ADVERTISEMENT

ಧರ್ಮಸ್ಥಳ | ಅಗತ್ಯ ಇದ್ದರೆ ಉನ್ನತ ತನಿಖೆ: ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 14:42 IST
Last Updated 19 ಜುಲೈ 2025, 14:42 IST
   

ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸುತ್ತಮುತ್ತ ಕಳೆದ ದಶಕಗಳಲ್ಲಿ ನಡೆದ ‘ಅಸಹಜ ಸಾವುಗಳು’ ಎಂಬ ಹಣೆಪಟ್ಟಿ ಹೊತ್ತ ಪ್ರಕರಣಗಳ ಬಗ್ಗೆ ಅಗತ್ಯ ಬಿದ್ದರೆ ಉನ್ನತ ತನಿಖೆ ನಡೆಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಈ ಪ್ರಕರಣಗಳ ಕುರಿತು ದೂರುದಾರನ ದೂರಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಾಥಮಿಕ ತನಿಖೆ ಆರಂಭವಾಗಿದೆ’ ಎಂದರು.

ದೂರಿಗೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಗೆ ವಕೀಲರು ಆಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ್ದೇನೆ. ಅಗತ್ಯಗಳನ್ನು ನೋಡಿಕೊಂಡು ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

ADVERTISEMENT

‘ಪ್ರಾಥಮಿಕ ತನಿಖೆ ನಡೆಯುತ್ತಿರುವ ಮಧ್ಯೆಯೇ ಎಸ್‌ಐಟಿ ತನಿಖೆಗೆ ಒತ್ತಾಯಿಸಿದರೆ, ಪೊಲೀಸ್‌ ಇಲಾಖೆ ಇರುವುದು ಏಕೆ’ ಎಂದೂ ಅವರು ಪ್ರಶ್ನಿಸಿದರು.

ರಾಜ್ಯಸಭಾ ಸ್ಥಾನಕ್ಕೆ ಹೆಗ್ಗಡೆ ರಾಜೀನಾಮೆ ನೀಡಲಿ–ರವಿಕೃಷ್ಣ ರೆಡ್ಡಿ

ಬಳ್ಳಾರಿ: ‘ಸೌಜನ್ಯ ಅತ್ಯಾಚಾರ ಪ್ರಕರಣ ಮತ್ತು ಇತ್ತೀಚೆಗೆ ಕೇಳಿ ಬಂದಿರುವ ಸರಣಿ ಕೊಲೆಗಳ ಆರೋಪಗಳಿಂದಾಗಿ ಧರ್ಮಸ್ಥಳದ ಪಾವಿತ್ರ್ಯ ಹಾಳಾಗಿದೆ. ಇದರ ನೈತಿಕ ಹೊಣೆ ಹೊತ್ತು ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕು‘ ಎಂದು ಕೆಆರ್‌ಎಸ್‌ ಪಕ್ಷದ ಸಂಸ್ಥಾಪಕ ರವಿಕೃಷ್ಣ ರೆಡ್ಡಿ ಆಗ್ರಹಿಸಿದ್ದಾರೆ. 

ಬಳ್ಳಾರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಧರ್ಮಸ್ಥಳದ ವ್ಯಕ್ತಿಯೊಬ್ಬರು ಹಲವು ಅನಾಥ ಶವಗಳ ಅಂತ್ಯಸಂಸ್ಕಾರ ನಡೆಸಿರುವುದಾಗಿ ಹೇಳಿದ್ದಾರೆ. ಅನಾಥ ಹೆಣಗಳನ್ನು ಹೇಗೆಂದರೆ ಹಾಗೆ ಅಂತ್ಯಸಂಸ್ಕಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಿದ್ದರೂ, ಅಂತ್ಯಸಂಸ್ಕಾರ ನಡೆದಿದ್ದು ಯಾಕೆ. ಈ ವಿಷಯ ಬಹಿರಂಗಪಡಿಸಿದ ವ್ಯಕ್ತಿಗೆ ಭದ್ರತೆ ಒದಗಿಸಬೇಕು, ಅವನ ಹೇಳಿಕೆ ಬಗ್ಗೆ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.