ADVERTISEMENT

ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಗಲಾಟೆ:ಸೋಮವಾರಪೇಟೆ ತಹಶೀಲ್ದಾರ್‌ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2018, 18:11 IST
Last Updated 19 ಸೆಪ್ಟೆಂಬರ್ 2018, 18:11 IST
ಕುಶಾಲನಗರ ವಾಲ್ಮೀಕಿ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು ಹಾಗೂ ಪೊಲೀಸರ ನಡುವೆ ನಡೆದ ವಾಗ್ವಾದ
ಕುಶಾಲನಗರ ವಾಲ್ಮೀಕಿ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು ಹಾಗೂ ಪೊಲೀಸರ ನಡುವೆ ನಡೆದ ವಾಗ್ವಾದ   

ಕುಶಾಲನಗರ: ಭೂಕುಸಿತದಿಂದ ನೆಲೆ ಕಳೆದುಕೊಂಡು ಕುಶಾಲನಗರದ ವಾಲ್ಮೀಕಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರು, ಅಧಿಕಾರಿಗಳ ನಡುವೆ ಗಲಾಟೆ ನಡೆದಿದೆ. ಘಟನೆಯಲ್ಲಿ ಸೋಮವಾರಪೇಟೆ ತಹಶೀಲ್ದಾರ್ ಹಾಗೂ ಇಬ್ಬರು ನಿರಾಶ್ರಿತರು ಗಾಯಗೊಂಡಿದ್ದಾರೆ.

ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತ ಕುಟುಂಬಗಳಿಗೆ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆಪಾದಿಸಿ ಮಂಗಳವಾರ ರಾತ್ರಿ ಸಂತ್ರಸ್ತರು ಪ್ರತಿಭಟನೆ ನಡೆಸಿದರು.

ದಾನಿಗಳು ಪರಿಹಾರ ನೀಡಲು ಕೇಂದ್ರಕ್ಕೆ ಬಂದರೂ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ನೀವು ಪರಿಹಾರ ಪಡೆಯಬೇಕಾದರೆ ಕೇಂದ್ರ ಬಿಟ್ಟು ಹೋಗಿ ಎಂದು ತಾಕೀತು ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ADVERTISEMENT

ಸ್ಥಳಕ್ಕೆ ಬಂದ ಪೊಲೀಸರು ಸಂತ್ರಸ್ತರನ್ನು ಸಮಾಧಾನಪಡಿಸಿದರು. ಬಳಿಕ ಕೊಠಡಿಯ ಒಳಗೆ ತೆರಳಿದ್ದ ತಹಶೀಲ್ದಾರ್ ಮಹೇಶ್‌, ಸಂತ್ರಸ್ತರ ಹಾಜರಾತಿ ಪಡೆಯುತ್ತಿದ್ದ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದು, ತಲೆಗೆ ಪೆಟ್ಟು ಬಿದ್ದಿದೆ. ತಕ್ಷಣ ಓಡಿಹೋಗಿ ಕೊಠಡಿ ಬಾಗಿಲು ಹಾಕಿಕೊಂಡು ರಕ್ಷಣೆ ಪಡೆದುಕೊಂಡರು. ಸ್ಥಳಕ್ಕೆ ಬಂದ ಪೊಲೀಸ್‌ ಸಿಬ್ಬಂದಿ ತಹಶೀಲ್ದಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದರು.

ಪ್ರತಿಭಟನೆ ವೇಳೆ ಸಂತ್ರಸ್ತ ಮಹಿಳೆಯರೊಂದಿಗೆ ತಹಶೀಲ್ದಾರ್‌ ಅಸಭ್ಯವಾಗಿ ವರ್ತಿಸಿದರು ಎಂದು ಆರೋಪಿಸಿದ ನಿರಾಶ್ರಿತರು, ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪಟ್ಟುಹಿಡಿದರು.

ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಸಂಬಂಧ ಸಂತ್ರಸ್ತರಾದ ಸಂಜೀವಾ, ಸುರೇಶ್ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡಿರುವ ಸಂಜೀವಾ, ಚಿತ್ರಾ ವಸಂತ್ ಅವರೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ‘ನಮ್ಮ ಮೇಲೆ ತಹಶೀಲ್ದಾರ್ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲಿಸಿದರು.

ನಿರ್ಗಮನ: ಗಲಾಟೆಯಿಂದ ಹೆದರಿದ ಕೆಲವು ಸಂತ್ರಸ್ತರ ಕುಟುಂಬಗಳು ಬುಧವಾರ ಸ್ವಂತ ಗ್ರಾಮಕ್ಕೆ ತೆರಳಿದವು. ಕೆಲವರು ನಿತ್ಯ ಸಂಜೆ ಗಲಾಟೆ ನಡೆಸುತ್ತಿದ್ದಾರೆ. ನಮಗೆ ಪರಿಹಾರ ನೀಡುತ್ತಿಲ್ಲವೆಂದು ಮದ್ಯ ಸೇವಿಸಿ ಅಧಿಕಾರಿಗಳ ಜತೆ ಗಲಾಟೆ ಮಾಡುತ್ತಾರೆ. ಇದರಿಂದ ನಮಗೆ ಇಲ್ಲಿರಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ಸಂತ್ರಸ್ತರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.