ಕರ್ನಾಟಕ ಹೈಕೋರ್ಟ್
ಬೆಂಗಳೂರು: ‘ಮೋಹನದಾಸ್ ಕರಮಚಂದ ಗಾಂಧಿ ಅವರ ಆತ್ಮಕಥೆಯ ಸಂಪುಟ–2ರ ಬಗ್ಗೆಗಿನ ದಸ್ತಾವೇಜುಗಳು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಳಿ 51 ಪೆಟ್ಟಿಗೆಗಳಲ್ಲಿ ಭದ್ರವಾಗಿದ್ದು ಅವುಗಳನ್ನು ಪತ್ತೆಹಚ್ಚಲು ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಪುನರಾವಲೋಕನ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ, ‘ಜಾಗೃತ ಕರ್ನಾಟಕ–ಜಾಗೃತ ಭಾರತ’ ಸಂಘಟನೆ ಅಧ್ಯಕ್ಷ ಕೆ.ಎನ್.ಮಂಜುನಾಥ್ ಸಲ್ಲಿಸಿದ್ದ ಪುನರಾವಲೋಕನ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ಈ ಅರ್ಜಿಯಲ್ಲಿ ಯಾವುದೇ ಹುರಳಿಲ್ಲ’ ಎಂಬ ಅಭಿಪ್ರಾಯದೊಂದಿಗೆ ವಜಾಗೊಳಿಸಿ ಆದೇಶಿಸಿದೆ.
ಸ್ವತಃ ವಾದ ಮಂಡಿಸಿದ ಅರ್ಜಿದಾರ ಕೆ.ಎನ್.ಮಂಜುನಾಥ್ ಮತ್ತು ಪ್ರತಿವಾದಿ ಕೇಂದ್ರ ಸರ್ಕಾರದ ಪರ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್ ಅವರ ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಒಂದೊಮ್ಮೆ ಅರ್ಜಿದಾರರು ಇತಿಹಾಸದಲ್ಲಿ ಸಂಶೋಧನೆ ಮಾಡುವ ಯಾವುದೇ ಪಾಂಡಿತ್ಯಪೂರ್ಣ ಕೈಂಕರ್ಯಕ್ಕೆ ಮುಂದಾದರೆ ಅದಕ್ಕೆ ಯಾವುದೇ ಅಡಚಣೆ ಇರುವುದಿಲ್ಲ. ಆದಾಗ್ಯೂ, ಅರ್ಜಿದಾರರ ಮನವಿ ಅಸ್ಪಷ್ಟವಾಗಿದ್ದು ಅದಕ್ಕೀಗ ಯಾವುದೇ ಪರಿಹಾರ ನೀಡಲಾಗದು’ ಎಂದು ತಿಳಿಸಿದೆ.
‘ಅರ್ಜಿದಾರರು ಭಾರತದ ಇತಿಹಾಸದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ತಮ್ಮ ಕೋರಿಕೆಯ ನಿಟ್ಟಿನಲ್ಲಿ ವಿವಿಧ ಅಧಿಕಾರಿಗಳಿಗೆ ಹಲವಾರು ಪತ್ರಗಳನ್ನೂ ಬರೆದಿರುವುದು ವೇದ್ಯವಾಗಿದೆ. ಅರ್ಜಿದಾರರ ಪ್ರಕಾರ ಇತಿಹಾಸದಲ್ಲಿನ ಅಂತರಗಳ ಬಗ್ಗೆ ಉತ್ತರಿಸಬೇಕಾಗಿದೆ ಎಂಬ ಮನವಿಯನ್ನು ಪರಿಗಣಿಸಿದಾಗ; ಈ ಕುರಿತಂತೆ ಯಾವುದೇ ಸ್ಪಷ್ಟ ಆದೇಶ ಹೊರಡಿಸಲು ಆಗದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿದೆ.
ಏನಿದು ಅರ್ಜಿ?:
‘ಗಾಂಧೀಜಿಯವರ ಆತ್ಮಕಥೆಯ ‘ನನ್ನ ಸತ್ಯಾನ್ವೇಷಣೆ’ (ಮೈ ಎಕ್ಸ್‌ಪೆರಿಮೆಂಟ್ಸ್ ವಿಥ್ ಟ್ರುಥ್) ಸಂಪುಟ-2ರ ಮೇಲೆ ಬೆಳಕು ಚೆಲ್ಲಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸ್ಪೀಕರ್ ಓಂ ಬಿರ್ಲಾ, ರಾಜ್ಯ ಶಿಕ್ಷಣ ಇಲಾಖೆ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್‌ಗೆ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಈ ಮೊದಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಮನವಿಯನ್ನು ಕಳೆದ ವರ್ಷ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿತ್ತು. ಅರ್ಜಿದಾರರು ಪುನಃ ಆದೇಶ ಪುನರಾವಲೋಕನ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
‘ಗಾಂಧೀಜಿಯವರ ಸದ್ಯದ ಆತ್ಮಚರಿತ್ರೆ 1925ರಲ್ಲಿ ಪ್ರಕಟವಾಗಿದ್ದು ಅದರಲ್ಲಿ ಕೇವಲ ಅವರ ಬಾಲ್ಯ, ಯೌವ್ವನ ಮತ್ತು ಆಫ್ರಿಕಾ ಜೀವನದ ಭಾಗ ಮಾತ್ರ ಇದೆ. ತದನಂತರ ಅವರು ಬರೆದಿರುವ ಸಂಪುಟ–2ರ ಭಾಗವನ್ನು ಸಂಗ್ರಹಾಲಯದಿಂದ ತೆರವುಗೊಳಿಸಲಾಗಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.