ADVERTISEMENT

ಹಿಂದುಳಿದ ತಾಲ್ಲೂಕುಗಳ ನಿಧಿ ವರ್ಗಾವಣೆ: ಜೆಡಿಎಸ್‌ ಸದಸ್ಯರ ಆಕ್ರೋಶ

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 6:07 IST
Last Updated 24 ಸೆಪ್ಟೆಂಬರ್ 2021, 6:07 IST
ವಿಧಾನಸಭೆಯಲ್ಲಿ ಗುರುವಾರ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.
ವಿಧಾನಸಭೆಯಲ್ಲಿ ಗುರುವಾರ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.   

ಬೆಂಗಳೂರು: ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ತಾಲ್ಲೂಕುಗಳಿಗೆ ಹಂಚಿಕೆ ಮಾಡಿದ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನವನ್ನು ಬೇರೆ ತಾಲ್ಲೂಕುಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಜೆಡಿಎಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಸುರೇಶ್ ಗೌಡ, ‘ರಾಜ್ಯ ಸರ್ಕಾರವು ಹಿಂದುಳಿದ ತಾಲ್ಲೂಕುಗಳಿಗೆ ₹997 ಕೋಟಿ ಹಂಚಿಕೆ ಮಾಡಿತ್ತು. ಈ ಮೊತ್ತವನ್ನು ಬೇರೆ ತಾಲ್ಲೂಕುಗಳಿಗೆ ವರ್ಗಾವಣೆ ಮಾಡಲಾಗಿದೆ. ಎರಡೇ ಹಿಂದುಳಿದ ತಾಲ್ಲೂಕುಗಳು ಇರುವ ಶಿವಮೊಗ್ಗ ಜಿಲ್ಲೆಗೆ ₹145 ಕೋಟಿವರ್ಗಾಯಿಸಲಾಗಿದೆ. ಧಾರವಾಡ ಹಾಗೂ ಕೋಲಾರ ಜಿಲ್ಲೆಗೆ ನಯಾಪೈಸೆ ಅನುದಾನ ನೀಡಿಲ್ಲ. ಮಂಡ್ಯಕ್ಕೆ ₹35 ಕೋಟಿ ನೀಡಲಾಗಿತ್ತು. ಅದರಲ್ಲಿ ₹16 ಕೋಟಿ ಕಡಿತ ಮಾಡಲಾಗಿದೆ. ಇದರಿಂದ ನಂಜುಂಡಪ್ಪ ವರದಿಯ ಆಶಯ ಈಡೇರುತ್ತದೆಯೇ’ ಎಂದು ಪ್ರಶ್ನಿಸಿದರು.

ಇದಕ್ಕೆ ಜೆಡಿಎಸ್‌ನ ಡಾ.ಕೆ. ಅನ್ನದಾನಿ, ಕೆ.ಎಂ.ಶಿವಲಿಂಗೇಗೌಡ ಮತ್ತಿತರರು ಧ್ವನಿಗೂಡಿಸಿದರು.

ADVERTISEMENT

‘ಈ ಪ್ರಶ್ನೆ ಜಲಸಂಪನ್ಮೂಲ ಇಲಾಖೆಯನ್ನು ಉದ್ದೇಶಿಸಿ ಇದೆ. ಜಲಸಂಪನ್ಮೂಲ ಸಚಿವರು ಸದನದಲ್ಲಿ ಇಲ್ಲ. ಮತ್ತೆ ಅವರಿಂದ ಉತ್ತರ ಕೊಡಿಸಲಾಗುವುದು’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು. ಇದಕ್ಕೆ ಸದಸ್ಯರು ಒಪ್ಪಲಿಲ್ಲ. ಯೋಜನಾ ಸಚಿವ ಮುನಿರತ್ನ ಇಲ್ಲೇ ಇದ್ದಾರೆ. ಅವರು ಉತ್ತರ ಕೊಡಲಿ ಎಂದು ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು.

‘ಸಚಿವರು ಈಗಲೇ ಉತ್ತರ ನೀಡಬೇಕು ಎಂದರೆ ಹೇಗೆ. ಅವರಲ್ಲಿ ಮಾಹಿತಿ ಇರಬೇಕಲ್ಲ’ ಎಂದು ಸಭಾಧ್ಯಕ್ಷರು ಹೇಳಿದರು. ‘ಇದರ ಉತ್ತರವನ್ನು ತರಿಸಿಕೊಡುವೆ’ ಎಂದು ಮುನಿರತ್ನ ಹೇಳಿದರು. ಅದಕ್ಕೂ ಜೆಡಿಎಸ್‌ ಸದಸ್ಯರು ಒಪ್ಪಲಿಲ್ಲ.

‘ಅನುದಾನವನ್ನು ಮರು ಹಂಚಿಕೆ ಮಾಡುವ ಮೂಲಕ ತಾರತಮ್ಯ ಮಾಡಲಾಗಿದೆ. ಹೀಗಾದರೆ, ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿ ಸಾಧ್ಯವೇ’ ಎಂದು ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಪ್ರಶ್ನಿಸಿದರು.

‘ಸರ್ಕಾರ ಉತ್ತರ ನೀಡಲು ನಿರ್ಲಕ್ಷ್ಯ ಮಾಡಿದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡುವೆ’ ಎಂದುಸುರೇಶ್ ಗೌಡ ಎಚ್ಚರಿಸಿದರು. ‘ಅನುದಾನ ಹಂಚಿಕೆ ಲೋಪವನ್ನು ಸರಿಪಡಿಸುವೆ’ ಎಂದು ಮುನಿರತ್ನ ಭರವಸೆ ನೀಡಿದರು.

ಅಶಿಸ್ತಿನ ಸದಸ್ಯರ ಪಟ್ಟಿ ಬಿಡುಗಡೆ: ಕಾಗೇರಿ

‘ಸದನದಲ್ಲಿ ಹಲವು ಸದಸ್ಯರು ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ. ಅವರ ಪಟ್ಟಿಯನ್ನು ಮುಂದಿನ ಅಧಿವೇಶನದಲ್ಲಿ ಬಿಡುಗಡೆ ಮಾಡುತ್ತೇನೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಹಿಂದುಳಿದ ತಾಲ್ಲೂಕುಗಳಿಗೆ ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ನ ಭೀಮಾ ನಾಯ್ಕ್‌ ಪದೇ ಪದೇ ಕೇಳಿದರು. ಅದಕ್ಕೆ ಸಭಾಧ್ಯಕ್ಷರು ಅವಕಾಶ ನೀಡಲಿಲ್ಲ. ಭೀಮಾ ನಾಯ್ಕ್ ಮತ್ತೆ ಅವಕಾಶ ಕೇಳಿದರು. ‘ಶೂನ್ಯ ವೇಳೆಯಲ್ಲಿ ಈ ರೀತಿ ಕೇಳುವುದು ಸರಿಯಲ್ಲ. ಹಲವು ಸದಸ್ಯರು ಹೇಳಿದರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ. ಅವರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದೇವೆ’ ಎಂದು ಕಾಗೇರಿ ಹೇಳಿದರು.

‘ಮೂರು ಪಕ್ಷಗಳ ಶಾಸಕಾಂಗ ಪಕ್ಷದ ನಾಯಕರು ಸದಸ್ಯರಿಗೆ ಸದನದ ನಿಯಮಗಳ ಬಗ್ಗೆ ತಿಳಿ ಹೇಳಬೇಕು. ಇಲ್ಲದಿದ್ದರೆ ಸದನ ನಡೆಸುವುದು ಕಷ್ಟವಾಗುತ್ತದೆ’ ಎಂದೂ ಸಭಾಧ್ಯಕ್ಷರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.