ADVERTISEMENT

ಇಲಾಖೆಯಿಂದಲೇ ವೇತನ, ಪಾಳಿ ಪದ್ಧತಿಗೆ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರು ಆಗ್ರಹ

ಅರಣ್ಯ ಇಲಾಖೆ ‘ಡಿ’ ದರ್ಜೆ ಹೊರಗುತ್ತಿಗೆ ನೌಕರರ ಆಗ್ರಹ, ಏ.4ರಿಂದ ಮುಷ್ಕರ

ಕೆ.ಎಸ್.ಗಿರೀಶ್
Published 12 ಮಾರ್ಚ್ 2022, 19:06 IST
Last Updated 12 ಮಾರ್ಚ್ 2022, 19:06 IST
   

ಮೈಸೂರು: ‘ಹೊರಗುತ್ತಿಗೆಯಿಂದ ಮುಕ್ತಿ ನೀಡಬೇಕು’ ಎಂದು ಆಗ್ರಹಪಡಿಸಿ ಅರಣ್ಯ ಇಲಾಖೆಯ ಪ್ರಾದೇಶಿಕ, ವನ್ಯಜೀವಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 3 ಸಾವಿರ ‘ಡಿ’ ದರ್ಜೆ ಹೊರಗುತ್ತಿಗೆ ನೌಕರರು ಏಪ್ರಿಲ್ 4ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಕುರಿತ ನೋಟಿಸ್‌ ಅನ್ನು ಇಲಾಖೆಯ ಕಾರ್ಯದರ್ಶಿಗೆ ನೀಡಿದ್ದಾರೆ.

‘ಹೊರಗುತ್ತಿಗೆ ಪದ್ಧತಿಯನ್ನು ತೆಗೆದುಹಾಕಿ ಇಲಾಖೆಯೇ ನೇರವಾಗಿ ವೇತನ ಪಾವತಿಸಬೇಕು. ಪಾಳಿ ಪದ್ಧತಿ ಜಾರಿಗೊಳಿ
ಸಬೇಕು’ ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಎಲ್ಲ ಹುಲಿ ರಕ್ಷಿತಾರಣ್ಯಗಳ ಬೇಟೆ ತಡೆ ರಕ್ಷಣಾ ಶಿಬಿರಗಳಲ್ಲಿ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುವ ಸುಮಾರು 2 ಸಾವಿರ ನೌಕರರಿಗೆ 2 ತಿಂಗಳಿಂದ ಸಂಬಳವಾಗಿಲ್ಲ. ಪ್ರತಿ ತಿಂಗಳೂ ವೇತನ ವಿಳಂಬವಾಗುತ್ತಿರುವುದರಿಂದ ಆಕ್ರೋಶಗೊಂಡಿರುವ ಅವರು ಹೊರಗುತ್ತಿಗೆ ಪದ್ಧತಿ ಬೇಡ ಎನ್ನುತ್ತಿದ್ದಾರೆ.

ADVERTISEMENT

‘2017ಕ್ಕೂ ಮೊದಲು ಇವರು ದಿನಗೂಲಿ ನೌಕರರಾಗಿದ್ದರು. ಹೊರಗುತ್ತಿಗೆಯಡಿ ನೇಮಕದ ಬಳಿಕ ವೇತನ ಗಗನಕುಸುಮವಾಗಿದೆ. ಸಂಬಳ ₹ 11 ಸಾವಿರ (ಭವಿಷ್ಯ ನಿಧಿ ಬಿಟ್ಟು) ಮಾತ್ರ. ಅದನ್ನೂ ಕೊಡದಿದ್ದರೆ ಬದುಕುವುದು ಹೇಗೆ?‘ ಎಂದು ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಎ.ಎಂ.ನಾಗರಾಜು ಪ್ರಶ್ನಿಸುತ್ತಾರೆ.

‘ಪಿ.ಎಫ್ ಸಹ ಸರಿಯಾಗಿ ಪಾವತಿಯಾಗಿಲ್ಲ. ಗುತ್ತಿಗೆ ಪಡೆದ ಏಜೆನ್ಸಿಗಳು ಬದಲಾವಣೆಯಾಗುತ್ತಿರುವುದರಿಂದ ಯಾವ ಸೌಲಭ್ಯವೂ ದೊರೆಯುತ್ತಿಲ್ಲ’ ಎಂದು ಅವರು‘ಪ್ರಜಾವಾಣಿ‘ ಜತೆ ಅಳಲು ತೋಡಿಕೊಂಡರು. ಮುಷ್ಕರ ಕುರಿತಂತೆ ಮಾರ್ಚ್ 10ರಂದೇ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ದಟ್ಟ ಅರಣ್ಯದಲ್ಲಿ ರಕ್ಷಣಾ ಶಿಬಿರ, ತನಿಖಾ ಠಾಣೆ, ಬೇಟೆತಡೆ ಶಿಬಿರ, ವನ್ಯಜೀವಿ ಹತ್ಯೆ ತಡೆ ಶಿಬಿರಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಾರೆ. ಅಪಾಯದ ನಡುವೆ ಕಾರ್ಯನಿರ್ವಹಿಸುವವರಿಗೆ ಕನಿಷ್ಠ ವೇತನವನ್ನಾದರೂ ಸಮರ್ಪಕವಾಗಿ ನೀಡಬೇಕು. ಇವರು, ಅಪಾಯದಲ್ಲಿ ಕೆಲಸ ಮಾಡಿದರೂ, ವಿಶೇಷ ಭತ್ಯೆಯಾಗಿ ₹ 2 ಸಾವಿರ ಪ್ರೋತ್ಸಾಹ ಧನವನ್ನು ಕಾಯಂ ಸಿಬ್ಬಂದಿಗಷ್ಟೇ ನೀಡಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ’ ಎಂದೂ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.