್ಲಿ ಸಂಹವನ ನಡೆಸಲು ಬೇಕಾದ ತರಬೇತಿಯನ್ನು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ನೀಡಲಿದೆ ಎಂದು ಅವರು ತಿಳಿಸಿದರು.
150 ಐಟಿಐಗಳ ಉನ್ನತೀಕರಣ
ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನಿಂದ (ಎಡಿಬಿ) ₹1,300 ಕೋಟಿ ಸಾಲ ಪಡೆದು ರಾಜ್ಯದಲ್ಲಿನ 150 ಐಟಿಐಗಳಿಗೆ ಸುಸಜ್ಜಿತವಾದ ಕಟ್ಟಡ, ವಸತಿ ನಿಲಯ, ಪ್ರಾಯೋಗಿಕ ಕಲಿಕೆಗೆ ಬೇಕಾದ ಹೊಸ ಮಷಿನ್‌ಗಳ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.
ಇದರ ರೂಪುರೇಷೆ ಸಿದ್ಧವಾಗಿದ್ದು, ಇದಕ್ಕೆ ತಗಲುವ ಒಟ್ಟು ವೆಚ್ಚದಲ್ಲಿ ಶೇ 70ರಷ್ಟನ್ನು ಎಡಿಬಿ ಸಾಲ ರೂಪದಲ್ಲಿ ನೀಡಲಿದ್ದು, ಇನ್ನುಳಿದ ಶೇ 30ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದೆ. ಈ ಹಣದಲ್ಲಿ ಹೊಸ ಮಷಿನ್‌ಗಳ ವ್ಯವಸ್ಥೆ, ಕಟ್ಟಡಗಳ ನಿರ್ಮಾಣ, ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುತ್ತದೆ.
ಕೌಶಲ ಅಭಿವೃದ್ಧಿ ನಿಗಮದಿಂದ ತರಬೇತಿ
* ವಿದೇಶಿ ಭಾಷೆಗಳಲ್ಲಿ ಸಂವಹನ, ಸಂಸ್ಕೃತಿ ಬಗ್ಗೆ ಪರಿಚಯ
* ಕಳೆದ ವರ್ಷ 900 ಮಂದಿಗೆ ಜರ್ಮನಿಯಲ್ಲಿ ಉದ್ಯೋಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.