ADVERTISEMENT

ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಕೊಡುವ ಅಗತ್ಯವಿಲ್ಲ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 15:47 IST
Last Updated 26 ಆಗಸ್ಟ್ 2025, 15:47 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಬೆಂಗಳೂರು: ‘ಧರ್ಮಸ್ಥಳಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಕೊಡುವ ಅಗತ್ಯವಿಲ್ಲ. ರಾಜ್ಯದ ಎಸ್‌ಐಟಿಯೇ ಸಮರ್ಥವಾಗಿ ತನಿಖೆ ನಡೆಸುತ್ತಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸತ್ಯ ಹೊರಗೆ ಬರಬೇಕು ಎಂದು ಕೋಟ್ಯಂತರ ಭಕ್ತರು ಕಾಯುತ್ತಿದ್ದಾರೆ. ಆರೋಪಿ ಚಿನ್ನಯ್ಯನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಎಸ್‌ಐಟಿಯವರು ವರದಿ ನೀಡಲಿ. ಮುಂದಿನ ಚರ್ಚೆ ಆನಂತರ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಈ ವಿಚಾರದಲ್ಲಿ ಸರ್ಕಾರ ತಪ್ಪೆಸಗಿದೆ ಎಂದು ಬಿಜೆಪಿಯವರು ಯಾವ ಆಧಾರದಲ್ಲಿ ಹೇಳುತ್ತಿದ್ದಾರೆ. ಎಸ್‌ಐಟಿ ರಚಿಸಿದ್ದೇ ತಪ್ಪು ಮತ್ತು ಷಡ್ಯಂತ್ರ ಎಂದು ಹೇಳುತ್ತಿರುವುದು ವಿಪರ್ಯಾಸ. ಮಹೇಶ್ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧ ನಡೆಸಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲ. ಮಾಹಿತಿ ಮತ್ತು ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಸುತ್ತಿದೆಯೇ ಹೊರತು, ಸರ್ಕಾರದ ನಿರ್ದೇಶನದಂತೆ ಅಲ್ಲ’ ಎಂದರು.

‘ಹೈಕಮಾಂಡ್‌ ನೋಡಿಕೊಳ್ಳುತ್ತದೆ’

ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಆರ್‌ಎಸ್‌ಎಸ್‌ ಪ್ರಾರ್ಥನೆ ಹಾಡಿದ್ದರ ಬಗ್ಗೆ ಪ್ರಶ್ನಿಸಿದಾಗ, ‘ಈ ಬಗ್ಗೆ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಪಕ್ಷ ಇದೆ, ಹೈಕಮಾಂಡ್‌ ಇದೆ. ಅದೇ ಎಲ್ಲವನ್ನೂ ನೋಡಿಕೊಳ್ಳಲಿದೆ’ ಎಂದು ಪರಮೇಶ್ವರ ಅವರು ಉತ್ತರಿಸಿದರು.

‘ಹೈಕಮಾಂಡ್‌ ಎಲ್ಲವನ್ನೂ ಗಮನಿಸುತ್ತದೆ. ಯಾರಿಗೆ ಏನು ಸೂಚನೆ ಕೊಡಬೇಕೋ, ಅದನ್ನು ಕೊಡುತ್ತದೆ. ಶಿವಕುಮಾರ್ ಹೇಳಿದ್ದು ತಪ್ಪು ಎಂದು ಅನಿಸಿದರೆ, ಅದನ್ನು ಸಂಬಂಧಪಟ್ಟವರು ಹೇಳುತ್ತಾರೆ. ಶಿವಕುಮಾರ್ ಅವರು ಯಾವ ಸಂದರ್ಭದಲ್ಲಿ ಅದನ್ನು ಹೇಳಿದರು ಅನ್ನೋದನ್ನೂ ಪರಿಗಣಿಸಬೇಕಲ್ಲವೇ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.