ADVERTISEMENT

ಮುಂಡಗೋಡ ತಾಲ್ಲೂಕಿನ ವಿವಿಧೆಡೆ ಆತಂಕ: ಕಾಡಿನಲ್ಲಿ ಪದೇಪದೇ ಬೆಂಕಿ

ಕಾರಣ ತಿಳಿಯಲು ಅಧಿಕಾರಿಗಳ ಪ್ರಯತ್ನ

ಶಾಂತೇಶ ಬೆನಕನಕೊಪ್ಪ
Published 25 ಫೆಬ್ರುವರಿ 2019, 19:18 IST
Last Updated 25 ಫೆಬ್ರುವರಿ 2019, 19:18 IST
ಮುಂಡಗೋಡ ಹಾಗೂ ಶಿಗ್ಗಾವಿ ಗಡಿಭಾಗದ ಅರಣ್ಯದಲ್ಲಿ ಸೋಮವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು
ಮುಂಡಗೋಡ ಹಾಗೂ ಶಿಗ್ಗಾವಿ ಗಡಿಭಾಗದ ಅರಣ್ಯದಲ್ಲಿ ಸೋಮವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು   

ಮುಂಡಗೋಡ: ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಬೀಳುವ ಪ್ರಕರಣಗಳು ಕಂಡುಬರುತ್ತಿವೆ. ಸನವಳ್ಳಿ, ಇಂದೂರ, ಯರೇಬೈಲ್, ನ್ಯಾಸರ್ಗಿ, ಅಜ್ಜಳ್ಳಿ ಸೇರಿದಂತೆ ಕೆಲವೆಡೆ ಬೆಂಕಿ ಕಾಣಿಸಿಕೊಂಡಿದೆ.

15ದಿನಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿದ್ದು, ಹೆಚ್ಚಿನ ಹಾನಿಯಾಗದಂತೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೂಕಾಡಿನ ಕೆಲವು ಭಾಗಗಳಲ್ಲಿಪದೇಪದೇ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಅರಣ್ಯ ಸಿಬ್ಬಂದಿ ಹೈರಾಣಾಗಿದ್ದಾರೆ. ಆಕಸ್ಮಿಕ ಬೆಂಕಿಯೋ ಅಥವಾ ಉದ್ದೇಶಪೂರ್ವಕವಾಗಿ ಹಚ್ಚಲಾಗುತ್ತಿದೆಯೋ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಬಿರುಬಿಸಿಲು ಹಾಗೂ ಗಾಳಿಯು ಬೆಂಕಿಯ ಪ್ರಮಾಣ ಹೆಚ್ಚಾಗಲು ಸಹಕಾರಿಯಾಗಿದೆ ಎಂದು ಇಲಾಖೆ ಸಿಬ್ಬಂದಿ ಹೇಳಿದ್ದಾರೆ.

ಉಣ್ಣೆ ಸಾಯಿಸಲು ಬೆಂಕಿ?

ADVERTISEMENT

ಕಾಡಿನಲ್ಲಿರುವ ಉಣ್ಣೆ (ಉಣುಗು) ಜಾನುವಾರಿಗೆ ಕಚ್ಚಿ ಮಂಗನ ಕಾಯಿಲೆ ಹರಡುವ ಸಾಧ್ಯತೆಯಿದೆ. ಅರಣ್ಯ ಪ್ರದೇಶಕ್ಕೆ ಮೇಯಲು ಹೋಗುವ ಜಾನುವಾರಿಗೆ ಉಣ್ಣಿಅಂಟದಂತೆ ಅರಣ್ಯ ಪ್ರದೇಶದ ಅಲ್ಲಲ್ಲಿ ಕೆಲವರು ಬೆಂಕಿ ಇಡುತ್ತಿದ್ದಾರೆ ಎಂದು ಅರಣ್ಯ ಸಿಬ್ಬಂದಿಅನುಮಾನಿಸಿದ್ದಾರೆ.

ಜಿಂಕೆಗಳು ನಾಡಿನತ್ತ:
ಕಾಡಿನ ಜಲಮೂಲಗಳು ಬತ್ತುವ ಹಂತಕ್ಕೆ ಬಂದಿರುವುದು ಒಂದೆಡೆಯಾದರೆ, ಆಹಾರದ ಕೊರತೆಯಿಂದ ಜಿಂಕೆಗಳು ಜನವಸತಿ ಪ್ರದೇಶದತ್ತ ಬರುತ್ತಿವೆ. ಇವೆಲ್ಲದರ ನಡುವೆ ಮೀಸಲು ಅರಣ್ಯ ಹಾಗೂ ಗ್ರಾಮದಂಚಿನ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ.

‘ಅಜ್ಜಳ್ಳಿ, ರಾಮಾಪುರ, ಅಟ್ಟಣಗಿ ಸೇರಿದಂತೆ ಹಲವೆಡೆ ಬೆಂಕಿ ನಿಯಂತ್ರಣಕ್ಕೆ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ವೀಕ್ಷಣೆಯಲ್ಲಿರುವ ಸಿಬ್ಬಂದಿ ಅರಣ್ಯದಲ್ಲಿ ಬೆಂಕಿ ಕಂಡ ತಕ್ಷಣ ಮಾಹಿತಿ ರವಾನಿಸುತ್ತಾರೆ. ಇದರಿಂದ ಬೆಂಕಿ ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಳ್ಳುತ್ತಾರೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಆರ್‌.ಶಶಿಧರ್ಹೇಳಿದರು.

‘ನೀರಿಲ್ಲದೆ ಕಾಡುಪ್ರಾಣಿ ಸತ್ತಿಲ್ಲ’
‘ಅರಣ್ಯ ಪ್ರದೇಶದಲ್ಲಿರುವ ಕೆರೆಕಟ್ಟೆಗಳಲ್ಲಿ ಸದ್ಯಕ್ಕೆ ತಕ್ಕಮಟ್ಟಿಗೆ ನೀರಿದೆ.ಬತ್ತಿರುವ ಜಲಪಾತ್ರಗಳನ್ನು ಮುಂದಿನ ವಾರದಿಂದ ತುಂಬಿಸಲಾಗುವುದು. ನೀರಿಲ್ಲದೆ ಕಾಡುಪ್ರಾಣಿಗಳು ಸತ್ತ ಪ್ರಕರಣಗಳು ವರದಿಯಾಗಿಲ್ಲ. ಆದರೂ ಈ ಸಲ ಬಿಸಿಲಿನ ಪ್ರಮಾಣ ಹೆಚ್ಚಿದ್ದು, ಅರಣ್ಯದ ಕೆರೆಗಳು ಒಣಗುತ್ತಿವೆ. ಪ್ರಾಣಿಗಳಿಗೆ ನೀರಿನ ಕೊರತೆಯಾಗದಂತೆಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿ.ಆರ್‌.ಶಶಿಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.