ADVERTISEMENT

ಕಾಳ್ಗಿಚ್ಚು ನಿಯಂತ್ರಣ: ಕಟ್ಟುನಿಟ್ಟಿನ ಮುನ್ನೆಚ್ಚರಿಕೆಗೆ ಸಚಿವ ಖಂಡ್ರೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 15:26 IST
Last Updated 14 ಫೆಬ್ರುವರಿ 2025, 15:26 IST
ಸಚಿವ ಈಶ್ವರ ಬಿ.ಖಂಡ್ರೆ ಅವರು ವಿಡಿಯೊ ಸಂವಾದದ ಮೂಲಕ ಅಧಿಕಾರಿಗಳ ಜತೆ ಸಭೆ ನಡೆಸಿದರು
ಸಚಿವ ಈಶ್ವರ ಬಿ.ಖಂಡ್ರೆ ಅವರು ವಿಡಿಯೊ ಸಂವಾದದ ಮೂಲಕ ಅಧಿಕಾರಿಗಳ ಜತೆ ಸಭೆ ನಡೆಸಿದರು   

ಬೆಂಗಳೂರು: ‘ಈ ಬಾರಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಪೂರ್ಣ ಪ್ರಮಾಣದಲ್ಲಿ ಸನ್ನದ್ಧರಾಗಿರಬೇಕು. ಬೆಂಕಿಯಿಂದ ಕಾಡು ನಾಶವಾಗುವುದನ್ನು ತಡೆಯಲು ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಕಾಳ್ಗಿಚ್ಚು ನಿಯಂತ್ರಣ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಜತೆ ವಿಡಿಯೊ ಸಂವಾದದ ಮೂಲಕ ಅವರು ಶುಕ್ರವಾರ ಸಭೆ ನಡೆಸಿದರು. ‘ಈ ಬಾರಿ ಉತ್ತಮ ಮಳೆಯಾಗಿದ್ದರೂ, ಬಿಸಿಲು ಭಾರಿ ಪ್ರಮಾಣದಲ್ಲಿ ಇದೆ. ಕಾಡು ಒಣಗಿದ್ದು, ಬೆಂಕಿಯ ಅಪಾಯ ತೀವ್ರವಾಗಿದೆ. ಆದರೆ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆಯಾ ವಿಭಾಗದ ಪಂಚಾಯತಿ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು. ಅವರ ಸಹಯೋಗದೊಂದಿಗೆ ಕಾರ್ಯಯೋಜನೆ ಸಿದ್ಧಪಡಿಸಬೇಕು. ಕಾಳ್ಗಿಚ್ಚುನ ಅಪಾಯಗಳು ಮತ್ತು ತಡೆ ಸಂಬಂಧ ಗ್ರಾಮ ಹಾಗೂ ಸಮುದಾಯ ಸಭೆಗಳನ್ನು ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

ADVERTISEMENT

‘ಉಪಗ್ರಹ ಆಧಾರಿತ ಕಾಳ್ಗಿಚ್ಚು ಮುನ್ನೆಚ್ಚರಿಕೆ ವ್ಯವಸ್ಥೆಯ ಸೂಚನೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸಬೇಕು. ಪದೇ–ಪದೇ ಬೆಂಕಿ ಕಾಣಿಸಿಕೊಂಡ ಪ್ರದೇಶಗಳಲ್ಲಿ ಬೆಂಕಿರೇಖೆ ರಚಿಸಬೇಕು. ಪ್ರತಿದಿನವೂ ಗಸ್ತು ನಡೆಸಬೇಕು. ಈ ಎಲ್ಲವನ್ನೂ ಗಮನದಲ್ಲಿ ಇರಿಸಿಕೊಂಡು ಕಾಳ್ಗಿಚ್ಚು ನಿಯಂತ್ರಣ ಕಾರ್ಯಯೋಜನೆ ಸಿದ್ಧಪಡಿಸಬೇಕು. ಈ ಸಂಬಂಧ ಕ್ಷೇತ್ರಮಟ್ಟದ ಸಿಬ್ಬಂದಿಗೆ ಸ್ಪಷ್ಟಸೂಚನೆ ನೀಡಿರಬೇಕು’ ಎಂದು ಹೇಳಿದರು.

‘ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಾಕುವವರ ಬಗ್ಗೆ ಮಾಹಿತಿ ನೀಡುವಂತೆ, ಅಂತಹವರನ್ನು ತಡೆಯುವಂತೆ ಗ್ರಾಮಸ್ಥರಲ್ಲೂ ಜಾಗೃತಿ ಮೂಡಿಸಬೇಕು. ಅಂತಹ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು. ಬೆಂಕಿ ಕಂಡಕೂಡಲೇ ಅದನ್ನು ನಂದಿಸಲು ಅಗತ್ಯವಿರುವ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

Cut-off box - ‘ಕಾಡಾನೆ ಓಡಾಟದ ಮಾಹಿತಿ ಹಂಚಿಕೊಳ್ಳಿ’ ‘ಕಾಡಾನೆಗಳ ದಾಳಿಯಿಂದ ಜೀವಹಾನಿಯಾಗುವುದನ್ನು ತಡೆಯಲು ಥರ್ಮಲ್‌ ಕ್ಯಾಮೆರಾ ಆಧಾರಿತ ಮುನ್ನೆಚ್ಚರಿಕಾ ವ್ಯವಸ್ಥೆಯನ್ನು ಜಾರಿಗೆ ತನ್ನಿ’ ಎಂದು ಅರಣ್ಯಾಧಿಕಾರಿಗಳಿಗೆ ಸಚಿವ ಈಶ್ವರ ಬಿ.ಖಂಡ್ರೆ ಸೂಚಿಸಿದರು. ‘ಕಾಡಾನೆಗಳ ಓಡಾಟದ ಮೇಲೆ ಥರ್ಮಲ್‌ ಕ್ಯಾಮೆರಾ ಮತ್ತು ರೇಡಿಯೊ ಕಾಲರ್‌ ಮೂಲಕ ನಿಗಾ ಇರಿಸಬೇಕು. ಅವುಗಳ ಓಡಾಟದ ಮಾಹಿತಿಯನ್ನು ಸ್ಥಳೀಯ ಶಾಸಕ ಜಿಲ್ಲಾಧಿಕಾರಿ ಜಿಲ್ಲಾ ಎಸ್‌ಪಿ ಪಂಚಾಯತಿ ಅಧ್ಯಕ್ಷರು ಕಾರ್ಯದರ್ಶಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮದ ಮುಖ್ಯಸ್ಥರಿಗೆ ನೀಡುತ್ತಿರಬೇಕು. ಇದಕ್ಕೆ ಬಲ್ಕ್‌ ಎಸ್‌ಎಂಎಸ್‌ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು’ ಎಂದು ಸೂಚಿಸಿದ್ದಾರೆ. ‘ಆನೆಗಳ ಸಂಖ್ಯೆ ಹೆಚ್ಚು ಇರುವ ರಾಜ್ಯವಾದರೂ ಕರ್ನಾಟಕದಲ್ಲಿ ಆನೆಗಳಿಂದಾಗುವ ಸಾವು ಕಡಿಮೆ ಇದೆ. ಆದರೆ ಫೆಬ್ರುವರಿ ಮಾರ್ಚ್‌ ಏಪ್ರಿಲ್‌ ಹಾಗೂ ಜುಲೈನಲ್ಲಿ ಹೆಚ್ಚಿನ ಸಾವು ಸಂಭವಿಸುತ್ತಿದೆ. ಇದಕ್ಕೆ ಕಾರಣ ಪತ್ತೆ ಮಾಡಲು ಅಧ್ಯಯನ ನಡೆಸಿ. ಆನೆಗಳ ಉಪಟಳ ಹೆಚ್ಚು ಇರುವ ಪ್ರದೇಶಗಳಲ್ಲಿ ಸೌರಬೇಲಿ ಕಂದಕ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.