ಬೆಂಗಳೂರು: ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ‘ಗಾಂಧಿ ಜಯಂತಿ’ಯನ್ನು ಆಚರಿಸಲು ‘ಗಾಂಧಿ ಭಾರತ’ ಶತಮಾನೋತ್ಸವ ಸಮಿತಿ ನಿರ್ಧರಿಸಿದೆ.
1924ರಲ್ಲಿ ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ತುಂಬಿದ ನೆನಪಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಸಮಿತಿಯ ಸಭೆಯು ವಿಧಾನಸೌಧದಲ್ಲಿ ಶನಿವಾರ ನಡೆಯಿತು.
ಗಾಂಧಿ ಜ್ಯೋತಿ ಯಾತ್ರೆ, ಧ್ಯಾನಮಗ್ನ ಪ್ರತಿಮೆಯೊಂದಿಗೆ ಗಾಂಧಿ ಸ್ತಂಭ ಸ್ಥಾಪನೆ, ಶಾಲೆ- ಕಾಲೇಜುಗಳಲ್ಲಿ ಗಾಂಧೀಜಿಯ ಧ್ಯಾನಚಿತ್ರ ಮತ್ತು ಏಳು ಸಾಮಾಜಿಕ ಪಾಪಗಳ ಸಂದೇಶ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅಲ್ಲದೆ, ನಾಟಕಗಳು ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಗಳು ಡಿಸೆಂಬರ್ ಅಂತ್ಯದವರೆಗೆ ಮುಂದುವರಿಯಲಿವೆ.
ಗಾಂಧೀಜಿಯ ಏಳು ಸಾಮಾಜಿಕ ಪಾಪಗಳು, ಭಾರತ ಸಂವಿಧಾನದ ಪ್ರಸ್ತಾವನೆ ಹಾಗೂ ಗಾಂಧೀಜಿಯ ಚಿತ್ರವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ತೆಗೆದುಕೊಂಡಿರುವ ಈ ಕ್ರಮಕ್ಕೆ ಸಭೆ ಮೆಚ್ಚುಗೆ ವ್ಯಕ್ತಪಡಿಸಿತು.
ಸಮಿತಿಯ ಗೌರವಾಧ್ಯಕ್ಷ ವೀರಪ್ಪ ಮೊಯಿಲಿ, ಸಂಚಾಲಕ ಬಿ.ಎಲ್. ಶಂಕರ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ಡಿ.ಆರ್. ಪಾಟೀಲ್, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.