
ಕಾಂಗ್ರೆಸ್ ಮತ್ತು ಬಿಜೆಪಿ
ಬೆಂಗಳೂರು: ‘ಹಿಂಸಾ ಪ್ರಚೋದಕ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿ ಅವರ ಚಿತ್ರವನ್ನು ದುರುಪಯೋಗ ಮಾಡಿಕೊಂಡಿರುವ ಬಿಜೆಪಿ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅವರು ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಬಿಜೆಪಿ ನೀಡಿದ್ದ ಜಾಹೀರಾತಿನಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಾಂಧೀಜಿ ಅವರು ದೊಣ್ಣೆಯಿಂದ ಹೊಡೆಯಲು ಮುಂದಾದ ಚಿತ್ರವಿತ್ತು.
‘ಅಹಿಂಸೆಯ ಪ್ರತೀಕವಾಗಿರುವ ಗಾಂಧೀಜಿ ಅವರನ್ನು, ಶುಕ್ರವಾರ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಈ ಜಾಹೀರಾತಿನಲ್ಲಿ ಹಿಂಸಾರೂಪದಲ್ಲಿ ಚಿತ್ರಿಸಲಾಗಿದೆ. ರಾಷ್ಟ್ರಪಿತ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಲ್ಪಡುವ ಮಹಾತ್ಮ ಗಾಂಧಿ ಅವರ ಭಾವಚಿತ್ರವನ್ನು ಹಿಂಸಾತ್ಮಕ ಕೃತ್ಯಗಳು/ಹಿಂಸಾತ್ಮಕ ಸಂದೇಶಗಳು/ ಹಿಂಸೆಗೆ ಪ್ರಚೋದಿಸುವ ವಿಷಯಗಳೊಂದಿಗೆ ತಪ್ಪಾಗಿ ಬಿಂಬಿಸಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಈ ಜಾಹೀರಾತಿನ ಕಾರಣದಿಂದ ಗಾಂಧೀಜಿ ಅವರ ಪರಂಪರೆಗೆ ಧಕ್ಕೆಯಾಗಿದೆ. ಸಾರ್ವಜನಿಕರ ಭಾವನೆಗಳಿಗೆ ಆಘಾತವಾಗಿದೆ. ಶಾಂತಿ ಮತ್ತು ಸೌಹಾರ್ದಕ್ಕೆ ಮಾರಕವಾಗಿದೆ. ಈ ಜಾಹೀರಾತನ್ನು ನೀಡಿರುವ ಬಿಜೆಪಿ ರಾಜ್ಯ ಘಟಕದ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ 196 (ದ್ವೇಷ ಪ್ರಚೋದನೆ), 197 (ರಾಷ್ಟ್ರೀಯ ಏಕತೆಗೆ ಧಕ್ಕೆ), 299 (ಸಾರ್ವಜನಿಕ ಭಾವನೆಗಳಿಗೆ ಧಕ್ಕೆ), 353 (ಶಾಂತಿಗೆ ಭಂಗ) ಮತ್ತು 356 (ರಾಷ್ಟ್ರೀಯ ವ್ಯಕ್ತಿತ್ವದ ಗೌರವಕ್ಕೆ ಧಕ್ಕೆ) ಸೆಕ್ಷನ್‌ಗಳ ಅಡಿಯಲ್ಲಿ ಬಿಜೆಪಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕು’ ಎಂದು ಕೋರಿದ್ದಾರೆ.
‘ಸತ್ಯ ಅಹಿಂಸೆ ಸಹಿಷ್ಣುತೆಯನ್ನೇ ಉಸಿರಾಡಿದ ಮಹಾತ್ಮಾ ಗಾಂಧಿ ಅವರನ್ನು ಕೊಂದ ಸಂಸ್ಕೃತಿಯವರ ಮಾನಸಿಕ ಕ್ರೌರ್ಯ ಮುಂದುವರೆಯುತ್ತಲೇ ಇದೆ. ಗಾಂಧೀಜಿಯನ್ನು ಅವಮಾನಿಸುವ ಹೀಯಾಳಿಸುವ ಬಿಜೆಪಿಯು ತನ್ನ ಹೀನ ಮನಸ್ಥಿಯನ್ನೇ ಪತ್ರಿಕೆಗಳ ಮೂಲಕ ಜಾಹೀರಾತುಗಳಲ್ಲಿ ತೋರಿಸಿಕೊಂಡಿದೆ’ ಎಂದು ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಅವರು ಟೀಕಿಸಿದ್ದಾರೆ. ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು ‘ಆರ್‌ಎಸ್‌ಎಸ್ ಬಳಸುವ ಲಾಠಿ ಹಿಂಸೆಯ ಸೂಚಕ. ಗಾಂಧೀಜಿ ಅವರ ಊರುಗೋಲು ಕೇವಲ ಆಸರೆಯಲ್ಲ. ಬದಲಿಗೆ ಬಲ ಪರಿಶ್ರಮ ಮತ್ತು ಛಲದ ಸಂಕೇತ. ಗಾಂಧೀಜಿ ಅವರ ತತ್ವಾದರ್ಶಗಳ ಮೇಲೆ ಬಿಜೆಪಿ ಮತ್ತು ಸಂಘಪರಿವಾರವು ನಿರಂತರ ದಾಳಿ ಮಾಡುತ್ತಲೇ ಇವೆ’ ಎಂದಿದ್ದಾರೆ.
‘ಅಂದು ಗೋಡ್ಸೆಯಿಂದ ಗಾಂಧಿ ಹತ್ಯೆ. ಇಂದು ಗೋಡ್ಸೆವಾದಿಗಳಿಂದ ಗಾಂಧಿವಾದದ ಹತ್ಯೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಜಗತ್ತಿಗೆ ಅಹಿಂಸೆಯ ಸಂದೇಶವನ್ನು ಪ್ರಬಲವಾಗಿ ನೀಡಿದ್ದವರು ಮಹಾತ್ಮ ಗಾಂಧಿ. ಅವರು ಎಂದಿಗೂ ತಮ್ಮ ಕೈಲಿದ್ದ ಕೋಲನ್ನು ಎತ್ತಿ ಹಲ್ಲೆಗೆ ಬಳಸಿದವರಲ್ಲ. ಆರ್‌ಎಸ್‌ಎಸ್ ಮತ್ತು ಬಿಜೆಪಿಯು ಮಹಾತ್ಮ ಗಾಂಧಿ ಅವರನ್ನು ಹಿಂಸೆಯ ಪ್ರತಿಪಾದಕರನ್ನಾಗಿ ಚಿತ್ರಿಸಿ ಜಾಹೀರಾತು ನೀಡುವ ಮೂಲಕ ಮತ್ತೊಮ್ಮೆ ಅವರನ್ನು ಅವಮಾನಿಸಿದೆ’ ಎಂದಿದ್ದಾರೆ. ‘ಮಹಾತ್ಮ ಗಾಂಧಿಯವರನ್ನು ದೈಹಿಕವಾಗಿ ಮುಗಿಸಿಹಾಕಿದ್ದಲ್ಲದೆ ಈಗ ಅವರ ಸಿದ್ದಾಂತವನ್ನೂ ಮುಗಿಸಿಹಾಕುವ ಕೆಲಸಕ್ಕೆ ಕೈ ಹಾಕಿರುವ ಬಿಜೆಪಿಯಿಂದ ಗಾಂಧೀಜಿಯನ್ನು ಮತ್ತು ಅವರ ತತ್ವಗಳನ್ನು ನಾವು ರಕ್ಷಿಸಬೇಕಿದೆ’ ಎಂದು ಅವರು ಕರೆ ನೀಡಿದ್ದಾರೆ.
‘ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯವರ ಕೈಗೆ ಕೋಲು ಬಂದಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ. 'ವಿಬಿ ಜಿ ರಾಮ್ ಜಿ ಯೋಜನೆಗೆ ಸಂಬಂಧಿಸಿದಂತೆ ನಾವು ಪಕ್ಷದ ವತಿಯಿಂದ ಜಾಹೀರಾತು ನೀಡಿದ್ದೇವೆ. ಕಾಂಗ್ರೆಸ್‌ನಂತೆ ನಾವು ಸರ್ಕಾರದ ಹಣದಿಂದ ಜಾಹೀರಾತು ಪ್ರಕಟಿಸಿಲ್ಲ' ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ರಾಜ್ಯ ಸರ್ಕಾರ ಮಹಾತ್ಮ ಗಾಂಧೀಜಿ ಆಶಯಕ್ಕೆ ವಿರುದ್ಧವಾಗಿ ಮದ್ಯದಂಗಡಿಗಳನ್ನು ತೆರೆಯುತ್ತಿದೆ. ಗೋಹತ್ಯೆ ನಿಲ್ಲಿಸಬೇಕು ಎಂದು ಗಾಂಧೀಜಿ ಹೇಳಿದ್ದರೆ ಕಾಂಗ್ರೆಸ್ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿತ್ತು. ರಘುಪತಿ ರಾಘವ ರಾಜಾರಾಂ ಎಂದು ಹೇಳಿದ್ದ ಗಾಂಧೀಜಿಯವರ ಹೆಸರನ್ನು ಯೋಜನೆಗಳಿಗೆ ಇರಿಸುವ ಬದಲು ಇಂದಿರಾಗಾಂಧಿ ರಾಜೀವ್ ಗಾಂಧಿ ಹೆಸರನ್ನು ಇಟ್ಟಿದ್ದಾರೆ. ಇವರೆಲ್ಲ ನಕಲಿ ಗಾಂಧಿಗಳು’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.