ADVERTISEMENT

ಬೆಳಗಾವಿ ಬೈಪಾಸ್‌ ರಸ್ತೆ ಯೋಜನೆ ವಿನ್ಯಾಸ ಬದಲಿಗೆ ಅರಣ್ಯ ಸಚಿವಾಲಯ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 15:42 IST
Last Updated 22 ಸೆಪ್ಟೆಂಬರ್ 2025, 15:42 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಳಗಾವಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಾಲ್ಕು/ಆರು ಪಥಗಳ ಬೈಪಾಸ್‌ ರಸ್ತೆಗೆ 3,365 ಮರಗಳ ಹನನವಾಗಲಿದೆ. ಕಾಡು ನಾಶ ಕಡಿಮೆ ಮಾಡಲು ಎತ್ತರಿಸಿದ ಮಾರ್ಗ ನಿರ್ಮಿಸಲು ರಾಜ್ಯ ಸರ್ಕಾರ ನಿರ್ದೇಶನ ನೀಡಬೇಕು ಎಂದು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ತಾಕೀತು ಮಾಡಿದೆ. 

ADVERTISEMENT

ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ (ಬೆನ್ನಾಲಿ ಬಳಿ ಸಂಪರ್ಕಿಸುತ್ತದೆ) ಹಾಗೂ ರಾಜ್ಯ ಹೆದ್ದಾರಿ 54 (ಕಲ್ಕಂಬ್ ಬಳಿ) ನಡುವೆ ಬೈಪಾಸ್‌ ರಸ್ತೆ ನಿರ್ಮಿಸಲು ನಗರದ ಈಶಾನ್ಯ ಭಾಗದಲ್ಲಿ 67 ಎಕರೆ ಅರಣ್ಯ ಭೂಮಿಯನ್ನು ಕೋರಿದೆ. ರಸ್ತೆ ನಿರ್ಮಾಣಕ್ಕಾಗಿ 37 ಜಾತಿಗಳ 3,364 ಮರಗಳನ್ನು ಕಡಿಯಲಾಗುತ್ತದೆ. ಪ್ರಸ್ತಾವದ ಪ್ರಕಾರ, ಈ ಯೋಜನೆಯು ಹೊನಗಾ, ಕಲ್ಕಟ್ಟಿ, ಸೊನಟ್ಟಿ, ಕಣಬರಗಿ, ಕಲ್ಕಂಬ್‌ ಮೂಲಕ ಹಾದು ಹೋಗಲಿದೆ. ಅರಣ್ಯ ಬಳಕೆಗೆ ಅನುಮತಿ ಕೋರಿ ಅರಣ್ಯ ಸಚಿವಾಲಯವು ಪ್ರಸ್ತಾವ ಸಲ್ಲಿಸಿತ್ತು. ಪರಿಸರ ಸಚಿವಾಲಯವು 12 ವಿಷಯಗಳಲ್ಲಿ ಸ್ಪಷ್ಟನೆ ಕೋರಿದೆ. ಜತೆಗೆ, ಯೋಜನೆಯ ವಿನ್ಯಾಸ ಬದಲಿಸಬೇಕು ಎಂದೂ ಹೇಳಿದೆ. 

ಬೆಳಗಾವಿ ಡಿಸಿಎಫ್‌ ಸ್ಥಳ ಪರಿಶೀಲನಾ ವರದಿಯ ಪ್ರಕಾರ, ಈ ಮಾರ್ಗವು 11 ಕಿ.ಮೀ. ಅರಣ್ಯದಲ್ಲಿ ಹಾದು ಹೋಗಲಿದೆ. ಇದರಿಂದ ಅರಣ್ಯ ಪ್ರದೇಶ ಛಿದ್ರಗೊಳ್ಳಲಿದೆ. ಹೀಗಾಗಿ, ಎತ್ತರಿಸಿದ ಮಾರ್ಗ ನಿರ್ಮಿಸಬೇಕು ಎಂದು ಸಚಿವಾಲಯ ಸೂಚಿಸಿದೆ. 

ಉಪಗ್ರಹ ಚಿತ್ರಗಳನ್ನು ಪರಿಶೀಲನೆ ನಡೆಸಿದಾಗ, ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಪ್ರದೇಶವು ವ್ಯಾಪಕ ಪ್ರಮಾಣದಲ್ಲಿ ಒತ್ತುವರಿಯಾಗಿರುವ ಅನುಮಾನ ಇದೆ. ಈ ಕುರಿತು ಅರಣ್ಯ ಇಲಾಖೆ ವರದಿ ಸಲ್ಲಿಸಬೇಕು ಎಂದು ಸಚಿವಾಲಯ ನಿರ್ದೇಶನ ನೀಡಿದೆ. 

ಪರಿಹಾರಾತ್ಮಕ ಅರಣ್ಯೀಕರಣಕ್ಕೆ ವಿಜಯಪುರ ಜಿಲ್ಲೆಯ ಭೂತನಾಳ ಗ್ರಾಮದ 22 ಹೆಕ್ಟೇರ್ ಜಾಗ ಗುರುತಿಸಲಾಗಿದೆ. ಬೇರೆ ಬೇರೆ ಯೋಜನೆಗಳಲ್ಲೂ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಇದೇ ಜಾಗ ಗುರುತಿಸಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರ ದಾಖಲೆಗಳ ಸಮೇತ ವಿವರಣೆ ನೀಡಬೇಕು ಎಂದು ಹೇಳಿದೆ. 

ಒತ್ತುವರಿ ಆಗಿರುವ ಅರಣ್ಯವನ್ನು ಹೆದ್ದಾರಿ ಯೋಜನೆಗೆ ಶಿಫಾರಸು ಮಾಡಿದ ಅಧಿಕಾರಿಗಳ ವಿರುದ್ಧ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.