ಕಾಶಪ್ಪನವರ ಜೊತೆ ಸಂದಾನ ಆಗದಿದ್ದರೆ ಶ್ರೀಗಳಿಗೆ ಬೇರೆ ಪೀಠ: ಸಿ.ಸಿ. ಪಾಟೀಲ
ನರಗುಂದ (ಗದಗ ಜಿಲ್ಲೆ): ‘ಕಾಶಪ್ಪನವರಾಗಲಿ, ಶ್ರೀಗಳಾಗಲಿ ಒಂದು ಹೆಜ್ಜೆ ಹಿಂದೆ ಸರಿದು ಪಂಚಮಸಾಲಿ ಸಮಾಜದ ಹಿತ ಕಾಯಬೇಕು. ಇದರಿಂದ ಇಡೀ ಪಂಚಮಸಾಲಿ ಸಮಾಜಕ್ಕೆ ಒಳ್ಳೆಯದಾಗುತ್ತದೆ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
‘ಈಗ ನಡೆಯುತ್ತಿರುವ ಘಟನೆಗಳಿಂದ ಶ್ರೀಗಳಿಗೆ ಸ್ವಲ್ಪ ಹಿಂಸೆಯಾಗಿದೆ. ಸಂಧಾನದಲ್ಲೂ ಪರಿಹಾರ ಕಾಣದಿದ್ದಲ್ಲಿ ಜಯಮೃತ್ಯುಂಜಯ ಶ್ರೀಗಳಿಗೆ ಮೂಲ ಪೀಠದಲ್ಲಿ ತೊಂದರೆಯಾದರೆ ಅವರು ಇಷ್ಟಪಟ್ಟ ಸ್ಥಳದಲ್ಲೇ ಶಾಖಾ ಪೀಠ ನಿರ್ಮಿಸಿ ಕೊಡಲಾಗುವುದು. ಅವರಿಗೆ ನಮ್ಮ ಸಮಾಜದ ಎಲ್ಲ ಶಾಸಕರು, ಹಿರಿಯರು ಬೆಂಗಾವಲಾಗಿ ನಿಲ್ಲುತ್ತೇವೆ’ ಎಂದು ಪಟ್ಟಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪಂಚಮಸಾಲಿ ಶ್ರೀಗಳು ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ನಡುವೆ ಯಾವ ವಿಚಾರಕ್ಕೆ ಅಸಮಾಧಾನ ಉಂಟಾಗಿದೆಯೋ ಗೊತ್ತಿಲ್ಲ. ಸಮಾಜದ ಹಿರಿಯರು, ಶಾಸಕರು ಹಾಗೂ ಮುಖಂಡರನ್ನು ಒಳಗೊಂಡ ಸಭೆಯನ್ನು ಶೀಘ್ರದಲ್ಲೇ ಬೆಂಗಳೂರಿನಲ್ಲಿ ನಡೆಸಲಾಗುವುದು’ ಎಂದರು.
‘ಹಿಂದೆ ನಮ್ಮ ಸರ್ಕಾರ ಇದ್ದಾಗ ಕಾಶಪ್ಪನವರ ಶ್ರೀಗಳ ಜೊತೆ ಕೂಡಿಕೊಂಡು ಬೆಂಗಳೂರುವರೆಗೆ 750 ಕಿ.ಮೀ.
ಪಾದಯಾತ್ರೆ ಮಾಡಿದಾಗ ನಾನು ಸರ್ಕಾರ ಹಾಗೂ ಸಮಾಜದ ಕೊಂಡಿಯಾಗಿ ಕೆಲಸ ಮಾಡಿದ್ದೇನೆ. ವಿಜಯಾನಂದ ಕಾಶಪ್ಪನವರ 2ಎ ಮೀಸಲಾತಿಯನ್ನು ನಮ್ಮ ಸರ್ಕಾರ ಬಂದರೆ 24 ಗಂಟೆಯೊಳಗಾಗಿ ಮಾಡುವುದಾಗಿ ಹೇಳಿದ್ದರು. ಆ ಮಾತು ಮರೆತಿದ್ದಾರೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.