ADVERTISEMENT

ಸ್ಥಳೀಯರು ಜಾನುವಾರು ಮೇಯಿಸಬಹುದು: ಸಚಿವ ಈಶ್ವರ ಬಿ. ಖಂಡ್ರೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 0:58 IST
Last Updated 25 ಜುಲೈ 2025, 0:58 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಂಗಳೂರು: ಅರಣ್ಯವಾಸಿಗಳು, ಬುಡಕಟ್ಟು ಜನಾಂಗದವರು ಮತ್ತು ಸ್ಥಳೀಯರು ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸಲು ಅವಕಾಶವಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಸ್ಪಷ್ಟಪಡಿಸಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸುವುದರ ಮೇಲೆ ಇರುವ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಈಚೆಗೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಹೊರರಾಜ್ಯದ ಗಡಿ ಪ್ರದೇಶದ ಜನರು ನಮ್ಮ ಕಾಡುಗಳಲ್ಲಿ ಜಾನುವಾರುಗಳನ್ನು ಮೇಯಿಸುವುದಕ್ಕೆ ಈಗ ಕಡಿವಾಣ ಹಾಕಲಾಗುತ್ತಿದೆ’ ಎಂದರು.

‘ತಮಿಳುನಾಡಿನ ಕಾಡುಗಳಲ್ಲಿ ಜಾನುವಾರುಗಳನ್ನು ಮೇಯಿಸಲು ನಿಷೇಧವಿದ್ದು, ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಾರೆ. ಈ ಕಾರಣದಿಂದ ಅಲ್ಲಿನ ದನಗಾಹಿಗಳು ನಮ್ಮ ಅರಣ್ಯ ಪ್ರದೇಶಕ್ಕೆ ಜಾನುವಾರುಗಳನ್ನು ಕರೆತಂದು ಮೇಯಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಅಲ್ಲಿನ ದನಗಾಹಿಗಳು ಸಾವಿರಾರು ದನ–ಎಮ್ಮೆಗಳನ್ನು ರಾಜ್ಯದ ಅರಣ್ಯ ಪ್ರದೇಶಕ್ಕೆ ಅಟ್ಟಿಕೊಂಡು ಬರುತ್ತಾರೆ. ಒಮ್ಮೆ ಬಂದರೆ, ತಿಂಗಳುಗಟ್ಟಲೆ ಕಾಡಿನಲ್ಲೇ ಬೀಡುಬಿಟ್ಟಿರುತ್ತಾರೆ. ಇದರಿಂದ ನಮ್ಮ ಕಾಡುಗಳಲ್ಲಿ ಎಳೆಚಿಗುರು, ಹುಲ್ಲು ಇಲ್ಲವಾಗುತ್ತಿವೆ. ಇದನ್ನು ತಪ್ಪಿಸುವ ಉದ್ದೇಶದಿಂದ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ’ ಎಂದು ವಿವರಿಸಿದರು.

‘ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ಮೀಸಲು ಅರಣ್ಯ, ವನ್ಯಜೀವಿಧಾಮ, ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಜನರ ಅತಿಕ್ರಮ ಪ್ರವೇಶಕ್ಕೆ ಮತ್ತು ಸಾಕುಪ್ರಾಣಿ ಗಳನ್ನು ಮೇಯಿಸಲು ಅವಕಾಶ ಇರುವುದಿಲ್ಲ. ಆದರೆ ರಾಜ್ಯದ ಹಲವು ಭಾಗಗಳಲ್ಲಿ ಹೀಗೆ ಮೇಯಿಸುವುದು ರೂಢಿಯಲ್ಲಿದೆ. ಈಗ ಅದನ್ನು ತಡೆಯುವುದಿಲ್ಲ’ ಎಂದರು.

‘ಜಾನುವಾರುಗಳನ್ನು ಕಾಡಿನಲ್ಲಿ ಮೇಯಿಸುವುದರಿಂದ ಅವುಗಳಿಗಿರುವ ಚರ್ಮಗಂಟು, ಕಾಲುಬಾಯಿ ರೋಗ, ನೆಗಡಿಯಂತಹ ಸೋಂಕುಗಳು ವನ್ಯ ಜೀವಿಗಳಿಗೂ ಹರಡುವ ಅಪಾಯವಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಅತಿಹೆಚ್ಚು ಹಾಲು ನೀಡುವ ಹಸುಗಳ ಸಾಕಾಣಿಕೆಗೆ ಉತ್ತೇಜನ ನೀಡಿ, ಜಾನುವಾರುಗಳನ್ನು ಕಾಡಿಗೆ ಕರೆದುಕೊಂಡು ಹೋಗದಂತೆ ಮನವರಿಕೆ ಮಾಡುತ್ತೇವೆ’ ಎಂದು ವಿವರಿಸಿದರು.

‘ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ 33,000 ಜಾನುವಾರುಗಳಿವೆ ಎಂಬುದು ಪಶುಸಂಗೋಪನಾ ಇಲಾಖೆಯ ಅಂದಾಜು. ಚಾಮರಾಜ ನಗರ ಜಿಲ್ಲೆಯಲ್ಲಿ ಈಗಾಗಲೇ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ಸುಮಾರು 15 ರೈತರಿಗೆ, ಹೆಚ್ಚು ಹಾಲು ನೀಡುವ ಹೈಬ್ರೀಡ್‌ ಹಸುಗಳನ್ನು ನೀಡಲಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’ ಎಂದರು.

‘ವಿಷಪ್ರಾಶನವೇ ಕಾರಣ’

‘ಜಾನುವಾರುಗಳ ಕಾರಣಕ್ಕೆ ಕಾಡಿನಲ್ಲಿ ಆನೆ, ಕಾಡೆಮ್ಮೆ, ಕಾಡುಕೋಣ, ಜಿಂಕೆ, ಕಡವೆ ಇತ್ಯಾದಿಗೆ ಮೇವಿನ ಕೊರತೆ, ನೀರಿನ ಕೊರತೆ ಎದುರಾಗುತ್ತಿದೆ. ಇದರಿಂದಲೇ ಸಂಘರ್ಷ ಉಂಟಾಗುತ್ತಿದೆ.

ಜಾನುವಾರುಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ವನ್ಯಜೀವಿಗಳಿಗೆ ವಿಷಪ್ರಾಶನ ಮಾಡುವ ಮಟ್ಟಕ್ಕೆ ಹೋದುದರಿಂದಲೇ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚಿಸಿದ್ದೇನೆ’ ಎಂದು ಈಶ್ವರ ಬಿ. ಖಂಡ್ರೆ ಹೇಳಿದರು. ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಈಚೆಗೆ ಒಂದು ಹೆಣ್ಣುಹುಲಿ ಮತ್ತು ಅದರ ನಾಲ್ಕು ಮರಿಗಳು ಅಸಹಜವಾಗಿ ಮೃತಪಟ್ಟಿದ್ದವು. ಅವುಗಳಿಗೆ ವಿಷವಿಕ್ಕಿ ಕೊಲ್ಲಲಾಗಿತ್ತು ಎಂಬುದು ತನಿಖೆಯಿಂದ ಗೊತ್ತಾಗಿತ್ತು. ಈ ಸಂಬಂಧ ಮೂವರು ದನಗಾಹಿಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದರು.

ಅಂಬಾರಿ ಹೊರಲಿರುವ ಅಭಿಮನ್ಯು

‘ಈ ಬಾರಿಯೂ ಅಭಿಮನ್ಯು ಆನೆಯೇ ದಸರಾದಲ್ಲಿ ಅಂಬಾರಿ ಹೊರಲಿದೆ. ಆಗಸ್ಟ್ 4ರಂದು ಹುಣಸೂರು ಬಳಿಯ ವೀರನಹೊಸಳ್ಳಿಯಿಂದ ವಿಧ್ಯುಕ್ತವಾಗಿ ಗಜಪಯಣಕ್ಕೆ ಚಾಲನೆ ನೀಡಲಾಗುವುದು’ ಎಂದು ಈಶ್ವರ ಖಂಡ್ರೆ ತಿಳಿಸಿದರು.

ದಸರಾದ ಜಂಬೂಸವಾರಿಯಲ್ಲಿ ಭಾಗಿಯಾಗುವ 15 ಆನೆಗಳ ಪೈಕಿ 9 ಆನೆಗಳ ಪಟ್ಟಿ ಬಿಡುಗಡೆ ಮಾಡಿದ ಅವರು, ‘2020ರಿಂದಲೂ ಅಭಿಮನ್ಯು ಅಂಬಾರಿ ಹೊರುತ್ತಿದ್ದಾನೆ. ಈ ಬಾರಿಯೂ ಅವನೇ ಹೊರಲಿದ್ದಾನೆ’ ಎಂದರು. ‘ಮತ್ತೀಗೋಡು ಶಿಬಿರದ ಭೀಮ (25 ವರ್ಷ), ದುಬಾರೆ ಶಿಬಿರದ ಕಂಜನ್ (24), ಧನಂಜಯ (44) ಮತ್ತು ಪ್ರಶಾಂತ್ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40) ಗಂಡಾನೆಗಳು ಹಾಗೂ ದುಬಾರೆ ಶಿಬಿರದ ಕಾವೇರಿ (45), ಬಳ್ಳೆಯ ಲಕ್ಷ್ಮೀ (53) ಮೊದಲ ಹಂತದಲ್ಲಿ ಮೈಸೂರಿಗೆ ಬರಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.