ADVERTISEMENT

ಮೋಹನ್‌ ಕಾತರಕಿ ಸೇರಿ ಐದು ಗಣ್ಯರಿಗೆ ಗಡಿನಾಡು ಚೇತನ ಪ್ರಶಸ್ತಿ: ಬೇವಿನಮರದ ಮಾಹಿತಿ

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 16:10 IST
Last Updated 3 ಫೆಬ್ರುವರಿ 2026, 16:10 IST
<div class="paragraphs"><p>ಮೋಹನ್‌ ಕಾತರಕಿ</p></div>

ಮೋಹನ್‌ ಕಾತರಕಿ

   

ಬೆಂಗಳೂರು: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ನೀಡುವ ಗಡಿನಾಡು ಚೇತನ ಪ್ರಶಸ್ತಿಗೆ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮೋಹನ್‌ ಕಾತರಕಿ ಸೇರಿದಂತೆ ಐವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯದೇವಿ ತಾಯಿ ಲಿಗಾಡೆ ಪ್ರಶಸ್ತಿಗೆ ಮೋಹನ್‌ ಕಾತರಕಿ, ಚನ್ನಬಸವ ಪಟ್ಟದ್ದೇವರ ಪ್ರಶಸ್ತಿಗೆ ರಾಯಚೂರಿನ ಹೋರಾಟಗಾರ ಮಲ್ಲನಗೌಡ ಇಂದುಪುರ, ಫ.ಗು.ಹಳಕಟ್ಟಿ ಪ್ರಶಸ್ತಿಗೆ ವಿಜಯಪುರದ ನಾಗೇಶ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ADVERTISEMENT

ಕಯ್ಯಾರ ಕಿಞ್ಞಣ್ಣ ರೈ  ಪ್ರಶಸ್ತಿಗೆ ಕಾಸರಗೋಡಿನ ನಿವೃತ್ತ ಶಿಕ್ಷಕ ಎನ್‌.ಚನಿಯಪ್ಪ ನಾಯ್ಕ್, ಬೆಳವಡಿ ಮಲ್ಲಮ್ಮ  ಪ್ರಶಸ್ತಿಗೆ ಮಸ್ಕತ್‌ನಲ್ಲಿ ಕನ್ನಡ ಸಂಘ ನಡೆಸುತ್ತಿರುವ ಶಾಲೆಯಲ್ಲಿ ಕನ್ನಡ ಪಾಠ ಮಾಡುತ್ತಿರುವ ಶಿಕ್ಷಕಿಯರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ₹1 ಲಕ್ಷ, ಫಲಕ ಒಳಗೊಂಡಿದೆ ಎಂದು ತಿಳಿಸಿದರು.

ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿರುವ ಮಲಯಾಳ ಭಾಷಾ ಮಸೂದೆಯನ್ನು ಕೇರಳ ವಿಧಾನಸಭೆಯಲ್ಲಿ ಈಚೆಗೆ ಅಂಗೀಕರಿಸಲಾಗಿದೆ. ಆದರೆ, ಇದಕ್ಕೆ ಒಪ್ಪಿಗೆ ನೀಡದಂತೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಸಂವಿಧಾನದ ಪ್ರಕಾರ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು. ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಇದನ್ನು ಕೇರಳ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದರು.

ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್‌ ಮತ್ತೀಹಳ್ಳಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಾಗೇಶ ಕುಲಕರ್ಣಿ
ಮಲ್ಲನಗೌಡ ಇಂದುಪುರ
ಎನ್‌.ಚನಿಯಪ್ಪ ನಾಯ್ಕ

ಕನ್ನಡ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ

ಗಡಿ ಭಾಗದಲ್ಲಿ ಇರುವ ಕನ್ನಡ ಶಾಲೆಗಳಿಗೆ 135 ಮಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಸೋಮಣ್ಣ ಬೇವಿನಮರದ ತಿಳಿಸಿದರು. ಕೇರಳ ಗೋವಾ ಮಹಾರಾಷ್ಟ್ರ ತಮಿಳುನಾಡು ಸೇರಿದಂತೆ ಆರು ರಾಜ್ಯಗಳೊಂದಿಗೆ ಕರ್ನಾಟಕದ ಗಡಿಗಳಿವೆ. ಗಡಿ ಭಾಗದಲ್ಲಿ ಇರುವ ಕನ್ನಡಿಗರು ಆಯಾ ಭಾಷೆಗಳಿಗೆ ಗೌರವ ನೀಡುತ್ತಿದ್ದಾರೆ. ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಹಾಗೂ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಕೆಲಸವನ್ನು ಪ್ರಾಧಿಕಾರ ಮಾಡುತ್ತಿದೆ ಎಂದು ಹೇಳಿದರು. ಗೋವಾದಲ್ಲಿ 12 ಸಾವಿರ ಚದರ ಅಡಿ ಭಾಗದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು. ಅಕ್ಕಲಕೋಟೆಯಲ್ಲಿ ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿ ಹಾಗೂ ಕೇರಳದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಹೆಸರಿನಲ್ಲಿ ಕನ್ನಡ ಭವನ ನಿರ್ಮಿಸಲಾಗಿದೆ. ಸದ್ಯದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದರು. ಕಳೆದ ವರ್ಷ ಪ್ರಾಧಿಕಾರಕ್ಕೆ ಬಜೆಟ್‌ನಲ್ಲಿ ₹15 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ₹ 100 ಕೋಟಿ ನೀಡುವಂತೆ ಕೇಳಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.