ADVERTISEMENT

ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ನೀಡಲು ಒತ್ತಾಯ

ಅರಣ್ಯ ವಾಸಿಗಳ ಸಮಾವೇಶದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 18:42 IST
Last Updated 17 ಫೆಬ್ರುವರಿ 2022, 18:42 IST
ಬೆಂಗಳೂರಿನಲ್ಲಿ ಗುರುವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮಕ್ಕೂ ಮುನ್ನ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಮತ್ತು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಡೊಳ್ಳು ಕುಣಿತ ಕಲಾವಿದರೊಂದಿಗೆ ಚರ್ಚಿಸಿದರು -–-ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಗುರುವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮಕ್ಕೂ ಮುನ್ನ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಮತ್ತು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಡೊಳ್ಳು ಕುಣಿತ ಕಲಾವಿದರೊಂದಿಗೆ ಚರ್ಚಿಸಿದರು -–-ಪ್ರಜಾವಾಣಿ ಚಿತ್ರ   

ಬೆಂಗಳೂರು: ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಮತ್ತು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ತಕ್ಷಣದಿಂದ ಸ್ಥಗಿತಗೊಳಿಸುವಂತೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸರ್ಕಾರಕ್ಕೆ ಒತ್ತಾಯಿಸಿದೆ.

ನಗರದಲ್ಲಿ ಗುರುವಾರ ನಡೆದ ವೇದಿಕೆಯ 30 ವರ್ಷಗಳ ಅರಣ್ಯ ಭೂಮಿ ಹಕ್ಕು ಹೋರಾಟದ ಕುರಿತಾದ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಮತ್ತು ಅರಣ್ಯ ವಾಸಿಗಳ ಸಮಾವೇಶದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಶಿರಸಿ, ಶಿವಮೊಗ್ಗ, ಗದಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜನರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಸುಮಾರು ಹತ್ತು ಲಕ್ಷ ಕುಟುಂಬಗಳು ವಾಸಿಸಲು ಹಾಗೂ ಸಾಗುವಳಿಗಾಗಿ ಅರಣ್ಯ ಪ್ರದೇಶವನ್ನು ಅವಲಂಬಿಸಿದ್ದಾರೆ. ಅರಣ್ಯ ವಾಸಿಗಳಿಗೆ ಸಾಗುವಳಿ ಹಕ್ಕುಪತ್ರ ಕೊಡುವ ದಿಸೆಯಲ್ಲಿ 2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಲಾಯಿತು. ಆದರೆ, ಇಂದಿನವರೆಗೂ ಅರಣ್ಯವಾಸಿಗಳಿಗೆ ಹಕ್ಕು ಪತ್ರಗಳು ದೊರೆಯು
ವುದು ಮರೀಚಿಕೆಯಾಗಿದೆ. ಹೀಗಾಗಿ, ಈ ಕಾಯ್ದೆಯ ಅನುಷ್ಠಾನದಲ್ಲಿನ ದೋಷಗಳನ್ನು ಸರಿಪಡಿಸಿ ಕಾಲಮಿತಿ ನಿಗದಿಪಡಿಸಬೇಕು ಎಂದು ವೇದಿಕೆಯ ಅಧ್ಯಕ್ಷ ಏ. ರವೀಂದ್ರ ನಾಯ್ಕ್‌ ತಿಳಿಸಿದರು.

ADVERTISEMENT

ಅರಣ್ಯ ವಾಸಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶ ಸೇರಿಸುವುದನ್ನು ಕೈಬಿಡಬೇಕು. ಈ ಅಭಯಾರಣ್ಯಕ್ಕೆ 20 ಸಾವಿರ ಹೆಕ್ಟೇರ್‌ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿ 2019ರ ಜುಲೈ 7ರಂದು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು ಒಂದು ಲಕ್ಷ ಕುಟುಂಬಗಳು ಅರಣ್ಯ ಭೂಮಿಯ ಮೇಲೆ ಅವಲಂಬಿತರಾಗಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಾಗುವಳಿಗಾಗಿ 81,625 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಇವುಗಳಲ್ಲಿ 65,220 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಶೇಕಡ 3.25ರಷ್ಟು ಅರ್ಜಿಗಳಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ ಎಂದು ವಿವರಿಸಿದರು.

ಒಂದು ಲಕ್ಷ ಮರಗಳ ನಾಶ: ಅರಣ್ಯ ಇಲಾಖೆಯು ವಿವಿಧ ಕಾಮಗಾರಿಗಳ ನೆಪದಲ್ಲಿ ಕಳೆದ ಐದು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೆಚ್ಚು ಮರಗಳನ್ನು ಕಡಿದಿದೆ. ಈ ಬಗ್ಗೆ ವಿಶೇಷ ತನಿಖೆ ನಡೆಸಬೇಕು ಎಂದು ರವೀಂದ್ರ ನಾಯ್ಕ ಒತ್ತಾಯಿಸಿದರು.

ರಾಜ್ಯದಾದ್ಯಂತ ಅರಣ್ಯ ವಾಸಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಿಮಿನಲ್‌ ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ. ಈ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

‘ಸಾಗುವಳಿದಾರರ ವಿರುದ್ಧ ಭೂಕಬಳಿಕೆ ಪ್ರಕರಣ’

‘ಬಯಲುಸೀಮೆ ಜಿಲ್ಲೆಯ ಸಾಗುವಳಿದಾರರ ಮೇಲೆ ಭೂಕಬಳಿಕೆ ಮೊಕದ್ದಮೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈಗಾಗಲೇ 1500ಕ್ಕಿಂತ ಹೆಚ್ಚು ಪ್ರಕರಣಗಳು ಭೂಕಬಳಿಕೆ ನ್ಯಾಯಾಲಯದಲ್ಲಿವೆ’ ಎಂದು ಕಾಂಗ್ರೆಸ್ ಶಾಸಕ ಎಚ್‌.ಕೆ. ಪಾಟೀಲ್ ವಿವರಿಸಿದರು.

‘ಸಾಗುವಳಿ ಹಕ್ಕು ಪತ್ರ ನೀಡಲು ಕಾನೂನು ರೂಪಿಸಲಾಗಿದೆ. ಸುಪ್ರೀಂ ಕೋರ್ಟ್‌ ಸಹ ತೀರ್ಪು ನೀಡಿದೆ. ಆದರೆ, ಬಾಗಲಕೋಟೆ, ಗದಗ, ಕೊಪ್ಪಳ ಮುಂತಾದ ಜಿಲ್ಲೆಗಳಲ್ಲಿನ ಅರಣ್ಯ ಪ್ರದೇಶದಲ್ಲಿನ ಸಾಗುವಳಿದಾರರಿಗೆ ತೊಂದರೆ ನೀಡುತ್ತಿರುವುದು ಮತ್ತಷ್ಟು ಹೆಚ್ಚಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹೋರಾಟದ ಕಿಚ್ಚು ಕಳೆದುಕೊಳ್ಳಬೇಡಿ’

‘ಅರಣ್ಯ ಭೂಮಿ ಹಕ್ಕಿಗಾಗಿ ಕಳೆದ 30 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟದ ಕಿಚ್ಚು ಕಳೆದುಕೊಳ್ಳಬೇಡಿ’ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಅತಿಕ್ರಮಣಕಾರರಿಂದ ಅರಣ್ಯ ಸಂಪತ್ತು ಲೂಟಿಯಾಗಿಲ್ಲ. ಲೂಟಿಕೋರರಿಂದ ಅರಣ್ಯ ಸಂಪತ್ತು ಲೂಟಿಯಾಗುತ್ತಿದೆ. ಹೀಗಾಗಿ, ಅನಗತ್ಯ ಕಿರುಕುಳ ನೀಡುವುದು ನಿಲ್ಲಬೇಕಾಗಿದೆ. ನಮ್ಮ ಜೀವನಕ್ಕಾಗಿ ಅತಿಕ್ರಮಣ ಮಾಡಿಕೊಂಡಿದ್ದೇವೆಯೇ ಹೊರತು ಐಷಾರಾಮಿ ಜೀವನಕ್ಕಾಗಿ ಅಲ್ಲ’ ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ಮಾತನಾಡಿ, ‘ಗಣಿಗಾರಿಕೆ, ಅಣೆಕಟ್ಟುಗಳು, ರಸ್ತೆ ಮತ್ತು ರೈಲು ಮಾರ್ಗಗಳ ನಿರ್ಮಾಣ, ಕಾಳ್ಗಿಚ್ಚು ಮತ್ತು ಕಾಡುಗಳ್ಳರಿಂದ ದೇಶದಲ್ಲಿನ ಅರಣ್ಯ ಪ್ರದೇಶವು ಶೇ30ರಿಂದ 23ಕ್ಕೆ ಇಳಿದಿದೆ. ಇದಕ್ಕೆ ಅರಣ್ಯವಾಸಿಗಳು ಯಾವುದೇ ರೀತಿ ಹೊಣೆ ಅಲ್ಲ’ ಎಂದು ಅವರು
ಹೇಳಿದರು.

‘ಅರಣ್ಯ ಕಾಯ್ದೆ 2006ರಲ್ಲಿ ಜಾರಿಯಾದರೂ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದ ಅಧಿಕಾರಿಗಳೇ ದೇಶದ್ರೋಹಿಗಳು. ಇವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.