ADVERTISEMENT

ತೈಲದ ಮೇಲೆ ಅಧಿಕ ಸುಂಕ, ತೆರಿಗೆ ಹೇರಿಕೆ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 19:31 IST
Last Updated 9 ಮಾರ್ಚ್ 2021, 19:31 IST
ವಿಧಾನಸಭೆಯಲ್ಲಿ ಮಂಗಳವಾರ ನಡೆದ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು
ವಿಧಾನಸಭೆಯಲ್ಲಿ ಮಂಗಳವಾರ ನಡೆದ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು   

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ಯಧಿಕ ಸುಂಕ, ತೆರಿಗೆ ಹೇರುವ ಮೂಲಕ ಜನರಿಗೆ ದ್ರೋಹ ಬಗೆದಿವೆ. ಬಡ ಹಾಗೂ ಮಧ್ಯಮ ವರ್ಗವನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಬೆಲೆ ಏರಿಕೆ ವಿಷಯವನ್ನು ಪ್ರಸ್ತಾಪಿಸಿದ ಅವರು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿರುವುದರಿಂದ ಬಡವರು ಮತ್ತು ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಒಳ್ಳೆಯ ದಿನ‌ ಬರುತ್ತದೆ. ಸ್ವರ್ಗವನ್ನೇ ಸೃಷ್ಟಿಸುತ್ತೇವೆ ಎಂದಿದ್ದರು. ಒಳ್ಳೆಯ ದಿನ ಬರಲಿಲ್ಲ. ಬೆಲೆ ಏರಿಕೆಯನ್ನು ತಡೆಯಲು ತೈಲಗಳ ಮೇಲಿನ ತೆರಿಗೆಯನ್ನು ಇಳಿಸುವುದರ ಬದಲು, ಪರೋಕ್ಷ ತೆರಿಗೆಯನ್ನು ಹೇರಿದ್ದಾರೆ ಎಂದು ಅವರು ಹರಿಹಾಯ್ದರು.

ADVERTISEMENT

ಒಂದು ಲೀಟರ್‌ ಪೆಟ್ರೋಲ್‌ ಮೇಲೆ ₹32.98 ಮತ್ತು ಒಂದು ಲೀಟರ್‌ ಡೀಸೆಲ್ ಮೇಲೆ ₹31.83 ಕೇಂದ್ರ ಸರ್ಕಾರ ಸುಂಕ ವಿಧಿಸುತ್ತಿದೆ. ಅದೇ ರೀತಿ ರಾಜ್ಯ ಸರ್ಕಾರ ಒಂದು ಲೀಟರ್ ಪೆಟ್ರೋಲ್‌ಗೆ ಶೇ 35 ಮತ್ತು ಡಿಸೇಲ್‌ಗೆ ಶೇ 24 ರಷ್ಟು ಮಾರಾಟ ತೆರಿಗೆ ಹಾಕುತ್ತಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದೆ. ಹಿಂದೆ ಯುಪಿಎ ಸರ್ಕಾರ ಇದ್ದಾಗ ಕಚ್ಚಾ ತೈಲದ ಬೆಲೆ ಹೆಚ್ಚಿದ್ದರೂ ಕಡಿಮೆ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್ ಸಿಗುತ್ತಿತ್ತು. 2012 ರಲ್ಲಿ ಒಂದು ಬ್ಯಾರಲ್‌ ಕಚ್ಚಾ ತೈಲದ ಬೆಲೆ 125.41 ಡಾಲರ್‌ ಇದ್ದಾಗ ನಮ್ಮಲ್ಲಿ ಪೆಟ್ರೋಲ್ ಬೆಲೆ ₹51.17 ಇತ್ತು. ಈಗ ಪ್ರತಿ ಬ್ಯಾರಲ್‌ ಕಚ್ಚಾ ತೈಲದ ಬೆಲೆ 70 ಡಾಲರ್‌ ಆಸುಪಾಸು ಇದ್ದರೂ ಪೆಟ್ರೋಲ್‌ ಬೆಲೆ ₹100 ಸಮೀಪದಲ್ಲಿದೆ ಎಂದು ಹೇಳಿದರು.

ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ, ಡಾಲರ್‌ ಮೌಲ್ಯದಲ್ಲೂ ಏರುಪೇರಾಗುವುದರಿಂದ ತೈಲ ಬೆಲೆಯಲ್ಲೂ ಏರಿಳಿತವಾಗುತ್ತದೆ ಎಂದು ಹೇಳಿದರು.

‘ನಾನೂ ಶ್ರೀರಾಮನ ಭಕ್ತ’
ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ‘ಜೈ ಶ್ರೀರಾಮ್‌’ ಎಂದು ಘೋಷಣೆ ಹಾಕಿದ್ದು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ತೈಲ ದರ ಏರಿಕೆ ಸಂಬಂಧ ಬಿಜೆಪಿಯ ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯಂ ಸ್ವಾಮಿ ಅವರ ಟ್ವೀಟ್‌ವೊಂದನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಆಗ ಕಾಂಗ್ರೆಸ್‌ ಸದಸ್ಯರು ‘ಜೈಶ್ರೀರಾಮ್‌’ ಎಂದು ಘೋಷಣೆ ಹಾಕಿದರು.

‘ಯಾಕ್ರಪ್ಪಾ ಬೆಲೆ ಜಾಸ್ತಿ ಆಗಿದ್ದಕ್ಕಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಕಾಂಗ್ರೆಸ್‌ ಸದಸ್ಯರು ಮತ್ತೆ ಮತ್ತೆ ಅದೇ ಘೋಷಣೆ ಮೊಳಗಿಸಿದರು.

‘ನೋಡಿ ನಿಮ್ಮ ಬಾಯಲ್ಲಿ ಜೈ ಶ್ರೀರಾಮ್‌ ಕೇಳಿ ಖುಷಿ ಆಯಿತು’ ಎಂದು ಸಚಿವ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ಸಿಗರನ್ನು ಛೇಡಿಸಿದರು.

‘ನೋಡಪ್ಪಾ ಬಸವರಾಜ್ ನನ್ನ ಹೆಸರಲ್ಲಿ ರಾಮ ಇದ್ದಾನೆ. ನಾನೂ ಶ್ರೀರಾಮನ ಭಕ್ತನೇ. ರಾಮ ನಿಮಗೆ ಮಾತ್ರ ದೇವರಲ್ಲ ನಮಗೂ ದೇವರೇ’ ಎಂದು ಹೇಳಿದರು. ಇದರಿಂದ ಉತ್ತೇಜಿತರಾದ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರು, ‘ನಮ್ಮ ಮನೆಯಲ್ಲೂ ರಾಮನ ಪೂಜೆ ಮಾಡುತ್ತೇವೆ. ರಾಮ ಬಿಜೆಪಿಯವರ ಆಸ್ತಿಯಲ್ಲ. ಎಲ್ಲರಿಗೂ ದೇವರೇ’ ಎಂದರು.

ಆಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,‘ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ನೀಡಲು ನಿರಾಕರಿಸಿದಿರಿ ಎಂದು ಕೇಳಿದೆ. ವಾಸ್ತವ ಏನು ಹೇಳಿ’ ಎಂದು ನಗುತ್ತಾ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

‘ಹೌದು, ಅಯೋಧ್ಯೆ ರಾಮಮಂದಿರಕ್ಕೆ ಹಣ ಕೊಟ್ಟಿಲ್ಲ. ನಮ್ಮ ಊರಿನಲ್ಲಿ ರಾಮಮಂದಿರ ಕಟ್ಟಲು ಹಣ ಕೊಟ್ಟಿದ್ದೇನೆ. ನಾನು ರಾಮನ ವಿರೋಧಿ ಅಲ್ಲ ’ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.