
ಬೆಂಗಳೂರು: ಕರ್ನಾಟಕದಲ್ಲಿ ಆರಂಭವಾಗುವ ವಿದೇಶಿ ವಿಶ್ವವಿದ್ಯಾಲಯಗಳು ದಿಢೀರ್ ಬಾಗಿಲು ಮುಚ್ಚಿದರೆ ವಿದ್ಯಾರ್ಥಿಗಳ ಅಹವಾಲುಗಳನ್ನು ಹೇಗೆ ಪರಿಹರಿಸಬೇಕು ಎಂಬ ಕುರಿತು ಸ್ಪಷ್ಟತೆ ಕೋರಿ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಪತ್ರ ಬರೆಯಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ‘ಕ್ಯಾಂಪಸ್‌ಗಳನ್ನು ಮುಚ್ಚುವ ಸ್ಥಿತಿ ಎದುರಾದರೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಭವಿಷ್ಯ ಏನು ಎಂಬುದರ ಬಗ್ಗೆ ಯುಜಿಸಿ ಯಾವುದೇ ಸ್ಪಷ್ಟತೆ ನೀಡಿಲ್ಲ. ವಿದೇಶಿ ವಿಶ್ವವಿದ್ಯಾಲಯಗಳು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುವುದಿಲ್ಲ. ನೆರವು ನೀಡುವ ಕೆಲಸವನ್ನಷ್ಟೇ ರಾಜ್ಯ ಸರ್ಕಾರ ಮಾಡುತ್ತದೆ. ಇಂತಹ ವಿಷಯಗಳಲ್ಲಿ ಯುಜಿಸಿಯಿಂದ ಸ್ಪಷ್ಟನೆ ಪಡೆದು, ವಿಧಿಸಿರುವ ಷರತ್ತುಗಳನ್ನು ಅಧ್ಯಯನ ಮಾಡಿ, ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.
‘ರಾಜ್ಯಗಳು ಹೆಚ್ಚು ನಿಯಂತ್ರಣ ಹೇರಿದರೆ ವಿದೇಶಿ ವಿಶ್ವವಿದ್ಯಾಲಯಗಳು ಬೇರೆ ರಾಜ್ಯಕ್ಕೆ ಹೋಗಬಹುದು. ಕರ್ನಾಟಕದಲ್ಲಿ ಕ್ಯಾಂಪಸ್ ತೆರೆಯುವುದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ವಿದೇಶಗಳಿಗೆ ತೆರಳಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು, ಅಧ್ಯಾಪಕರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
ಇದಕ್ಕೂ ಮೊದಲು ಬ್ರಿಟನ್‌ನ ಇಂಡೊ–ಫೆಸಿಫಿಕ್ ಸಚಿವರ ನೇತೃತ್ವದ 10 ಪ್ರತಿನಿಧಿಗಳ ತಂಡದ ಜತೆ ಚರ್ಚೆ ನಡೆಸಿದ ಸಚಿವ ಸುಧಾಕರ್, ಕರ್ನಾಟಕದ ಐವರು ವಿದ್ಯಾರ್ಥಿಗಳಿಗೆ ಚಿವೆನಿಂಗ್ ವಿದ್ಯಾರ್ಥಿವೇತನ ನೀಡುತ್ತಿದ್ದು, ಈ ಸಂಖ್ಯೆಯನ್ನು ಹೆಚ್ಚಿಸಲು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.