ADVERTISEMENT

ನಿಗಾ ಕೇಂದ್ರಕ್ಕೆ ನಾಲ್ವರ ದಾಖಲು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 14:39 IST
Last Updated 30 ಮಾರ್ಚ್ 2020, 14:39 IST

ಮಂಗಳೂರು: ಕೊರೊನಾ ವೈರಸ್‌ ಸೋಂಕು ತಗುಲಿರುವ ಶಂಕೆಯ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರನ್ನು ಸೋಮವಾರ ವೈದ್ಯಕೀಯ ನಿಗಾ ಕೇಂದ್ರಕ್ಕೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಜಿಲ್ಲೆಯ 48 ಮಂದಿಗೆ ಸೋಮವಾರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈವರೆಗೆ ಒಟ್ಟು 38,279 ಜನರ ಆರೋಗ್ಯ ತಪಾಸಣೆ ನಡೆಸಿದ್ದು, 5,875 ಜನರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಮಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ 28 ಜನರನ್ನು ಇರಿಸಿದ್ದು, ಕೋವಿಡ್‌–19 ಸೋಂಕು ತಗುಲಿರುವ ಶಂಕೆಯಿಂದ ಅವರ ಮೇಲೆ ವೈದ್ಯಕೀಯ ನಿಗಾ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ 169 ಜನರು ಸೋಮವಾರಕ್ಕೆ 28 ದಿನಗಳ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ್ದಾರೆ. ಹೊಸದಾಗಿ ಎಂಟು ಜನರ ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಹಿಂದೆ ಕಳುಹಿಸಿದ್ದ 14 ಮಾದರಿಗಳ ವರದಿಗಳು ಬಂದಿವೆ. ಈ ಪೈಕಿ ಒಂಬತ್ತು ಮಾದರಿಗಳು ನೆಗೆಟಿವ್‌ ಎಂಬ ವರದಿ ಲಭಿಸಿದೆ. ಐದು ಮಾದರಿಗಳಿಗೆ ಸಂಬಂಧಿಸಿದಂತೆ ಖಚಿತ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನವ ಮಂಗಳೂರು ಬಂದರು ಮೂಲಕ ವಿದೇಶಗಳಿಂದ ಬಂದವರನ್ನು ನೇರವಾಗಿ ತಪಾಸಣೆ ನಡೆಸಲಾಗಿತ್ತು. ಅವರೆಲ್ಲರನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಬೇರೆ ವಿಮಾನ ನಿಲ್ದಾಣಗಳಿಂದ ಬಂದವರನ್ನೂ ಈಗ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಆಶಾ ಕಾರ್ಯಕರ್ತೆಯರು ಈವರೆಗೆ 3,77,569 ಮನೆಗಳಿಗೆ ಭೇಟಿ ನೀಡಿದ್ದು, 15,33,783 ಮಂದಿಯನ್ನು ಸಂಪರ್ಕಿಸಿ ಕೊರೊನಾ ವೈರಸ್‌ ಸೋಂಕು ತಡೆಯುವ ಕುರಿತು ಜಾಗೃತಿ ಮೂಡಿಸಿದ್ದಾರೆ ಎಂದು ವಿವರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.