ADVERTISEMENT

ಸುಳ್ಳು ಸುದ್ದಿ ಪತ್ತೆಗೆ ಎಂಡಿಸಿಸಿ ರಚನೆ: ರಾಜ್ಯ ಸರ್ಕಾರ ಆದೇಶ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 16:07 IST
Last Updated 14 ಮಾರ್ಚ್ 2024, 16:07 IST
   

ಬೆಂಗಳೂರು: ಸುಳ್ಳು ಸುದ್ದಿ ಹರಡುವುದು, ಫೋಟೊ ಮತ್ತು ವಿಡಿಯೊಗಳನ್ನು ತಿರುಚಿ ಬಿತ್ತರಿಸುವುದು ಸೇರಿದಂತೆ ವಿವಿಧ ರೀತಿಯ ಆನ್‌ಲೈನ್‌ ಪ್ರಕರಣಗಳ ಮೇಲೆ ನಿಗಾ ವಹಿಸಲು ಬಹು ಇಲಾಖೆಗಳ ಸಮನ್ವಯ ಸಮಿತಿ (ಎಂಡಿಸಿಸಿ) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿಐಡಿ ಸೈಬರ್‌ ವಿಭಾಗದ (ಸಿ ಆ್ಯಂಡ್‌ ಎನ್‌) ಎಡಿಜಿಪಿ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಐಟಿಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ, ಮಾಹಿತಿ ಇಲಾಖೆಯ ಕಾರ್ಯದರ್ಶಿ, ಸರ್ಕಾರದ ನಾಮನಿರ್ದೇಶನ ಮಾಡಿದ ಕಾನೂನು ಸಲಹೆಗಾರ, ಐಟಿಬಿಟಿ ಇಲಾಖೆ ಒದಗಿಸುವ ಸೇವಾದಾರರು, ಸರ್ಕಾರ ನಾಮನಿರ್ದೇಶನ ಮಾಡುವ ತಲಾ ಒಬ್ಬರು ಸಾರ್ವಜನಿಕ ಮತ್ತು ತಾಂತ್ರಿಕ ವಲಯದವರು ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡುವುದು, ಫೋಟೊ ಮತ್ತು ವಿಡಿಯೊಗಳನ್ನು ತಿರುಚಿ ಬಿತ್ತರಿಸುವ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾದವರನ್ನು ಪತ್ತೆ ಮಾಡಿ, ಅವರ ಮೇಲೆ ತೆಗೆದುಕೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ವಿವಿಧ ಜಾರಿ ಮತ್ತು ನಿಯಂತ್ರಣ ಏಜೆನ್ಸಿಗಳಿಗೆ ಈ ಸಮಿತಿಯು ಸಲಹೆ ನೀಡಲಿದೆ. ಸಿಐಡಿಯಲ್ಲಿ ಸೈಬರ್‌ ಅಪರಾಧ ವಿಭಾಗ ಮತ್ತು ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಈ ಸಮಿತಿಯು ಮಧ್ಯಪ್ರವೇಶಿಸುವಂತಿಲ್ಲ ಎಂದೂ ಅದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ADVERTISEMENT

ಸಿಐಡಿ ಸೈಬರ್‌ ವಿಭಾಗದ (ಸಿ ಆ್ಯಂಡ್‌ ಎನ್‌) ಎಡಿಜಿಪಿ ಅವರ ಈ ಸಮಿತಿಗೆ ನೋಡಲ್‌ ಅಧಿಕಾರಿಯಾಗಿರುತ್ತಾರೆ. ಸಮಿತಿಯು ಶಿಫಾರಸು ಮಾಡಿದ ಪ್ರಕರಣಗಳ ನೋಂದಣಿ ಮತ್ತು ತನಿಖೆ ನಡೆಸುವಂತೆ ನೋಡಲ್‌ ಅಧಿಕಾರಿಯು ಸೈಬರ್‌ ಪೊಲೀಸ್‌ ಠಾಣೆಗಳಿಗೆ ಸೂಚಿಸಿ, ಮೇಲುಸ್ತುವಾರಿ ವಹಿಸಲಿದ್ದಾರೆ. ತುರ್ತು ಸಂದರ್ಭಗಳಲ್ಲಿ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನೂ ನೋಡಲ್‌ ಅಧಿಕಾರಿಗೆ ನೀಡಲಾಗಿದೆ. ಐಟಿಬಿಟಿ ಇಲಾಖೆಯು ಅಗತ್ಯವಾದ ತಾಂತ್ರಿಕ ನೆರವು ನೀಡಲಿದೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.